ಲಂಡನ್‌ನ ಕೆಲ ಭಾಗಗಳನ್ನು ನೋಡಿದರೆ ಅದು ಮುಸ್ಲಿಂ ನಗರ ಅನ್ನಿಸುವ ರೀತಿಯಲ್ಲಿದೆ. ಇಲ್ಲಿ ಫಲಕಗಳನ್ನು ಬೇರೆ ಬೇರೆ ಭಾಷೆಯಲ್ಲಿ ಬರೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಬುರ್ಖಾ ಮಾರಲಾಗುತ್ತದೆ ಎಂದು ಲಂಡನ್‌ ಮಹಾನಗರ ಪಾಲಿಕೆಗೆ ರಿಫಾರ್ಮ್‌ ಪಕ್ಷದ ಅಭ್ಯರ್ಥಿಯಾಗಿರುವ ಲೈಲಾ ಕನ್ನಿಂಗ್‌ಹ್ಯಾಮ್‌ ಹೇಳಿದ್ದಾರೆ.

ಲಂಡನ್‌: ಬ್ರಿಟನ್‌ ರಾಜಧಾನಿ ಲಂಡನ್‌ನ ಕೆಲ ಭಾಗಗಳನ್ನು ನೋಡಿದರೆ ಅದು ಮುಸ್ಲಿಂ ನಗರ ಅನ್ನಿಸುವ ರೀತಿಯಲ್ಲಿದೆ. ಇಲ್ಲಿ ಫಲಕಗಳನ್ನು ಬೇರೆ ಬೇರೆ ಭಾಷೆಯಲ್ಲಿ ಬರೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಬುರ್ಖಾ ಮಾರಲಾಗುತ್ತದೆ ಎಂದು ಲಂಡನ್‌ ಮಹಾನಗರ ಪಾಲಿಕೆಗೆ ರಿಫಾರ್ಮ್‌ ಪಕ್ಷದ ಅಭ್ಯರ್ಥಿಯಾಗಿರುವ ಲೈಲಾ ಕನ್ನಿಂಗ್‌ಹ್ಯಾಮ್‌ ಹೇಳಿದ್ದಾರೆ. ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಲೈಲಾ, ‘ಯಾರು ಕೂಡ ಮುಖ ಮುಚ್ಚಿಕೊಂಡು ಓಡಾಡಬಾರದು, ಆ ರೀತಿ ಓಡಾಡಿದರೆ ಅಪರಾಧಿಗಳು ಎನ್ನುವ ರೀತಿಯಲ್ಲಿ ಭಾಸವಾಗುತ್ತದೆ. ಹೀಗಾಗಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ನಿಲ್ಲಿಸಬೇಕು. ಹಾಗೆ ಮಾಡದಿದ್ದಲ್ಲಿ ಅವರನ್ನು ತಪಾಸಣೆ ನಡೆಸಬೇಕು’ ಎಂದು ಹೇಳಿದ್ದಾರೆ.

ಮೊದಲು ಮನಸ್ಸಿಂದ ಜಾತಿ ಅಳಿಸಿದರೆ ಜಾತಿ ತಾರತಮ್ಯ ಅಂತ್ಯ: ಮೋಹನ್‌ ಭಾಗ್ವತ್‌

ಮುಂಬೈ: ‘ಸಾಮಾಜಿಕ ಆಚರಣೆಯಿಂದ ಜಾತಿ ತಾರತಮ್ಯ ತೊಡೆದುಹಾಕಬೇಕಾದರೆ, ಮೊದಲು ಜಾತಿಯನ್ನು ಮನಸ್ಸಿನಿಂದ ಅಳಿಸಿಹಾಕಬೇಕು. ಇದನ್ನು ಪ್ರಾಮಾಣಿಕವಾಗಿ ಮಾಡಿದರೆ, 10ರಿಂದ 12 ವರ್ಷಗಳಲ್ಲಿ ಜಾತಿ ತಾರತಮ್ಯ ನಿರ್ಮೂಲನೆಯಾಗುತ್ತದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ, ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹಿಂದೆ, ಜಾತಿಯು ವೃತ್ತಿ ಮತ್ತು ಕೆಲಸಕ್ಕೆ ಸಂಬಂಧಿಸಿತ್ತು, ಆದರೆ ನಂತರ ಅದು ಸಮಾಜದಲ್ಲಿ ಬೇರೂರಿ ತಾರತಮ್ಯಕ್ಕೆ ಕಾರಣವಾಯಿತು. ಈ ತಾರತಮ್ಯವನ್ನು ಕೊನೆಗೊಳಿಸಲು, ಮೊದಲು ಮನಸ್ಸಿನಿಂದ ಜಾತಿಯನ್ನು ನಿರ್ಮೂಲನೆ ಮಾಡಬೇಕು. ಇದನ್ನು ಪ್ರಾಮಾಣಿಕವಾಗಿ ಮಾಡಿದರೆ, 10ರಿಂದ 12 ವರ್ಷಗಳಲ್ಲಿ ಜಾತಿ ತಾರತಮ್ಯ ನಿರ್ಮೂಲನೆಯಾಗುತ್ತದೆ’ ಎಂದರು.‘ಸಂಘವು ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತದೆ. ಇದು ಯಾರಿಗೋ ಪ್ರತಿಕ್ರಿಯೆ ನೀಡಲು ಸ್ಥಾಪನೆಯಾದ ಸಂಘಟನೆಯಲ್ಲ. ಯಾರೊಂದಿಗೂ ನಮಗೆ ಸ್ಪರ್ಧೆಯೂ ಇಲ್ಲ. ಸಂಘವು ಭಾರತವನ್ನು ಪರಮ ವೈಭವದತ್ತ ಕೊಂಡೊಯ್ಯುವ ಗುರಿ ಹೊಂದಿದೆ. ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸುವವರು, ಸಂಘದ ಶಾಖೆಗಳಿಗೆ ಬರಬೇಕು’ ಎಂದರು.

ರೆಹಮಾನ್ ನೈಜ ಪರಿಸ್ಥಿತಿ ಹೇಳಿದ್ದಾರೆ: ಮೆಹಬೂಬಾ

ಶ್ರೀನಗರ: ಬಾಲಿವುಡ್‌ನಲ್ಲಿ ಕೋಮು ತಾರತಮ್ಯವಿದೆ ಎಂಬ ಗಾಯಕ ಎ.ಆರ್‌.ರೆಹಮಾನ್‌ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬೆಂಬಲಿಸದ್ದಾರೆ. ‘ರೆಹಮಾನ್ ಭಾರತದ ನೈಜ ಪರಿಸ್ಥಿತಿಯ ಕುರಿತು ಸತ್ಯವನ್ನೇ ನುಡಿದಿದ್ದಾರೆ’ ಎಂದು ಅವರು ಹೇಳಿದ್ದಾರೆ.

ರೆಹಮಾನ್‌ ಹೇಳಿಕೆ ವಿರೋಧಿಸಿ ಖ್ಯಾತ ಗೀತರಚನಕಾರ ಜಾವೇದ್‌ ಅಖ್ತರ್‌ ನೀಡಿದ್ದ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಮೆಹಬೂಬಾ, ‘ರೆಹಮಾನ್ ಹೇಳಿಕೆಯನ್ನು ಅಖ್ತರ್‌ ವಿರೋಧಿಸಿದ್ದಾರೆ. ಆದರೆ ಸ್ವತಃ ಅವರ ಪತ್ನಿ ಶಬಾನಾ ಅಜ್ಮಿ ತಾವು ಮುಸ್ಲಿಂ ಎಂಬ ಕಾರಣಕ್ಕೆ ಮುಂಬೈನಲ್ಲಿ ಮನೆ ಮಾಡಲು ಅವಕಾಶ ಸಿಗಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಬಾಲಿವುಡ್ ಯಾವಾಗಲೂ ದೇಶದ ಸಾಮಾಜಿಕ ವಾಸ್ತವ ಪ್ರತಿಬಿಂಬಿಸುವ ಜೀವಂತ ಮಿನಿ ಭಾರತವಾಗಿದೆ. ಅಂತಹ ಅನುಭವಗಳನ್ನು ಮುಚ್ಚಿಟ್ಟುಬಿಟ್ಟರೆ ಭಾರತದ ಬಗ್ಗೆ ಸತ್ಯ ಬದಲಾಗುವುದಿಲ್ಲ’ ಎಂದಿದ್ದಾರೆ.

ಸ್ಫೋಟ, ಪ್ರವಾಹ, ಅಸ್ಥಿರತೆ ಮೆಟ್ಟಿ ನಿಂತ ಲಂಕಾ ಪ್ರವಾಸೋದ್ಯಮ!

ಕೊಲಂಬೊ: ಬಾಂಬ್‌ ಸ್ಫೋಟ, ಪ್ರವಾಹ, ರಾಜಕೀಯ ಅಸ್ಥಿರತೆಗಳಿಂದ ನಲುಗಿದ್ದ ನೆರೆ ರಾಷ್ಟ್ರ ಶ್ರೀಲಂಕಾದದಲ್ಲಿ ಪ್ರವಾಸೋದ್ಯಮಕ್ಕೆ ಮತ್ತೆ ಮರುಜೀವ ಬಂದಿದೆ. ಕಳೆದ ವರ್ಷ ಭಾರತದ 5.3 ಲಕ್ಷ ಸೇರಿದಂತೆ 23 ಲಕ್ಷ ಪ್ರವಾಸಿಗರು ದ್ವೀಪ ದೇಶಕ್ಕೆ ಭೇಟಿ ನೀಡಿದ್ದಾರೆ.ಶ್ರೀಲಂಕಾದ ಪ್ರವಾಸೋದ್ಯಮ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ‘2025ರಲ್ಲಿ ಲಂಕಾದ ಪ್ರವಾಸೋದ್ಯಮ ಶೇ.15ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ದೇಶಕ್ಕೆ 23 ಲಕ್ಷ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದ್ದು 5.3 ಲಕ್ಷ ಭಾರತೀಯರು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಭಾರತೀಯರ ಆಗಮನ ತಿಂಗಳಿಗೆ ಸರಾಸರಿ ಶೇ.23ರಷ್ಟಿದೆ. ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಅಂದರೆ 56,715 ಮಂದಿ ಭೇಟಿ ಕೊಟ್ಟಿದ್ದಾರೆ. ಬ್ರಿಟನ್‌ ನಂತರದ ಸ್ಥಾನದಲ್ಲಿದೆ’ ಎಂದಿದೆ.

2019ರ ಏಪ್ರಿಲ್‌ನಲ್ಲಿ ಈಸ್ಟರ್‌ ಪ್ರಾರ್ಥನೆ ವೇಳೆ ಚರ್ಚ್‌ವೊಂದರಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸಾಲು ಸಾಲು ಪ್ರವಾಹಗಳು ಅಲ್ಲಿನ ಪ್ರವಾಸಿ ತಾಣಗಳನ್ನು ನಾಶಪಡಿಸಿತ್ತು. ಅದರ ನಡುವೆಯೇಆರ್ಥಿಕ ಬಿಕ್ಕಟ್ಟಿನಿಂದ ಆರಂಭವಾದ ರಾಜಕೀಯ ಅಸ್ಥಿರತೆಯಿಂದ ಪ್ರವಾಸೋದ್ಯಮ ನೆಲಕಚ್ಚಿತ್ತು. ಇದೀಗ ಚೇತರಿಕೆ ಹಾದಿಗೆ ಮರಳುತ್ತಿದೆ.