ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಜೈಲಿನಲ್ಲಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ಆದೇಶಿಸಿದೆ. ಈ ಬೆಳವಣಿಗೆಯು ಪಾಕಿಸ್ತಾನದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಸರ್ಕಾರದ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ, ಕ್ರಿಕೆಟ್‌ ಲೋಕದ ದಂತಕಥೆ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಜೈಲಿನಲ್ಲಿ ತೀವ್ರ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಅಡಿಯಾಲ ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳಿಗೆ ಆದೇಶಿಸಿದೆ. ಈ ಬೆಳವಣಿಗೆಯಿಂದಾಗಿ ಪಾಕಿಸ್ತಾನ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಶೆಹಬಾಜ್ ಷರೀಫ್ ನೇತೃತ್ವದ ನಾಗರಿಕ ಸರ್ಕಾರ ಮತ್ತು ಜನರಲ್ ಅಸಿಮ್ ಮುನೀರ್ ನೇತೃತ್ವದ ಮಿಲಿಟರಿ ಆಡಳಿತವು ತಮ್ಮ ರಾಜಕೀಯ ವೈರಿಗಳ ವಿಷಯದಲ್ಲಿ ಕ್ರೂರವಾಗಿ ನಡೆದುಕೊಳ್ಳುತ್ತಿದೆಯೇ? ಮಾಜಿ ಪ್ರಧಾನಿಗೇ ಈ ಗತಿಯಾದರೆ, ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ ಸಾಮಾನ್ಯ ಕೈದಿಗಳ ಸ್ಥಿತಿ ಏನು? ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ.

ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶದಲ್ಲೇನಿದೆ?

ಪಿಟಿಐ ಪಕ್ಷ ಹಾಗೂ ಇಮ್ರಾನ್ ಖಾನ್ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಖಾನ್ ಅವರ ಇತ್ತೀಚಿನ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿ ಕಳವಳ ವ್ಯಕ್ತಪಡಿಸಿತು.

ಪಿಟಿಐ ವಕ್ತಾರ ನಯೀಮ್ ಹೈದರ್ ಪಂಜುತಾ ನೀಡಿರುವ ಮಾಹಿತಿಯಂತೆ, ಇಮ್ರಾನ್ ಖಾನ್ ಅವರನ್ನು ಮುಂದಿನ 48 ಗಂಟೆಗಳ ಒಳಗೆ ‘ಶಿಫಾ ಅಂತರರಾಷ್ಟ್ರೀಯ ಆಸ್ಪತ್ರೆ’ಗೆ (Shifa International Hospital) ಸ್ಥಳಾಂತರಿಸಬೇಕು ಮತ್ತು ಸೆಪ್ಟೆಂಬರ್ 16 ರವರೆಗೆ ಅವರಿಗೆ ಅಲ್ಲಿಯೇ ಚಿಕಿತ್ಸೆ ನೀಡಬೇಕು. ಖಾನ್ ಅವರಿಗೆ ವಾರಕ್ಕೊಮ್ಮೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು. ಅವರ ಚಿಕಿತ್ಸೆಗಾಗಿ ವೈಯಕ್ತಿಕ ವೈದ್ಯ ಹಾಗೂ ಸಹೋದರಿ ಡಾ. ಉಜ್ಮಾ ಖಾನ್ ಅವರನ್ನೊಳಗೊಂಡ ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಬೇಕು. ಆದಾಗ್ಯೂ, ಇಮ್ರಾನ್ ಖಾನ್ ಅವರ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಬಾರದು ಅಥವಾ ಈ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯ ವಕೀಲರಿಗೆ ಮತ್ತು ಕುಟುಂಬಕ್ಕೆ ನಿರ್ದೇಶಿಸಿದೆ.

ಈ ಆದೇಶವನ್ನು ಸ್ವಾಗತಿಸಿರುವ ಪಿಟಿಐ ವಕ್ತಾರ ಜುಲ್ಫಿಕರ್ ಬುಖಾರಿ, "ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರ. ಆದರೆ ಈ ಆದೇಶವೇನಾದರೂ ಮೊದಲೇ ಬಂದಿದ್ದರೆ, ಇಮ್ರಾನ್ ಖಾನ್ ಅವರ ಕಣ್ಣಿನ ದೃಷ್ಟಿ ಮತ್ತು ಸಾಮಾನ್ಯ ಆರೋಗ್ಯ ಇಷ್ಟೊಂದು ಹದಗೆಡುತ್ತಿರಲಿಲ್ಲ. ಎಲ್ಲಾ ವೈದ್ಯರು ತೃಪ್ತರಾಗುವವರೆಗೂ ಅವರು ಆಸ್ಪತ್ರೆಯಲ್ಲೇ ಇರಬೇಕು" ಎಂದು ಹೇಳಿದ್ದಾರೆ.

ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿ ಇಮ್ರಾನ್ ಖಾನ್!

ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ (X) ಪೋಸ್ಟ್ ಮಾಡಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ, "ನಾನು ಇಮ್ರಾನ್ ಖಾನ್ ಅವರನ್ನು 35 ವರ್ಷಗಳಿಂದ ಬಲ್ಲೆ. ಒತ್ತಡ ಎಂಬುದು ಅವರಿಗೆ ಎಂದಿಗೂ ದೌರ್ಬಲ್ಯವಾಗಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಸುದೀರ್ಘ ಪ್ರತ್ಯೇಕತೆಯು ಅವರ ದೇಹ ಹಾಗೂ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಂಧನದಲ್ಲಿದ್ದಾಗ ಇಮ್ರಾನ್ ಖಾನ್ ತಮ್ಮ ಬಲಗಣ್ಣಿನ ದೃಷ್ಟಿಯನ್ನು ಗಣನೀಯವಾಗಿ ಕಳೆದುಕೊಂಡಿದ್ದಾರೆ ಎಂದು ಅವರ ವಕೀಲರು ಕೋರ್ಟ್‌ಗೆ ತಿಳಿಸಿದ್ದರು. ತದನಂತರ ರಚನೆಯಾದ ವೈದ್ಯಕೀಯ ಮಂಡಳಿಯು ಅವರ ದೃಷ್ಟಿ ಸ್ವಲ್ಪ ಸುಧಾರಿಸಿದೆ ಎಂದು ವರದಿ ನೀಡಿತ್ತು.

ಇಮ್ರಾನ್ ಖಾನ್ ವಿರುದ್ಧ ಇರುವ ಪ್ರಮುಖ 100+ ಪ್ರಕರಣಗಳು

2022 ರಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರ ಕಳೆದುಕೊಂಡ ನಂತರ, ಸೇನಾ ಮುಖ್ಯಸ್ಥ ಜನರಲ್ ಮುನೀರ್ ಮತ್ತು ಪ್ರಸ್ತುತ ಸರ್ಕಾರದ ವಿರುದ್ಧ ತಿರುಗಿಬಿದ್ದ ಇಮ್ರಾನ್ ಖಾನ್ ಮೇಲೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.

1. ಭೂ ಲಂಚ ಪ್ರಕರಣ (ಅಲ್-ಖಾದಿರ್ ಟ್ರಸ್ಟ್ ಕೇಸ್)

ಆರೋಪ: 2018 ರಲ್ಲಿ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಸ್ಥಾಪಿಸಿದ 'ಅಲ್-ಖಾದಿರ್ ಟ್ರಸ್ಟ್' ಮೂಲಕ ರಿಯಲ್ ಎಸ್ಟೇಟ್ ಉದ್ಯಮಿಯಿಂದ ಲಂಚದ ರೂಪದಲ್ಲಿ ₹7 ಬಿಲಿಯನ್ (ಸುಮಾರು $25 ಮಿಲಿಯನ್) ಮೌಲ್ಯದ ಭೂಮಿಯನ್ನು ಪಡೆದಿದ್ದಾರೆ ಎಂಬ ಆರೋಪವಿದೆ.

ಶಿಕ್ಷೆ: ಈ ಪ್ರಕರಣದಲ್ಲಿ 2025 ರಲ್ಲಿ ನ್ಯಾಯಾಲಯ ಇಬ್ಬರಿಗೂ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

2. ರಾಜ್ಯ ರಹಸ್ಯ ಸೋರಿಕೆ ಪ್ರಕರಣ (ಸೈಫರ್ ಕೇಸ್)

ಆರೋಪ: 2022 ರಲ್ಲಿ ವಾಷಿಂಗ್ಟನ್‌ನಲ್ಲಿದ್ದ ಪಾಕಿಸ್ತಾನಿ ರಾಯಭಾರಿ ಕಳುಹಿಸಿದ್ದ ಅತ್ಯಂತ ರಹಸ್ಯ ರಾಜತಾಂತ್ರಿಕ ಕೇಬಲ್ (Cipher) ಅನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಆರೋಪ.

ವಿವರ: ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದಕ್ಕಾಗಿ ಅಮೆರಿಕ ಮತ್ತು ಪಾಕ್ ಮಿಲಿಟರಿ ಸೇರಿ ತನ್ನ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದವು ಎಂಬುದಕ್ಕೆ ಈ ಕೇಬಲ್ ಸಾಕ್ಷಿ ಎಂದು ಖಾನ್ ವಾದಿಸಿದ್ದರು.

ಶಿಕ್ಷೆ: 2024 ರಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತಾದರೂ, ನಂತರದ ದಿನಗಳಲ್ಲಿ ಮೇಲ್ಮನವಿ ನ್ಯಾಯಾಲಯವು ಈ ಶಿಕ್ಷೆಯನ್ನು ರದ್ದುಗೊಳಿಸಿತು.

3. ತೋಷಖಾನಾ ( ದುಬಾರಿ ಉಡುಗೊರೆ) ಪ್ರಕರಣ

ಆರೋಪ: 2018-2022 ರ ಪ್ರಧಾನಿ ಅವಧಿಯಲ್ಲಿ ವಿದೇಶಿ ಗಣ್ಯರಿಂದ ಸಿಕ್ಕಿದ್ದ 140 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೂ ($504,686) ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ದುಬೈನಲ್ಲಿ ಮಾರಾಟ ಮಾಡಿ ಲಾಭ ಗಳಿಸಿದ ಆರೋಪ.

ಉಡುಗೊರೆಗಳ ಪಟ್ಟಿ: ರೋಲೆಕ್ಸ್ ಸೇರಿದಂತೆ 7 ದುಬಾರಿ ಕೈಗಡಿಯಾರಗಳು, ಸುಗಂಧ ದ್ರವ್ಯಗಳು, ವಜ್ರದ ಆಭರಣಗಳು ಮತ್ತು ಡಿನ್ನರ್ ಸೆಟ್‌ಗಳು.

ಶಿಕ್ಷೆ: 2023 ರಲ್ಲಿ 3 ವರ್ಷಗಳ ಶಿಕ್ಷೆ ವಿಧಿಸಲಾಯಿತು. ನಂತರ ಅಮಾನತುಗೊಂಡಿತು. ಆದರೆ, ಜನವರಿ 2024 ರಲ್ಲಿ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಖಾನ್ ಮತ್ತು ಅವರ ಪತ್ನಿಗೆ ಮತ್ತೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಪ್ರಸ್ತುತ ಈ ಶಿಕ್ಷೆಯು ಮೇಲ್ಮನವಿ ಹಂತದಲ್ಲಿದ್ದು ಅಮಾನತಿನಲ್ಲಿದೆ.

4. ಕಾನೂನುಬಾಹಿರ ವಿವಾಹ ಪ್ರಕರಣ (ಇದ್ದತ್ ಕೇಸ್)

ಆರೋಪ: ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ಅವರ 2018 ರ ವಿವಾಹವು ಇಸ್ಲಾಮಿಕ್ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಬುಶ್ರಾ ಬೀಬಿ ತಮ್ಮ ಹಿಂದಿನ ಪತಿಗೆ ವಿಚ್ಛೇದನ ನೀಡಿದ ನಂತರ ಕಡ್ಡಾಯವಾಗಿ ಪಾಲಿಸಬೇಕಾದ "ಇದ್ದತ್" (ಕಾಯುವ ಅವಧಿ) ಪೂರ್ಣಗೊಳಿಸುವ ಮುನ್ನವೇ ನಿಕ್ಕಾ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

ಶಿಕ್ಷೆ: ವಿಚಾರಣಾ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತಾದರೂ, ಜುಲೈ 2024 ರಲ್ಲಿ ನ್ಯಾಯಾಲಯವು ಇಬ್ಬರನ್ನೂ ಈ ಆರೋಪದಿಂದ ಖುಲಾಸೆಗೊಳಿಸಿತು.

5. ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಭಯೋತ್ಪಾದನೆ ಪ್ರಕರಣ

ಆರೋಪ: ಮೇ 2023 ರಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದಾಗ, ಅವರ ಬೆಂಬಲಿಗರು ಪಾಕಿಸ್ತಾನ ಮಿಲಿಟರಿ ಕೇಂದ್ರಗಳು ಮತ್ತು ಸರ್ಕಾರಿ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿದ್ದರು. ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಖಾನ್ ಅವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ವಿಚಾರಣೆ ನಡೆಯುತ್ತಿದೆ.

ಪ್ರಸ್ತುತ ಇಮ್ರಾನ್ ಖಾನ್ ವಿರುದ್ಧದ ಪ್ರಮುಖ ಶಿಕ್ಷೆಗಳು ಮೇಲ್ಮನವಿ ನ್ಯಾಯಾಲಯಗಳಲ್ಲಿ ಅಮಾನತಿನಲ್ಲಿವೆಯಾದರೂ, ಹೊಸ ಪ್ರಕರಣಗಳು ಮತ್ತು ಸುದೀರ್ಘ ಕಾನೂನು ಪ್ರಕ್ರಿಯೆಗಳಿಂದಾಗಿ ಅವರು ಜೈಲಿನಲ್ಲೇ ಉಳಿಯುವಂತಾಗಿತ್ತು. ಈಗ ಸುಪ್ರೀಂ ಕೋರ್ಟ್ ನೀಡಿರುವ ವೈದ್ಯಕೀಯ ಜಮೀನು ಆದೇಶವು ಅವರಿಗೆ ಹತಾಶೆಯ ನಡುವೆ ಸಣ್ಣ ಸಮಾಧಾನ ತಂದಿದೆ.