* ಚೀನಾದಲ್ಲಿ ಮಕ್ಕಳ ಹೊಂದುವ ದಂಪತಿಗೆ ಸಾಲದ ಆಫರ್!- ಜಿಲಿನ್ ಪ್ರಾಂತ್ಯದಲ್ಲಿ ಅಗ್ಗದ ಬಡ್ಡಿಯಲ್ಲಿ 23 ಲಕ್ಷ ರು. ಸಾಲ ಸೌಲಭ್ಯ* 2ಕ್ಕಿಂತ ಹೆಚ್ಚು ಮಕ್ಕಳಾದರೆ ವ್ಯಾಪಾರದಲ್ಲಿ ರಿಯಾಯ್ತಿ* ಯುವಜನರ ಅಭಾವ ದೇಶವ ಕಾಡುತ್ತಿದೆ.
ಬೀಜಿಂಗ್ (ಡಿ. 25) ಚೀನಾ (China) ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. ಆದರೆ ಸರ್ಕಾರದ ಕಠಿಣ ಕ್ರಮಗಳ ಕಾರಣ ದೇಶದಲಿ ಜನಸಂಖ್ಯೆಯ (Population) ಪ್ರಮಾಣ ಕುಸಿಯುತ್ತಿದೆ. ಹೀಗಾಗಿ ಜಿಲಿನ್ ಪ್ರಾಂತ್ಯ ಮಕ್ಕಳನ್ನು ಹೊಂದುವ ದಂಪತಿಗೆ (Couple) ಸಾಲ (Loan) ಸೌಲಭ್ಯ ನೀಡಲು ಸರ್ಕಾರ ಆಸಕ್ತಿ ತೋರಿದೆ.
ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಇತರ ಎಲ್ಲಾ ಪ್ರಾಂತ್ಯಗಳಿಗಿಂತ ವೇಗವಾಗಿ ಕುಸಿಯುತ್ತಿದೆ. ಹೀಗಾಗಿ ಇಲ್ಲಿ ಜನಸಂಖ್ಯೆಯನ್ನು ಹೆಚ್ಚಳ ಮಾಡಲು ದಂಪತಿಗೆ ಸುಮಾರು 23.5 ಲಕ್ಷ ರು. ಸಾಲ ಸೌಲಭ್ಯ ನೀಡಲು ಆಸಕ್ತಿ ತೋರಿದೆ.
ಸರ್ಕಾರ ಈ ಯೋಜನೆಯನ್ನು ಯಾವ ರೀತಿ ಜಾರಿಗೆ ತರುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿಲ್ಲ. ಆದರೆ ದಂಪತಿ ಹೊಂದುವ ಮಕ್ಕಳ ಆಧಾರದ ಮೇಲೆ ವಿವಿಧ ಬಡ್ಡಿದರಗಳಲ್ಲಿ ಬ್ಯಾಂಕುಗಳಿಂದ ಸಾಲ ಒದಗಿಸಬಹುದು ಎಂದು ಹೇಳಲಾಗಿದೆ. ಜನಸಂಖ್ಯೆ ಹೆಚ್ಚಳವನ್ನು ಪ್ರೋತ್ಸಾಹಿಸಲು ಈಗಾಗಲೇ ಜನಸಂಖ್ಯೆಗೆ ಸಂಬಂಧಿಸಿದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ತಾಯ್ತನದ ರಜೆಯ ಅವಧಿಯನ್ನು ಹೆಚ್ಚಳ ಮಾಡಲಾಗಿದೆ.
ಈ ಕೊಡುಗೆ ಕೇವಲ ಜಿಲಿನ್ ಪ್ರಾಂತ್ಯದವರಿಗೆ ಮಾತ್ರ ಅನ್ವಯವಾಗುವುದಿಲ್ಲ. ಹೊರಗಿನಿಂದ ಬಂದು ಜಿಲಿನ್‌ನಲ್ಲಿ ನೆಲೆಸಸುವ, ಜನಿಸುವ ಮಕ್ಕಳನ್ನು ಜಿಲಿನ್ ಪ್ರಾಂತ್ಯದಲ್ಲೇ ನೋಂದಣಿ ಮಾಡಿಸುವವರಿಗೂ ಈ ಸೌಲಭ್ಯ ಅನ್ವಯವಾಗುತ್ತದೆ. ಎರಡು ಅಥವಾ ಮೂರು ಮಕ್ಕಳನ್ನು ಹೊಂದುವ ದಂಪತಿ ವ್ಯಾಪಾರ ಆರಂಭಿಸುವುದಾದರೆ ಅವರಿಗೆ ರಿಯಾಯಿತಿ ನೀಡಲಾಗುತ್ತದೆ. ಜಿಲಿನ್‌ನಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಇದ್ದರೂ ಸಹ ಜನಸಂಖ್ಯೆ ಕೊರತೆಯಿಂದ ಆರ್ಥಿಕ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ. ದೇಶದ ಆರ್ಥಿಕತೆಗಿಂತ ಶೇ.9.8ರಷ್ಟುಹಿಂದುಳಿದಿದೆ.
China Lockdown: 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್ ನಗರ ಪೂರ್ಣ ಲಾಕ್ಡೌನ್!
ಮೂರು ಮಕ್ಕಳ ನೀತಿ: ಜನಸಂಖ್ಯಾ ಸ್ಫೋಟ ತಡೆಯಲು 1979ರಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದು ಇಡೀ ವಿಶ್ವದಲ್ಲಿ ಭಾರೀ ಸುದ್ದಿಯಾಗಿದ್ದ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣ ಕುಸಿತ ತಡೆಯಲು ಕುಟುಂಬಕ್ಕೆ 3 ಮಕ್ಕಳ ನೀತಿ ಜಾರಿಗೆ ತರಲು ಕಳೆದ ಆಗಸ್ಟ್ ನಲ್ಲಿ ತೀರ್ಮಾನ ಮಾಡಿತ್ತು. ಅಲ್ಲದೆ ಮೂರು ಮಕ್ಕಳನ್ನು ಪೋಷಿಸಲು ಕುಟುಂಬಗಳಿಗೆ ಆಗುವ ಆರ್ಥಿಕ ಹೊರೆ ತಗ್ಗಿಸಲು ಸ್ವತಃ ಸರ್ಕಾರವೇ ಪೋಷಕರಿಗೆ ನೆರವು ನೀಡಲು ನಿರ್ಧರಿಸಿತ್ತು.
ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯು ಚೀನಾದ ಪ್ರಜೆಗಳು 3 ಮಕ್ಕಳನ್ನು ಹೆರಲು ಅವಕಾಶ ಕಲ್ಪಿಸುವ ಜನಸಂಖ್ಯಾ ಮತ್ತು ಕುಟುಂಬ ಯೋಜನೆಯ ಕಾನೂನಿಗೆ ಅಂಗೀಕಾರ ನೀಡಿದೆ. ಹಣಕಾಸು, ತೆರಿಗೆಗಳು, ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗ ಸೇರಿದಂತೆ ಕುಟುಂಬದ ಹೊರೆಗಳು, ಮಕ್ಕಳನ್ನು ಬೆಳೆಸುವ ಹಾಗೂ ಶಿಕ್ಷಣದ ವೆಚ್ಚವನ್ನು ಸಹ ನೂತನ ಕಾನೂನು ಕಡಿತಗೊಳಿಸಲಿದೆ. ಅಲ್ಲದೆ 3 ಮಕ್ಕಳ ಹೆರುವ ಪೋಷಕರಿಗೆ ಸಾಮಾಜಿಕ ಮತ್ತು ಆರ್ಥಿಕ ನೆರವುಗಳನ್ನು ನೀಡಲು ಈ ಕಾಯ್ದೆ ರೂಪುಗೊಂಡಿತ್ತು.
ಚೀನಾದಲ್ಲಿ ಇದೀಗ 140 ಕೋಟಿ ಜನಸಂಖ್ಯೆ ಇದೆ. ಆದರೆ ಮಕ್ಕಳ ಜನನದ ಮೇಲೆ ನಿಯಂತ್ರಣ ಹೇರಿದ ಪರಿಣಾಮ ವಯಸ್ಕರ ಸಂಖ್ಯೆ ಹೆಚ್ಚಾಗಿ ಯುವಜನರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಭವಿಷ್ಯದಲ್ಲಿ ಭಾರೀ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕಾಗಿ ಸರ್ಕಾರ, ಪೋಷಕರಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಉತ್ತೇಜನ ನೀಡುತ್ತಿದೆ. ಚೀನಾದಲ್ಲಿ 1979ರಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ, 2015ರಲ್ಲಿ ಕುಟುಂಬಕ್ಕೆ 2 ಮಕ್ಕಳ ನೀತಿ ಜಾರಿಗೆ ತರಲಾಗಿತ್ತು.
