ಪಾಕಿಸ್ತಾನದಲ್ಲಿರುವ ಹಿಂದುಗಳ ಸ್ಥಿತಿ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಭಾರತದ ಗಡಿ ದಾಟಿ ರಾಜಸ್ಥಾನಕ್ಕೆ ಬಂದ ಅಪ್ರಾಪ್ತ ಜೋಡಿಯೊಂದು ಮರುಭೂಮಿಯಲ್ಲಿ ನೀರಿನ ದಾಹ ತಾಳದೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಜೈಸಲ್ಮೇರ್‌: ಪಾಕಿಸ್ತಾನದಲ್ಲಿರುವ ಹಿಂದುಗಳ ಸ್ಥಿತಿ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಭಾರತದ ಗಡಿ ದಾಟಿ ರಾಜಸ್ಥಾನಕ್ಕೆ ಬಂದ ಅಪ್ರಾಪ್ತ ಜೋಡಿಯೊಂದು ಮರುಭೂಮಿಯಲ್ಲಿ ನೀರಿನ ದಾಹ ತಾಳದೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ರಾಜಸ್ಥಾನದ ಜೈಸಲ್ಮೇರ್‌ನ ಸಾಧೇವಾಲಾ ಸೆಕ್ಟರ್‌ನಲ್ಲಿ ಗಡಿಯಿಂದ 10ರಿಂದ 12 ಕಿ.ಮೀ. ದೂರದಲ್ಲಿ ಹಿಂದು ಹುಡುಗಿ ಶಾಂತಿ (14) ಮತ್ತು ರವಿಕುಮಾರ್‌ (17) ಅವರ ಶವ ಪತ್ತೆಯಾಗಿವೆ. ಅವರ ಬಳಿ ಇದ್ದ ಪಾಕ್‌ ಐಡಿ ಕಾರ್ಡ್‌ಗಳೂ ಸಿಕ್ಕಿವೆ.

ಇವರು ಪ್ರೇಮ ಸಂಬಂಧದಲ್ಲಿ ಇರಬಹುದು. ಹೀಗಾಗಿ ಭಾರತದಲ್ಲಿ ಉತ್ತಮ ಜೀವನ ನಡೆಸುವ ಆಸೆಯಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ.

ರವಿಯ ಬೈಕ್‌ ಪಾಕ್‌ ಗಡಿಯಿಂದ ಆಚೆ 20 ಕಿ.ಮೀ. ದೂರದಲ್ಲಿ ಸಿಕ್ಕಿದೆ. ಶವ ಭಾರತದ ಗಡಿಯಿಂದ ಈಚೆ 12 ಕಿ.ಮೀ. ದೂರದಲ್ಲಿ ಸಿಕ್ಕಿದೆ. ಇವರ ಶವದ ಬಳಿ ಖಾಲಿ ನೀರಿನ ಕ್ಯಾನ್‌ ಸಿಕ್ಕಿದೆ. ಮರುಭೂಮಿಯಲ್ಲಿ ನಡೆದು ಬರುವಾಗ ಇವರು ಸಾವನ್ನಪ್ಪಿರಬಹುದು ಎಂದು ಇದರಿಂದ ಕಂಡುಬರುತ್ತದೆ. ಮರಣೋತ್ತರ ವರದಿ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮುನ್ನ ಇವರು ಪ್ರವಾಸಿ ವೀಸಾಗೆ ಅರ್ಜಿ ಸಲ್ಲಿಸಿದ್ದರೂ ವಿಫಲವಾಗಿತ್ತು. ಹೀಗಾಗಿ ಇವರು ಅಕ್ರಮವಾಗಿ ಗಡಿ ದಾಡಿ ಬಂದಿರಬಹುದು ಎಂದು ಶಂಕಿಸಲಾಗಿದೆ.

ಭಾರತದ ದಾಳಿಗೆ ಪಾಕ್‌ ಉಗ್ರ ನೆಲೆ ಛಿದ್ರ : ಇನ್ನಷ್ಟು ಚಿತ್ರಗಳು ಬಹಿರಂಗ

ನವದೆಹಲಿ: ಕಳೆದ ತಿಂಗಳು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರದ ತೀವ್ರತೆ ಎಷ್ಟಿತ್ತು ಎಂಬುದನ್ನು ತೋರಿಸುವ ಮತ್ತಷ್ಟು ಚಿತ್ರಗಳು ಬಹಿರಂಗವಾಗಿವೆ. ಮ್ಯಾಕ್ಸಾರ್‌ ಸಂಸ್ಥೆ ಸೆರೆಹಿಡಿದಿರುವ ಉಪಗ್ರಹ ಚಿತ್ರಗಳಲ್ಲಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಮುಝಾಫರಾಬಾದ್‌ನ ಸೈಯದ್ನಾ ಬಿಲಾಲ್ ಉಗ್ರನೆಲೆ ಮತ್ತು ಕೋಟ್ಲಿ-ಗುಲ್ಪುರ ಕ್ಯಾಂಪ್‌ಗಳು ದಾಳಿಯಿಂದ ಛಿದ್ರವಾಗಿರುವುದು ಕಂಡುಬಂದಿವೆ.

ಅವುಗಳ ಮೇಲೆ ನಿಖರ ದಾಳಿ ನಡೆಸಲಾಗಿದ್ದು, ಇದಕ್ಕೆ ಡ್ರೋನ್‌ಗಳನ್ನು ಬಳಸಲಾಗಿತ್ತು ಎನ್ನಲಾಗಿದೆ. ಜೈಷ್‌ ಸಂಘಟನೆಗೆ ಸೇರಿದ್ದ ಬಿಲಾಲ್ ಕ್ಯಾಂಪ್‌ನಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ನಿರ್ವಹಣೆ, ಕಾಡಿನಲ್ಲಿ ಕಾರ್ಯನಿರ್ವಹಿಸುವುದು ಇತ್ಯಾದಿಗಳನ್ನು ಕಲಿಸಲಾಗುತ್ತಿತ್ತು. ಅತ್ತ ಕೋಟ್ಲಿಯ ಜೈಷ್‌ ಕ್ಯಾಂಪ್‌ನಲ್ಲಿ ರಜೌರಿ ಮತ್ತು ಪೂಂಚ್‌ ದಾಳಿಗಳ ಸಿದ್ಧತೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಈ ಚಿತ್ರಗಳಿಂದ ಪಾಕಿಸ್ತಾನದ ಉಗ್ರರಿಗೆ ಆಗಿರುವ ಅಪಾರ ಹಾನಿಯ ಪ್ರಮಾಣ ಮತ್ತು ತೀವ್ರತೆ ಬಯಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಭಾರತದ ನಿಖರ ದಾಳಿಯ ಸಾಮರ್ಥ್ಯದ ಅನಾವರಣವೂ ಆಗಿದೆ.