ಡೋಕ್ಲಾಮ್‌ ಪ್ರದೇಶದಿಂದ ಸುಮಾರು 9 ಕಿ.ಮೀ ದೂರದಲ್ಲಿ ಚೀನಾ ರಸ್ತೆ ಮೊದಲಾದ ಮೂಲ ಸೌಕರ್ಯಗಳುಳ್ಳ ಗ್ರಾಮವನ್ನೇ ನಿರ್ಮಾಣ ಮಾಡಿದೆ ಎಂಬುದು ಉಪಗ್ರಹ ಆಧಾರಿತ ಚಿತ್ರಗಳ ಮೂಲಕ ಬೆಳಕಿಗೆ ಬಂದಿದೆ

ನವದೆಹಲಿ(ಜು.20): 2017ರಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ ಸಂಘರ್ಷ ನಡೆದ ಡೋಕ್ಲಾಮ್‌ ಪ್ರದೇಶದಿಂದ ಸುಮಾರು 9 ಕಿ.ಮೀ ದೂರದಲ್ಲಿ ಚೀನಾ ರಸ್ತೆ ಮೊದಲಾದ ಮೂಲ ಸೌಕರ್ಯಗಳುಳ್ಳ ಗ್ರಾಮವನ್ನೇ ನಿರ್ಮಾಣ ಮಾಡಿದೆ ಎಂಬುದು ಉಪಗ್ರಹ ಆಧಾರಿತ ಚಿತ್ರಗಳ ಮೂಲಕ ಬೆಳಕಿಗೆ ಬಂದಿದೆ ಎಂದು ಎನ್‌ಡಿಟೀವಿ ವರದಿ ಮಾಡಿದೆ. ದೇಶದ ಗಡಿಯ ಸಮೀಪದಲ್ಲೇ ಚೀನಾದ ಎಂದಿನಂತೇ ಆಕ್ರಮಣಕಾರಿ ಪ್ರವೃತ್ತಿ ಮುಂದುವರೆಸಿದ್ದು, ಆತಂಕ ಸೃಷ್ಟಿಸಿದೆ.

Add Asianetnews Kannada as a Preferred SourcegooglePreferred

ಬೀಜಿಂಗ್‌ ಈ ಗ್ರಾಮವನ್ನು ಪಾಂಗ್ಡಾ ಎಂದು ನಾಮಕರಣ ಮಾಡಿದ್ದು, ಇದು ಭೂತಾನ್‌ಗೆ ಸೇರಿದ ಭೂಪ್ರದೇಶದಲ್ಲಿದೆ ಎನ್ನಲಾಗಿದೆ. ಭೂತಾನ್‌ ಗಡಿಯ 10 ಕಿ.ಮೀ ಒಳಗಡೆ ಅಮೊ ಚು ನದಿಯ ತೀರದಲ್ಲಿ ಈ ಗ್ರಾಮವಿದೆ. ಪಾಂಗ್ಡಾದಲ್ಲಿ ಸರ್ವಋುತು ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದ್ದು ಉಪಗ್ರಹದ ಚಿತ್ರದಲ್ಲಿ ಕಂಡುಬಂದಿದೆ.

ಚೀನಾ ಪಡೆಗಳು ನೇರವಾಗಿ ಡೋಕ್ಲಾಮ್‌ ಪ್ರಸ್ಥಭೂಮಿಯನ್ನು ಪ್ರವೇಶಿಸಲು ಅಮೊ ಚು ನದಿಯುದ್ದಕ್ಕೂ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುವುದು ನೆರವಾಗುತ್ತದೆ. ಈಶಾನ್ಯ ಭಾರತದ ರಾಜ್ಯಗಳನ್ನು ಭಾರತದ ಇತರೆ ಭಾಗಗಳಿಗೆ ಜೋಡಿಸುವ ಸಿಲಿಗುರಿ ಕಾರಿಡಾರ್‌ಗೆ ನೇರವಾಗಿ ಇದನ್ನು ನಿರ್ಮಾಣ ಮಾಡಲಾಗಿದೆ.

2017ರಲ್ಲಿ ಡೋಕ್ಲಾಮ್‌ನಲ್ಲಿರುವ ಜಂಪೇರಿ ಪರ್ವತ ಶ್ರೇಣಿಗೆ ಚೀನಾದ ಕಾರ್ಮಿಕರು ಪ್ರವೇಶಿಸದಂತೇ ಭಾರತೀಯ ಯೋಧರು ತಡೆದಿದ್ದರು. ಆದರೆ ಹಳೆ ಚಾಳಿ ಬಿಡದ ಚೀನಾ ಪರ್ಯಾಯ ಮಾರ್ಗದ ಮೂಲಕ ಪರ್ವತ ಶ್ರೇಣಿಗೆ ಸಮೀಪಿಸುವ ಪ್ರಯತ್ನ ಮಾಡುತ್ತಿರುವುದು ಚಿಂತೆಗೀಡು ಮಾಡಿದೆ.

ಲಡಾಖ್‌ ಗಡಿ ಸಮೀಪ ಚೀನಾ ವಿಮಾನ ಹಾರಾಟ

ಆಗ್ಗಿಂದಾಗ್ಗೆ ಗಡಿ ಪ್ರದೇಶದಲ್ಲಿ ಭಾರತವನ್ನು ಒಂದಲ್ಲಾ ಒಂದು ರೀತಿಯಲ್ಲಿ ಕೆಣಕುವ ನೆರೆಯ ಚೀನಾ ಮತ್ತೆ ಅದೇ ಕೆಲಸ ಮಾಡಿದೆ. ಕಳೆದ ವಾರ ಲಡಾಖ್‌ ಬಳಿಯಲ್ಲಿನ ಉಭಯ ದೇಶಗಳ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಚೀನಾದ ವಿಮಾನಗಳು ಸಂಚಾರ ನಡೆಸಿವೆ. ಈ ಮೂಲಕ ಮತ್ತೆ ಭಾರತವನ್ನು ಕೆಣಕುವ ಕೆಲಸ ಮಾಡಿದೆ.

ಕಳೆದ ಹಲವು ತಿಂಗಳ ಬಳಿಕ ಲಡಾಖ್‌ನಲ್ಲಿ ಚೀನಾ ನಡೆಸಿದ ಸಂಭವನೀಯ ವಾಯುಸೀಮೆಯನ್ನು ಉಲ್ಲಂಘನೆಯ ಮೊದಲ ಪ್ರಕರಣವಿದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯುಪಡೆಯ ರಾಡಾರ್‌ ಗಡಿಯ ಬಳಿ ನಿಯೋಜನೆಯಾದ ಚೀನಾದ ವಿಮಾನ ಪತ್ತೆ ಮಾಡಿತ್ತು. ಭಾರತೀಯ ವಾಯುಪಡೆ ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ್ದು, ಚೀನಾದ ಸಂಭವನೀಯ ದುಸ್ಸಾಹಸ ತಡೆಯಲು ಸಿದ್ಧತೆ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017ರಲ್ಲಿ ಡೋಕ್ಲಾಮ್‌ ಪ್ರದೇಶದಲ್ಲಿ ಮತ್ತು 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾ ಕಾಲು ಕೆರೆದು ಜಗಳ ಮಾಡಿತ್ತು. ಎರಡೂ ಸಮಯದಲ್ಲಿ ಭಾರತೀಯ ಯೋಧರು, ಚೀನಾಕ್ಕೆ ತಕ್ಕ ಪಾಠ ಕಳಿಸಿದ್ದರು. ಎರಡೂ ಬಿಕ್ಕಟ್ಟಿನ ವೇಳೆ ಇನ್ನೇನು ಉಭಯ ದೇಶಗಳ ನಡುವೆ ಯುದ್ಧ ನಡೆದೇ ಹೋಯಿತು ಎನ್ನುವ ಹಂತಕ್ಕೆ ಪರಿಸ್ಥಿತಿ ನಿರ್ಮಾಣವಾಗಿತ್ತು.