ಯುಎಸ್‌ಎ ಯುನೈಟೆಡ್ ಏರ್‌ಲೈನ್ಸ್‌ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕನಸು ಎಂದು ಭಾವಿಸಿ ತನ್ನ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಸಾರ್ವಜನಿಕ ಸಾರಿಗೆಯಲ್ಲಿ ಕೆಲವೊಂದು ಕರ್ತವ್ಯಗಳು ಮತ್ತು ಸಭ್ಯತೆ ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ. ಜೊತೆಯಲ್ಲಿರುವ ಇತರ ಪ್ರಯಾಣಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸಬಾರದು ಎಂಬುದು ಎಲ್ಲರೂ ತಿಳಿದುಕೊಂಡಿರಬೇಕು. ಆದರೆ, ಇತ್ತೀಚೆಗೆ ವಿಶೇಷವಾಗಿ ವಿಮಾನಗಳಿಂದ ನಡೆಯುವ ಘಟನೆಗಳು ಅಥವಾ ಸುದ್ದಿಗಳು, ಜನರು ತಮ್ಮ ಸಹಪ್ರಯಾಣಿಕರಿಗೆ ಯಾವುದೇ ಕನಿಷ್ಠ ಗೌರವವನ್ನೂ ಕೊಡದೇ ನಡೆದುಕೊಂಡಿದ್ದಾರೆ ಎಂಬುದು ತಿಳಿದುಬರುತ್ತಿದೆ. ಇತ್ತೀಚಿನ ಯುಎಸ್‌ಎ ವಿಮಾನದಲ್ಲಿ ನಡೆದ ಘಟನೆಯೊಂದರಲ್ಲಿ, ಸಹಪ್ರಯಾಣಿಕನೊಬ್ಬ ಕನಸಿನಲ್ಲಿದ್ದೇನೆ ಎಂದು ಭಾವಿಸಿ ಪಕ್ಕದಲ್ಲಿದ್ದ ಇನ್ನೊಬ್ಬ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಈ ಬಗ್ಗೆ ದೂರು ದಾಖಲಾಗಿದ್ದು, ಮುಂದೆ ಏನೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎಂಬುದನ್ನು ಇಲ್ಲಿ ನೋಡಿ..

ಕಳೆದ ಡಿಸೆಂಬರ್ 27 ರಂದು ಸ್ಯಾನ್ ಫ್ರಾನ್ಸಿಸ್ಕೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಎಸ್‌ಎಫ್‌ಒ) ಮನಿಲಾಗೆ ಹೋಗುತ್ತಿದ್ದ ಯುನೈಟೆಡ್ ಏರ್‌ಲೈನ್ಸ್‌ನ ಯುಎ ಫ್ಲೈಟ್ 189 ರ ಬಿಸಿನೆಸ್ ಕ್ಲಾಸ್‌ನಲ್ಲಿ ಜೆರೋಮ್ ಗುಟೆರೆಸ್ ಎಂಬ ಪ್ರಯಾಣಿಕನಿಗೆ ಈ ಅನುಭವವಾಯಿತು. ತನ್ನ 8 ಗಂಟೆಗಳ ವಿಮಾನ ಪ್ರಯಾಣದಲ್ಲಿ ಅವರು ನಿದ್ದೆಗೆ ಜಾರಿದ್ದರು. ಈ ಸಮಯದಲ್ಲಿ ಯಾರೋ ತನ್ನ ಹೊಟ್ಟೆಯ ಮೇಲೆ ನೀರು ಸುರಿಯುತ್ತಿರುವಂತೆ ಅನಿಸಿತು. ಎದ್ದು ನೋಡಿದಾಗ, ಸಹಪ್ರಯಾಣಿಕ ಮೂತ್ರ ವಿಸರ್ಜನೆ ಮಾಡುತ್ತಿದ್ದನು. ತನ್ನ ಹೊಟ್ಟೆಯಿಂದ ಕಾಲಿನವರೆಗೆ ಬಟ್ಟೆಗಳೆಲ್ಲಾ ಒದ್ದೆಯಾಗಿತ್ತು ಎಂದು ಸ್ವತಃ ಮೂತ್ರ ವಿಸರ್ಜನೆ ಮಾಡಿಸಿಕೊಂಡ ಸಂತ್ರಸ್ತ ವ್ಯಕ್ತಿ ಜೆರೋಮ್ ಗುಟೆರೆಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಹಪ್ರಯಾಣಿಕ 'ಕನಸಿನಲ್ಲಿ' ತಿಳಿಯದೆ ಹಾಗೆ ಮಾಡಿದ್ದಾನೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಜೆರೋಮ್ ಗುಟೆರೆಸ್‌ ಅವರಿಗೆ ವಿಮಾನದ ಸಿಬ್ಬಂದಿ ತಾಳ್ಮೆಯಿಂದಿರಿ ಎಂದು ಸೂಚಿಸಿದ್ದರಿಂದ ಬೇರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಆದರೆ, 8 ಗಂಟೆಗಳ ಕಾಲ ವಿಮಾನದಲ್ಲಿ ಒದ್ದೆಯಾದ ಬಟ್ಟೆಯೊಂದಿಗೆ ಕುಳಿತುಕೊಂಡು ಪ್ರಯಾಣ ಮಾಡಬೇಕಾಯಿತು ಎಂದು ಜೆರೋಮ್ ತಿಳಿಸಿದರು. ಮೂತ್ರ ವಿಸರ್ಜಿಸಿದ ಪ್ರಯಾಣಿಕನನ್ನು ತಮ್ಮ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧಿಸಲಾಗಿದೆ ಎಂದು ಯುನೈಟೆಡ್ ಏರ್‌ಲೈನ್ಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ಅಮೇರಿಕಾ ಹುಡುಗಿಯನ್ನು ಬೆಂಗಳೂರಿಗೆ ಹಾರಿಸಿಕೊಂಡು ಬಂದು ಮದುವೆಯಾದ ಒಡಿಶಾ ಹುಡುಗ; ಯುವತಿ ಫುಲ್ ಖುಷ್!

ನಂತರ ಆತ ತನ್ನ ಜೆರೋಮ್ ಬಳಿ ತನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾನೆ. ಜೊತೆಗೆ, ನನ್ನ ಮೇಲೆ ದೊಡ್ಡ ತಪ್ಪುಗಳನ್ನು ಹೊರಿಸಬೇಡಿ ಎಂದು ಜೆರೋಮ್ ಅವರ ಮನವಿ ಮಾಡಿದ್ದಾನೆ. ಆದರೆ, ಈ ಘಟನೆಯನ್ನು ಯುನೈಟೆಡ್ ಏರ್‌ಲೈನ್ಸ್ ನಿರ್ವಹಿಸಿದ ರೀತಿ ಸರಿಯಾಗಿಲ್ಲ. ಒಂದು ದೊಡ್ಡ ವಿಮಾನಯಾನ ಸಂಸ್ಥೆ ತನ್ನ ತಂದೆಯೊಂದಿಗೆ ಅನ್ಯಾಯವಾಗಿ ವರ್ತಿಸಿದೆ ಎಂದು ಜೆರೋಮ್ ಅವರ ಮಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಬಳಿಕ ಮಲೇಶಿಯಾದ ಮನಿಲಾದಲ್ಲಿ ಪೊಲೀಸರಿಗೆ ದೂರು ಕೊಡಲಾಗಿದೆ. ಜೊತೆಗೆ, ತೊಂದರೆ ಕೊಟ್ಟ ಪ್ರಯಾಣಿಕನನ್ನು ತಮ್ಮ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧಿಸಲಾಗಿದೆ ಎಂದು ಯುನೈಟೆಡ್ ಏರ್‌ಲೈನ್ಸ್ ತಿಳಿಸಿದೆ. ಇದಕ್ಕೂ ಮೊದಲು ಇದೇ ರೀತಿಯ ಘಟನೆಗಳು ನಡೆದಾಗಲೆಲ್ಲಾ ವಿಮಾನಯಾನ ಸಂಸ್ಥೆಗಳು ಇಂತಹ ಪ್ರಯಾಣಿಕರನ್ನು ವಿಮಾನ ಪ್ರಯಾಣದಿಂದ ನಿಷೇಧಿಸಿವೆ. ಈಗಲೂ ಪ್ರಯಾಣಿಕನನ್ನು ತಮ್ಮ ವಿಮಾನದಲ್ಲಿ ಪ್ರಯಾಣ ಮಾಡದಂತೆ ನಿಷೇಧಿಸಿದೆ ಹೊರತಾಗಿ ಬೇರಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಾನು ಶ್ರೀಮಂತ,ಏನು ಮಾಡಬೇಕು ಗೊತ್ತಿಲ್ಲ, 8368 ಕೋಟಿ ರೂ ಹಿಡಿದು ಅಲೆದಾಡುತ್ತಿರುವ ಭಾರತೀಯ ಉದ್ಯಮಿ