ಪಾಕಿಸ್ತಾನ ಸರ್ಕಾರ, ಟ್ರಂಪ್ ಅವರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಔಪಚಾರಿಕವಾಗಿ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಶನಿವಾರ ಘೋಷಿಸಿದೆ.

ಇಸ್ಲಾಮಾಬಾದ್ : ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಯುದ್ಧದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ‘ನಿರ್ಣಾಯಕ ರಾಜತಾಂತ್ರಿಕ ಹಸ್ತಕ್ಷೇಪ’ ಮಾಡಿ ಯುದ್ಧ ತಡೆದರು ಎಂದು ಹೇಳಿರುವ ಪಾಕಿಸ್ತಾನ ಸರ್ಕಾರ, ಟ್ರಂಪ್ ಅವರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಔಪಚಾರಿಕವಾಗಿ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಶನಿವಾರ ಘೋಷಿಸಿದೆ.

‘ಪಾಕಿಸ್ತಾನ ಸರ್ಕಾರವು ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇತ್ತೀಚಿನ ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ನಿರ್ಣಾಯಕ ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ಪ್ರಮುಖ ನಾಯಕತ್ವವನ್ನು ಗುರುತಿಸಿ ಈ ಕ್ರಮ ಜರುಗಿಸಲಾಗಿದೆ. ಯುದ್ಧ ನಿಲ್ಲಿಸಲು ಅವರು ತಮ್ಮ ದೂರದೃಷ್ಟಿ ಮತ್ತು ಅದ್ಭುತ ರಾಜತಾಂತ್ರಿಕತೆಯನ್ನು ಪ್ರದರ್ಶಿಸಿದರು’ ಎಂದು ಪಾಕ್‌ ಸರ್ಕಾರ ಟ್ವೀಟ್‌ ಮಾಡಿದೆ.

ಇತ್ತೀಚೆಗೆ ಟ್ರಂಪ್ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಅವರಿಗೆ ಶ್ವೇತಭವನದಲ್ಲಿ ಆತಿಥ್ಯ ನೀಡಿದ್ದರು. ‘ಮುನೀರ್‌ ಅವರು ಟ್ರಂಪ್‌ರನ್ನು ನೊಬೆಲ್‌ ಪ್ರಶಸ್ತಿಗೆ ಶಿಫಾರಸು ಮಾಡಿದ್ದರು. ಅದಕ್ಕಾಗಿಯೇ ಅವರನ್ನು ಟ್ರಂಪ್‌ ಔತಣಕ್ಕೆ ಕರೆದಿದ್ದರು’ ಎಂದು ಶ್ವೇತಭವನ ವಕ್ತಾರೆ ಹೇಳಿದ್ದರು. ಇದಾದ 3 ದಿನಗಳ ನಂತರ ಈ ಘೋಷಣೆ ಹೊರಬಿದ್ದಿದೆ.

‘ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನು ನಿಲ್ಲಿಸಿದ್ದೇನೆ’ ಎಂದು ಟ್ರಂಪ್ 15 ಸಲ ಹೇಳಿದ್ದರು. ಆದರೆ ಯುದ್ಧವಿರಾಮದ ಚರ್ಚೆಯಲ್ಲಿ ಅನ್ಯ ದೇಶಗಳು ಹಸ್ತಕ್ಷೇಪ ಮಾಡಿಲ್ಲ. ಭಾರತ-ಪಾಕಿಸ್ತಾನ ದ್ವಿಪಕ್ಷೀಯವಾಗಿ ಕದನವಿರಾಮ ಸಾರಿವೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ ನಂತರ ಟ್ರಂಪ್‌ ತಮ್ಮ ಮಾತಿಂದ ಹಿಂದೆ ಸರಿದಿದ್ದರು.

ಪಾಕ್‌ ಶಿಫಾರಸು ಏಕೆ?:

ತಾನೇಕೆ ಟ್ರಂಪ್‌ ಹೆಸರು ಶಿಫಾರಸು ಮಾಡಿದ್ದೇನೆ ಎಂಬುದನ್ನು ವಿಸ್ತಾರವಾಗಿ ವಿವರಿಸಿರುವ ಪಾಕಿಸ್ತಾನ, ‘ವೇಗವಾಗಿ ಹದಗೆಡುತ್ತಿದ್ದ ಪರಿಸ್ಥಿತಿಯನ್ನು ಅಮೆರಿಕ ಅಧ್ಯಕ್ಷರು ತಿಳಿಗೊಳಿಸಿದರು, ಅಂತಿಮವಾಗಿ ಕದನ ವಿರಾಮ ಖಚಿತಪಡಿಸಿಕೊಂಡರು ಹಾಗೂ 2 ಪರಮಾಣು ರಾಷ್ಟ್ರಗಳ ನಡುವಿನ ವಿಶಾಲ ಸಂಘರ್ಷವನ್ನು ತಪ್ಪಿಸಿದರು. ಇಲ್ಲದಿದ್ದರೆ ಇದು ಲಕ್ಷಾಂತರ ಜನರ ಮೇಲೆ ದುರಂತದಾಯಕ ಪರಿಣಾಮ ಆಗುತ್ತಿತ್ತು’ ಎಂದು ಹೇಳಿದೆ.

‘ಟ್ರಂಪ್‌ ಹಸ್ತಕ್ಷೇಪವು ಶಾಂತಿಗಾಗಿ ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಟ್ರಂಪ್ ಪ್ರಾಮಾಣಿಕ ಕೊಡುಗೆ ನೀಡಿದ್ದಾರೆ’ ಎಂದೂ ಹೊಗಳಿದೆ.

ಟ್ರಂಪ್‌ಗೇಕೆ ಪ್ರಶಸ್ತಿ

ಭಾರತ-ಪಾಕ್‌ ಬಿಕ್ಕಟ್ಟಿನ ವೇಳೆ ಅಧ್ಯಕ್ಷ ಟ್ರಂಪ್‌ರಿಂದ ನಿರ್ಣಾಯಕ ಪಾತ್ರ

ಮಾತುಕತೆ ಮೂಲಕ ಟ್ರಂಪ್‌ ಕದನ ವಿರಾಮ ಖಚಿತಪಡಿಸಿಕೊಂಡರು

ಅವರ ಕ್ರಮದಿಂದ ಉಭಯ ದೇಶಗಳ ಅಣುಯುದ್ಧ ಭೀತಿ ದೂರವಾಯ್ತು

ಈ ರಾಜತಾಂತ್ರಿಕ ಹಸ್ತಕ್ಷೇಪ, ನಾಯಕತ್ವ ಗುರುತಿಸಿ ಹೆಸರು ಶಿಫಾರಸು

ಏನೇ ಮಾಡಿದರೂ ನನಗೆ

ನೊಬೆಲ್‌ ಸಿಗಲ್ಲ: ಟ್ರಂಪ್‌

ಕಾಂಗೋ - ವಾಂಡಾ ನಡುವೆ ಅದ್ಭುತ ಶಾಂತಿ ಒಪ್ಪಂದ ಏರ್ಪಡಿಸಿದ್ದೇನೆ. ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆ ಶಾಂತಿ ಕಾಪಾಡಿದೆ. ಮಧ್ಯಪ್ರಾಚ್ಯದಲ್ಲಿ ಕೆಲವು ಒಪ್ಪಂದ ಮಾಡಿಸಿದೆ. ಸೆರ್ಬಿಯಾ ಮತ್ತು ಕೊಸೊವೊ ನಡುವಿನ ಯುದ್ಧವನ್ನು ನಿಲ್ಲಿಸಿದೆ. ಈಗ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದೇನೆ. ಆದರೆ ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ. ಆದರೆ ಫಲಿತಾಂಶಗಳು ಏನೇ ಇರಲಿ- ನಾನು ಏನು ಮಾಡಿದ್ದೇನೆ ಎಂದು ಜನರಿಗೆ ತಿಳಿದಿದೆ. ನನಗೆ ಅಷ್ಟೇ ಮುಖ್ಯ.

ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ