ನೇಪಾಳ ಪರಧಾನಿ ರಾಜೀನಾಮೆ ಸೇರಿದಂತೆ ಕಳೆದ ಮೂರೇ ದಿನದಲ್ಲಿ ಮೂವರು ಪ್ರಧಾನಿಗಳು ಸ್ಥಾನ ಕಳದೆುಕೊಂಡಿದ್ದಾರೆ. ಹ್ಯಾಟ್ರಿಕ್ ಪ್ರಧಾನಿಗಳ ರಾಜೀನಾಮೆ ಹಿಂದಿನ ಕಾರಣವೇನು?

ಜಾಗತಿಕ ರಾಜಕಾರಣ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಕಳೆದ 3 ದಿನಗಳಲ್ಲಿ 3 ಪ್ರಧಾನಿಗಳು ಪಟ್ಟ ಕಳೆದುಕೊಂಡಿದ್ದಾರೆ. ಕಳೆದ ಭಾನುವಾರ ಜಪಾನ್‌ ಪ್ರಧಾನಿ ಶಿಗೆರೋ ಇಶಿಬಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಸೋಮವಾರದಂದು ಫ್ರಾನ್ಸ್‌ ಪ್ರಧಾನಿ ಫ್ರಾಂಕೋಯಿಸ್ ಬೈರೊ ವಿಶ್ವಾಸ ಕಳೆದುಕೊಂಡರು, ಮಂಗಳವಾರ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಬೇಕಾಯ್ತು.

ಜಪಾನ್‌: ಇಶಿಬಾ ಪದತ್ಯಾಗಕ್ಕೆ ಕಾರಣವಾದ ಹಣದುಬ್ಬರ

ಪ್ರಧಾನಿ ಸ್ಥಾನ ಆಲಂಕರಿಸಿ ಇನ್ನೂ ಒಂದು ವರ್ಷ ಕಳೆದಿಲ್ಲ, ಆದ್ರೆ 68 ವರ್ಷ ಪ್ರಾಯದ ಜಪಾನ್‌ ಪ್ರಧಾನಿ ಶಿಗೆರೋ ಇಶಿಬಾಗೆ ಅಗ್ನಿಪರೀಕ್ಷೆಗಳ ಮೇಲೆ ಅಗ್ನಿಪರೀಕ್ಷೆಗಳು ಎದುರಾದವು. ಅವರ ನೇತೃತ್ವದಲ್ಲಿ ಎದುರಿಸಿದ - ಮೇಲ್ಮನೆ & ಕೆಳಮನೆ- ಎರಡೂ ಚುನಾವಣೆಗಳಲ್ಲಿ ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷವು (LDP) ಹೀನಾಯ ಸೋಲನ್ನನುಭವಿಸಿದೆ. ಎರಡೂ ಕಡೆ ಮೆಜಾರಿಟಿಯನ್ನು ಕಳೆದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ಪಕ್ಷದೊಳಗೆ ಭಾರೀ ಅಸಮಾಧಾನ ಹೊಗೆಯಾಡುತಿದ್ದು, ಇಶಿಬಾ ಕೆಳಗಿಳಿಯಲು ಒತ್ತಡ ಹೆಚ್ಚಾಗಿತ್ತು. ಜಗತ್ತಿನ ನಾಲ್ನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಜಪಾನಿನ ಆರ್ಥಿಕ ಸ್ಥಿತಿಗತಿಯೂ ಕೂಡಾ ಕಳವಳಕಾರಿಯಾಗಿದ್ದು, ಹಲವು ಸವಾಲುಗಳನ್ನು ಎದುರಿಸುತ್ತಿದೆ. ವಿಶೇಷವಾಗಿ ಹಣದುಬ್ಬರ, ಬೆಲೆಯೇರಿಕೆ ಹಾಗೂ ಅಮೆರಿಕಾದ ಜೊತೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ಜನಾಕ್ರೋಶ ಇದೆ. ಟ್ರಂಪ್ ಸುಂಕದ ಬರೆಯಿಂದ ತಪ್ಪಿಸಿಕೊಳ್ಳಲು, ಜಪಾನ್‌ ಅಮೆರಿಕಾದಲ್ಲಿ 550 ಬಿಲಿಯನ್ ಡಾಲರ್ ಹೂಡಿಕೆ ಮಾಡೋದಾಗಿ ಇಶಿಬಾ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಾರೆ.

'ಸಾಲ'ದಿಂದ 'ವಿಶ್ವಾಸ' ಕಳಕೊಂಡ ಪ್ರಧಾನಿ ಫ್ರಾಂಕೋಯಿಸ್ ಬೈರೊ:

ಐರೋಪ್ಯ ರಾಷ್ಟ್ರ ಫ್ರಾನ್ಸ್‌ನಲ್ಲೂ ರಾಜಕೀಯ ಸ್ಥಿತಿಗತಿ ಭಿನ್ನವಾಗಿಲ್ಲ. ಕಳೆದ 14 ತಿಂಗಳಲ್ಲಿ 3 ಪ್ರಧಾನಿಗಳನ್ನು ಫ್ರಾನ್ಸ್‌ ಕಂಡಿದೆ. ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್‌ ನೇಮಿಸಿದ ಪ್ರಧಾನಿಗಳು ಒಬ್ಬರ ಹಿಂದೊಬ್ಬರು 'ವಿಶ್ವಾಸ ಮತ' ಗಳಿಸಲಾಗದೇ ಪದತ್ಯಾಗ ಮಾಡುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮೈಕಲ್ ಬಾರ್ನಿಯರ್ ವಿಶ್ವಾಸಮತ ಕಳೆದುಕೊಂಡಿದ್ದರು. ಕೇವಲ 9 ತಿಂಗಳು ಪ್ರಧಾನಿಯಾಗಿದ್ದ 74 ವರ್ಷ ಪ್ರಾಯದ ಫ್ರಾಂಕೋಯಿಸ್ ಬೈರೊ ಸಂಸತ್ತಿನಲ್ಲಿ 'ವಿಶ್ವಾಸ' ಕಳಕೊಂಡು ರಾಜೀನಾಮೆ ಸಲ್ಲಿಸಿದ್ದಾರೆ.

ನೇಪಾಳ ಮಾಜಿ ಪ್ರಧಾನಿ ಪತ್ನಿಯನ್ನೇ ಜೀವಂತ ಸುಟ್ಟ ಪ್ರತಿಭಟನಕಾರರು; ವರದಿ

ಫ್ರಾನ್ಸ್‌ ಆರ್ಥಿಕತೆ ಕೂಡಾ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ದೇಶದ ಸಾಲ ಅಲ್ಲಿನ ಆಡಳಿತಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಜಿಡಿಪಿಯ 114% ರಷ್ಟು ಸಾಲಮಾಡಿಕೊಂಡಿರುವ ಫ್ರಾನ್ಸ್‌, ಆರ್ಥಿಕತೆಯನ್ನು ಸುಭದ್ರಪಡಿಸಲು ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಅದ್ಯಾವುದೂ ಫಲ ನೀಡುತ್ತಿಲ್ಲ, ಹಾಗೂ ರಾಜಕೀಯ ಅಸ್ಥಿರತೆಗೆ ಕಾರಣವಾಗುತ್ತಿದೆ. ಪ್ರಧಾನಿಗಳು ಯಾರೇ ಆಗಲಿ, ಅವರ ಮುಂದೆ ಬೆಟ್ಟದಷ್ಟು 'ಬಜೆಟ್‌' ಸವಾಲುಗಳಿವೆ. ಫ್ರಾಂಕೋಯಿಸ್ ಬೈರೊ ಪ್ರಸ್ತಾಪಿಸಿದ ಕ್ರಮಗಳು ಕೂಡಾ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ವಿಶ್ವಾಸ ಮತಯಾಚನೆ ವೇಳೆ -'ನೀವು ಸರ್ಕಾರವನ್ನು ಕಿತ್ತೆಸೆಯಬಹುದು, ಆದ್ರೆ ವಾಸ್ತವವನ್ನು ಅಳಿಸುವಂತಿಲ್ಲ...'- ಎಂಬ ಫ್ರಾಂಕೋಯಿಸ್ ಬೈರೊರವರ ಹೇಳಿಕೆಯು ಮಾತ್ರ ಫ್ರಾನ್ಸ್‌ನ ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿವೆ.

ಸೋಶಿಯಲ್ ಮೀಡಿಯಾ ಬ್ಯಾನ್‌ ಮಾಡಿ ಕೈ ಸುಟ್ಟುಕೊಂಡ ಓಲಿ

ಹಿಮಾಲಯ ತಪ್ಪಲಿನ ಪುಟ್ಟ ದೇಶ ನೇಪಾಳ ಉದ್ವಿಗ್ನವಾಗಿದೆ. 26 ಸೋಶಿಯಲ್ ಮೀಡಿಯಾ ಸೈಟ್‌ಗಳ ಬ್ಯಾನ್‌ನಿಂದ ಆರಂಭವಾದ ಕಿಚ್ಚು ಈಗ ದೇಶಾದ್ಯಂತ ಹಬ್ಬಿದೆ. ನಿರುದ್ಯೋಗ- ಭ್ರಷ್ಟಾಚಾರದ ವಿರುದ್ಧದ ಸಿಟ್ಟು 'ಸೋಶಿಯಲ್ ಮೀಡಿಯಾ ಬ್ಯಾನ್‌' ನೆಪದಲ್ಲಿ ಜ್ವಾಲಾಮುಖಿಯಾಗಿ ಸ್ಫೋಟಿಸಿದೆ.

ನೇಪಾಳ ಪ್ರತಿಭಟನೆ ಬೆನ್ನಲ್ಲೇ ಭಾರತ ಅಲರ್ಟ್, ಭಾರತೀಯರಿಗೆ ಮಾರ್ಗಸೂಚಿ ಪ್ರಕಟ

ಯುವಜನರ ಪ್ರತಿಭಟನೆ ಹತ್ತಿಕ್ಕಲು ನಡೆಸಲಾದ ಪೊಲೀಸ್‌ ಫೈರಿಂಗ್‌ನಲ್ಲಿ 19 ಪ್ರತಿಭಟನಾಕಾರರ ಸಾವು ಇಡೀ ದೇಶವನ್ನೇ ಅಲುಗಾಡಿಸಿದೆ. ಪ್ರತಿಭಟನಾಕಾರರು ಸರ್ಕಾರದ ಮುಖ್ಯಸ್ಥರು, ಸಚಿವರು, ಅಧಿಕಾರಿಗಳು, ರಾಜಕಾರಣಿಗಳನ್ನು ಹುಡುಕಿ ಹುಡುಕಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೇಪಾಳದಲ್ಲಿ ವ್ಯವಸ್ಥೆಯ ವಿರುದ್ಧ ಜನ ದಂಗೆಯೆದ್ದಿದ್ದು, ಪಕ್ಷುಬ್ಧತೆ ಮನೆಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ, ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಪದತ್ಯಾಗ ಮಾಡಿದ್ದಾರೆ.