Asianet Suvarna News Asianet Suvarna News

ಯುಪಿಎ ಸರ್ಕಾರದ ವೇಳೆ ಭಾರತಕ್ಕೆ ಭೇಟಿ, ISI ಪರ ಬೇಹುಗಾರಿಕೆ ಮಾಡಿದ್ದೆ ಎಂದ ಪಾಕ್‌ ಪತ್ರಕರ್ತ!

ಪಾಕಿಸ್ತಾನದ ಖ್ಯಾತ ಅಂಕಣಕಾರ ನುಸ್ರತ್ ಮಿರ್ಜಾ ಅವರು ಇತ್ತೀಚೆಗೆ ಮಹತ್ವದ ಹೇಳಿಕೆ ನೀಡಿದ್ದು, ಭಾರತದಲ್ಲಿ ಯುಪಿಎ ಸರ್ಕಾರವಿದ್ದ ವೇಳೆ ಅಂದರೆ, 2007 ರಿಂದ 2010ರ ಸಮಯದಲ್ಲಿ ದೆಹಲಿ ಹಾಗೂ ಆಲಿಗಢದಲ್ಲಿ ನಡೆದ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ವೇಳೆ ತಾವು ಐಎಸ್ಐಗೆ ಬೇಹುಗಾರಿಕೆ ನಡೆಸಿದ್ದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
 

Pakistani columnist Nusrat Mirza says  spying for ISI on India visits during UPA government san
Author
Bengaluru, First Published Jul 12, 2022, 10:41 PM IST

ನವದೆಹಲಿ (ಜುಲೈ 12): ಪಾಕಿಸ್ತಾನದ ಅಂಕಣಕಾರ ನುಸ್ರತ್ ಮಿರ್ಜಾ ಅವರು ತಮ್ಮ ಭಾರತ ಪ್ರವಾಸದ ಸಮಯದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಗೂಢಚಾರಿಕೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. 2007 ರಿಂದ 2010 ರ ಅವಧಿಯಲ್ಲಿ ಭಾರತದ ರಾಜಧಾನಿ ದೆಹಲಿ ಮತ್ತು ಅಲಿಗಢದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೇಳೆ, ಐಎಸ್ಐಗೆ ಬೇಹುಗಾರಿಕೆ ನಡೆಸಿದ್ದಾಗಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.  ಈ ಕುರಿತಾಗಿ ಇಂಡಿಯಾ ಟುಡೇ ಪತ್ರಿಕೆ ಕೂಡ ಪರಾಮರ್ಶೆ ಮಾಡಿದ್ದು,  2009ರ ಅಕ್ಟೋಬರ್ 27 ರಂದು ದೆಹಲಿಯ ಒಬೆರಾಯ್ ಹೋಟೆಲ್‌ನಲ್ಲಿ ನಡೆದ ಭಯೋತ್ಪಾದನೆ ವಿರುದ್ಧದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಿರ್ಜಾ ಭಾಗವಹಿಸಿದ್ದರು. ಪಾಕಿಸ್ತಾನಿ ಲೇಖಕರನ್ನು ಅಹ್ಮದ್ ಬುಖಾರಿ, ಜಾಮಾ ಮಸೀದಿಯ ಶಾಹಿ ಇಮಾಮ್ ಮತ್ತು ಯಾಹ್ಯಾ ಬುಖಾರಿ ಸ್ವಾಗತಿಸಿದ್ದರು. ಜಾಮಾ ಮಸೀದಿ ಯುನೈಟೆಡ್ ಫೋರಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಸಂಪುಟ ಸಚಿವ ಗುಲಾಂ ನಬಿ ಆಜಾದ್ ಕೂಡ ಭಾಗವಹಿಸಿದ್ದರು. ಮಧು ಕಿಶ್ವರ್ ಸೇರಿದಂತೆ ಇತರರು ಆಹ್ವಾನಿತರಾಗಿದ್ದರು. ಜುಲೈ 11 ರಂದು, ಮಿರ್ಜಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಇಲಾಖೆಯಿಂದ ವಿವಿಧ 'ಸವಲತ್ತು'ಗಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.


ಮೊಹಮದ್‌ ಹಮೀದ್‌ ಅನ್ಸಾರಿ (Mohammad Hamid Ansari,) ಅವರು ಭಾರತದ ಉಪರಾಷ್ಟ್ರಪತಿಯಾಗಿದ್ದ (India Vice President) ಸಮಯದಲ್ಲಿ ನನಗೆ ಭಾರತದಿಂದ ಆಹ್ವಾನ ಬಂದಿತ್ತು ಎಂದು ವರ್ಚುವಲ್‌ ಭಾಷಣದ ವೇಳೆ ನುಸ್ರತ್‌ ಮಿರ್ಜಾ (Nusrat Mirza) ಹೇಳಿದ್ದಾರೆ. "ಖುರ್ಷಿದ್ [ಪಾಕಿಸ್ತಾನದ (Pakistan ) ಮಾಜಿ ಮಂತ್ರಿ] ನಾನು ತಂದ ಮಾಹಿತಿಯನ್ನು [ಜನರಲ್ ಅಶ್ಫಾಕ್ ಪರ್ವೇಜ್] ಕಯಾನಿ [ಮಾಜಿ ಸೇನಾ ಮುಖ್ಯಸ್ಥ] ಅವರಿಗೆ ಹಸ್ತಾಂತರಿಸಲು (SPY) ನನಗೆ ಸೂಚನೆ ನೀಡಿದ್ದರು. ನಾನು ಅವರಿಗೆ ಮಾಹಿತಿಯನ್ನು ಹಸ್ತಾಂತರಿಸುವುದಿಲ್ಲ ಎಂದು ಹೇಳಿದೆ, ಆದರೆ ನೀವು ಬಯಸಿದರೆ, ನಾನು ನೀಡುತ್ತೇನೆ. ಅದರಂತೆ ನಾನು ಮಾಹಿತಿಯನ್ನು ನೀಡಿದ್ದೆ, ಅದನ್ನು ಅವರು ಕಯಾನಿಗೆ ಹಸ್ತಾಂತರಿಸಿದರು," ಎಂದು ಮಿರ್ಜಾ ಹೇಳಿದ್ದಾರೆ.

"ನಂತರ ಅವರು ನನಗೆ ಕರೆ ಮಾಡಿ ಈ ರೀತಿಯ ಹೆಚ್ಚಿನ ಮಾಹಿತಿ ಪಡೆಯಬಹುದೇ ಎಂದು ಕೇಳಿದರು. ನಾನು ನೀಡಿದ ಮಾಹಿತಿಯ ಮೇಲೆ ಕೆಲಸ ಮಾಡಲು ಕೇಳಿದೆ. ಅವರ ಬಳಿ ಸಂಶೋಧನಾ ವಿಭಾಗವಿದೆ. ಅವರ ಬಳಿ ಮಾಹಿತಿ ಇದೆ. ಅವರಿಗೆ ಭಾರತದಲ್ಲಿನ (India) ನಾಯಕತ್ವದಲ್ಲಿನ ದೌರ್ಬಲ್ಯಗಳ ಬಗ್ಗೆಯೂ ಅವರು ತಿಳಿದುಕೊಂಡಿದ್ದರು' ಎಂದು ಮಿರ್ಜಾ ಹೇಳಿದ್ದಾರೆ.

ಮಿರ್ಜಾಸ್ ಫೌಂಡೇಶನ್‌ ಚಿತ್ರಗಳು: ಮಿರ್ಜಾ ಅವರ ಪ್ರತಿಷ್ಠಾನವು ಪ್ರಕಟಿಸಿದ ಚಿತ್ರಗಳು ಅವರು 2007 ಮತ್ತು 2010 ರಲ್ಲಿ ಅತಿಥಿಯಾಗಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ  ಕೆನಡಿ ಸಭಾಂಗಣದಲ್ಲಿ "ವಿದ್ಯಾರ್ಥಿ ಸೆಮಿನಾರ್‌ಗಳಲ್ಲಿ" ಉಪನ್ಯಾಸಗಳನ್ನು ನೀಡುತ್ತಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ರೈಲ್ವೆ ಹಳಿಗಳನ್ನು ಸ್ಪೋಟಿಸಲು ಪಾಕ್ ಸಂಚು, ಗುಪ್ತಚರ ವಿಭಾಗದ ಎಚ್ಚರಿಕೆ!

“ಸಾಮಾನ್ಯವಾಗಿ, ನೀವು ಭಾರತಕ್ಕೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದಾಗ, ಅವರು ನಿಮಗೆ ಮೂರು ಸ್ಥಳಗಳಿಗೆ ಭೇಟಿ ನೀಡಲು ಮಾತ್ರ ಅನುಮತಿಸುತ್ತಾರೆ. ಆದರೆ, ಆ ಸಮಯದಲ್ಲಿ ಖುರ್ಷಿದ್ ಕಸೂರಿ ಅವರು ವಿದೇಶಾಂಗ ಸಚಿವರಾಗಿದ್ದರು, ಅವರು ಏಳು ನಗರಗಳಿಗೆ ವೀಸಾ ಪಡೆಯಲು ನನಗೆ ಸಹಾಯ ಮಾಡಿದರು, ”ಎಂದು ಅವರು ಈ ಹಿಂದೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ಸಂದರ್ಶನದಲ್ಲಿ ಪತ್ರಕರ್ತ ಶಕೀಲ್ ಚೌಧರಿ ಅವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ : ಬೆಂಗಳೂರಲ್ಲಿ ವ್ಯಕ್ತಿ ಅರೆಸ್ಟ್

ಫೆಬ್ರವರಿ 2010 ರ ಚಿತ್ರಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಅನ್ಸಾರಿ ಆಡಿಟೋರಿಯಂನಲ್ಲಿ ನಡೆದ ಸರ್ವಧರ್ಮೀಯ ಧಾರ್ಮಿಕ ಸಮ್ಮೇಳನದಲ್ಲಿ ಮಿರ್ಜಾ ಅವರು ಪಾಲ್ಗೊಂಡಿದ್ದರು. ಫೆಬ್ರವರಿ 2010 ರಲ್ಲಿ, ಅವರು ದೆಹಲಿಯ ಜಾಮಿಯಾ ಮಿಲಿಯಾದಲ್ಲಿ ಸರ್ವಧರ್ಮೀಯ ಧಾರ್ಮಿಕ ಸೆಮಿನಾರ್‌ನಲ್ಲಿ ಕೂಡ ಭಾಗವಹಿಸಿದ್ದರು. ಮಿರ್ಜಾ ಅವರೊಂದಿಗೆ ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ನಾಯಕರ ಗುಂಪು ಕೂಡ ಇತ್ತು, ಇದರಲ್ಲಿ ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ ಡಾ ಅರೈಶ್ ಸಿಂಗ್ ಕೂಡ ಸೇರಿದ್ದರು.

ಭಾರತಕ್ಕೆ ಭೇಟಿ ನೀಡಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ಅವರು, "ನಾನು ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ನಾನು ದೆಹಲಿ, ಬೆಂಗಳೂರು, ಚೆನ್ನೈ, ಪಾಟ್ನಾ ಮತ್ತು ಕೋಲ್ಕತ್ತಾಗೆ ಭೇಟಿ ನೀಡಿದ್ದೇನೆ. 2011 ರಲ್ಲಿ ಮಿಲ್ಲಿ ಗೆಜೆಟ್‌ನ ಪ್ರಕಾಶಕ ಜಫರುಲ್ ಇಸ್ಲಾಂ ಖಾನ್ ಅವರನ್ನು ಭೇಟಿ ಮಾಡಿದ್ದೇನೆ." ಎಂದಿದ್ದಾರೆ.

Follow Us:
Download App:
  • android
  • ios