* ಕೋವಿಡ್‌ ಬಳಿಕ ಚೀನಾದಲ್ಲಿನ ಅತಿದೊಡ್ಡ ಲಾಕ್ಡೌನ್‌ ಇದು* 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್‌ ನಗರ ಪೂರ್ಣ ಲಾಕ್ಡೌನ್‌* ಒಲಿಂಪಿಕ್ಸ್‌ಗೆ ಮುನ್ನ ಸೋಂಕು ಪ್ರಸರಣ ತಡೆಗೆ ಕಠಿಣ ಕ್ರಮ

ಬೀಜಿಂಗ್‌(ಡಿ.24): ಸುಮಾರು 1.3 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದ ಉತ್ತರದ ಭಾಗದ ಬೃಹತ್‌ ನಗರ ಕ್ಸಿಯಾನ್‌ ನಗರವನ್ನು ಸಂಪೂರ್ಣ ಲಾಕ್ಡೌನ್‌ ಮಾಡಲಾಗಿದೆ. ರಾಜಧಾನಿ ಬೀಜಿಂಗ್‌ನಲ್ಲಿ ಶೀಘ್ರವೇ ಚಳಿಗಾಲದ ಒಲಿಂಪಿಕ್ಸ್‌ ಆರಂಭವಾಗಲಿದ್ದು, ಹೀಗಾಗಿ ಯಾವುದೇ ಕಾರಣಕ್ಕೂ ದೇಶದಲ್ಲಿ ಮತ್ತೆ ಸೋಂಕು ವ್ಯಾಪಿಸಬಾರದು ಎನ್ನುವ ಕಾರಣಕ್ಕಾಗಿ ರಾಜಧಾನಿಯಿಂದ 1000 ಕಿ.ಮೀ ದೂರದ ನಗರವನ್ನು ಪೂರ್ಣ ಲಾಕ್ಡೌನ್‌ ಮಾಡಲಾಗಿದೆ. ಮೊದಲ ವೈರಸ್‌ ಕಾಣಿಸಿಕೊಂಡ ಬಳಿಕ 2020ರಲ್ಲಿ ವುಹಾನ್‌ನಲ್ಲಿ ಜಾರಿ ಮಾಡಲಾದ ಲಾಕ್ಡೌನ್‌ ನಂತರ ದೇಶದಲ್ಲಿ ಅತಿದೊಡ್ಡ ಪ್ರದೇಶವೊಂದರಲ್ಲಿ ಮಾಡಿದ ಲಾಕ್ಡೌನ್‌ ಇದಾಗಿದೆ.

ಗುರುವಾರ ಸ್ಥಳೀಯವಾಗಿ ಹಬ್ಬಿದ 63 ಪ್ರಕರಣ ಸೇರಿ ಇದುವರೆಗೂ ಕ್ಸಿಯಾನ್‌ನಲ್ಲಿ ಒಟ್ಟು 211 ಕೋವಿಡ್‌ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದಿಢೀರನೆ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಲಾಕ್ಡೌನ್‌ ಘೋಷಿಸಲಾಗಿದೆ.

ಕ್ಸಿಯಾನ್‌ ಪ್ರಾಂತ್ಯದಲ್ಲಿ ಜನ ತಮ್ಮ ಮನೆಯ ಕಾಂಪೌಂಡ್‌ನಿಂದ ಹೊರಹೋಗಲೂ ಸ್ಥಳೀಯ ಸಮಿತಿಗಳ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರತಿ ಮನೆಯ ಒಬ್ಬ ಸದಸ್ಯನಿಗೆ 2 ದಿನಕ್ಕೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಗೆ ಹೋಗಬಹುದಾಗಿದೆ.

ಚೀನಾದಲ್ಲಿ ಇದುವರೆಗೂ ಒಟ್ಟಾರೆ 100644 ಕೋವಿಡ ಸೋಂಕಿತರು ಮಾತ್ರವೇ ಪತ್ತೆಯಾಗಿದ್ದು, 4636 ಜನರು ಸಾವನ್ನಪ್ಪಿದ್ದಾರೆ. ಇನ್ನು ಇತ್ತೀಚಿನ ಒಮಿಕ್ರೋನ್‌ನ 7 ಪ್ರಕರಣ ಪತ್ತೆಯಾಗಿದೆ.

Omicron Threat: ಒಮಿಕ್ರೋನ್‌ ತಡೆಗೆ ಇಸ್ರೇಲ್‌, ಜರ್ಮನಿಯಲ್ಲಿ ವಿಶಿಷ್ಟ ಕ್ರಮ!

ಒಮಿಕ್ರೋನ್‌ ವೈರಸ್‌ ಅನ್ನು ಯಶಸ್ವಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ 4 ಡೋಸ್‌ ಲಸಿಕೆ ನೀಡಲು ಇಸ್ರೇಲ್‌ ಮತ್ತು ಜರ್ಮನಿ ಸರ್ಕಾರಗಳು ನಿರ್ಧರಿಸಿದೆ. ಮತ್ತೊಂದೆಡೆ ಬ್ರಿಟನ್‌ ಕೂಡಾ ಇದೇ ಹಾದಿ ಹಿಡಿಯುವ ಸುಳಿವು ನೀಡಿದೆ.

ಲಸಿಕೆ ವಿತರಣೆಯಲ್ಲಿ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿರುವ ಇಸ್ರೇಲ್‌ನಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆದ್ಯತೆ ಮೇರೆಗೆ 4ನೇ ಡೋಸ್‌ ಲಸಿಕೆ ನೀಡಲು ಆರಂಭಿಸಲಾಗಿದೆ. ದೇಶದಲ್ಲಿ ಪ್ರಸಕ್ತ ನಿತ್ಯ ಸರಾಸರಿ 1000ದ ಆಸುಪಾಸಿನ ಕೇಸು ದಾಖಲಾಗುತ್ತಿದ್ದು, 1-10 ಸಾವು ದಾಖಲಾಗುತ್ತಿದೆ. ಸೋಂಕು, ಸಾವು ಕಡಿಮೆ ಇದ್ದರೂ, ಒಮಿಕ್ರೋನ್ನಿಂದ ದೇಶ ಜನತೆ ರಕ್ಷಣೆಗೆ 4ನೇ ಡೋಸ್‌ಗೆ ಮೊರೆ ಹೋಗಲಾಗಿದೆ ಎಂದು ಸರ್ಕಾರ ಹೇಳಿದೆ.

ಇನ್ನು ಈ ಕುರಿತು ಹೇಳಿಕೆ ನೀಡಿರುವ ಜರ್ಮನಿಯ ಆರೋಗ್ಯ ಸಚಿವ ಕಾಲ್‌ರ್‍ ಲಾಟರ್‌ಬ್ಯಾಚ್‌, ‘ಜನವರಿ ಮಧ್ಯ ಭಾಗದ ವೇಳೆ ದೇಶದಲ್ಲಿ ಒಮಿಕ್ರೋನ್‌ ಅತಿ ಹೆಚ್ಚು ಹಬ್ಬಿದ ವೈರಸ್‌ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ಒಮಿಕ್ರೋನ್‌ ವೈರಸ್‌ ಅನ್ನು ಯಶಸ್ವಿಯಾಗಿ ತಡೆಯಲು 4ನೇ ಡೋಸ್‌ ಅಗತ್ಯವಿದೆ. ಹೀಗಾಗಿ ನಾವು 4ನೇ ಡೋಸ್‌ ನೀಡಲು ನಿರ್ಧರಿಸಿದ್ದೇವೆ ಎಂದು ಪ್ರಕಟಿಸಿದ್ದಾರೆ. ದೇಶದಲ್ಲಿ 3ನೇ ಡೋಸ್‌ ಆಗಿ ಮಾರ್ಡೆನಾ ನೀಡಲಾಗಿತ್ತು. ಆದರೆ ಇದೀಗ 4ನೇ ಡೋಸ್‌ ಆಗಿ ನೀಡಲು ಬಯೋಎನ್‌ ಟೆಕ್‌, ನೋವಾವ್ಯಾಕ್ಸ್‌, ವಾಲ್‌ನೇವಾ ಲಸಿಕೆಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಲು ಆರ್ಡರ್‌ ಸಲ್ಲಿಸಿದೆ.