ಪಾಕಿಸ್ತಾನದಲ್ಲಿ ಟೊಮೇಟೋ ಕೆಜಿಗೆ 500, ಈರುಳ್ಳಿ ಕೆಜಿಗೆ 400 ರೂಪಾಯಿ, ಭಾರತದ ಸಹಾಯ ಬೇಡಿದ ನೆರೆಯ ದೇಶ!
ಬಲೂಚಿಸ್ತಾನ ಹಾಗೂ ಸಿಂಧ್ ಭಾಗದಲ್ಲಿ ಹಲವು ದಿನಗಳಿಂದ ಆಗುತ್ತಿರುವ ಭಾರೀ ಮಳೆಯಿಂದಾಗಿ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಸಾವಿರಾರು ಎಕರೆ ಟೊಮೇಟೋ, ಈರುಳ್ಳಿ ಹಾಗೂ ತರಕಾರಿ ಫಸಲು ಹಾಳಾಗಿದೆ. ಈಗಾಗಳೇ ಬೆಲೆಏರಿಕೆಯಿಂದ ತತ್ತರಿಸಿದ್ದ ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ಟೊಮೇಟೋ ಕೆಜಿಗೆ 500 ರೂಪಾಯಿ ಆಗಿದ್ದರೆ, ಈರುಳ್ಳಿ ಕೆಜಿಗೆ 400 ರೂಪಾಯಿಯ ಗಡಿ ಮುಟ್ಟಿದೆ.
ನವದೆಹಲಿ (ಆ.29): ನೆರೆಯ ದೇಶ ಪಾಕಿಸ್ತಾನ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸಂಕಷ್ಟಗಳನ್ನು ಎದುರಿಸುತ್ತಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ, ಪಾತಾಳಕ್ಕೆ ಕುಸಿದಿದ್ದು, ಅದರ ನಡುವೆಯೂ ಜನ ಬದುಕುತ್ತಿದ್ದಾರೆ. ಈವರೆಗೂ ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಇನ್ನೇನು ಆರ್ಥಿಕ ಸಹಾಯ ಕೇಳಬೇಕು ಎನ್ನುವ ನಿಟ್ಟಿನಲ್ಲಿ ರಾಜಕೀಯ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಕೊನೆಗೆ ಪಾಕಿಸ್ತಾನದಲ್ಲಿ ಹೊಸ ಪಕ್ಷವೊಂದು ಅಧಿಕಾರಕ್ಕೆ ಬಂದು ಶೆಹಬಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಈ ಪ್ರಕೃತಿ ಕೂಡ ಪಾಕಿಸ್ತಾನದ ಮೇಲೆ ಮುನಿಸಿಕೊಂಡಿದೆ. ದೇಶದ ಬಹುತೇಕ ಭಾಗಗಳಲ್ಲಿ ಆಹಾರದ ಅಭಾವ ಹಾಗೂ ತೀವ್ರ ಬೆಲೆಏರಿಕೆ ಸಮಸ್ಯೆ ತಂದೊಡ್ಡಿದೆ. ಒಂದರ ಮೇಲೆ ಒಂದರಂತೆ ಇಲ್ಲಿನ ಜನತೆಗೆ ಸಮಸ್ಯೆಗಳು ಎದುರಾಗಿದ್ದರಿಂದ ಬದುಕುವುದೇ ದುಸ್ತರವಾಗಿದೆ. ಪಾಕಿಸ್ತಾನದಲ್ಲಿನ ಹಣದುಬ್ಬರ ಎಷ್ಟು ತೀವ್ರವಾಗಿದೆ ಎಂದರೆ, ದಿನಬಳಕೆಯ ಅಗತ್ಯ ತರಕಾರಿಗಳದರ ಗಗನಕ್ಕೇರಿದೆ. ಇತ್ತೀಚಿನ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಪ್ರತಿ ಕೆಜಿ ಟೊಮೇಟೋಗೆ 500 ರೂಪಾಯಿ ಆಗಿದ್ದರೆ, ಈರುಳ್ಳಿ ಬೆಲೆ ಕೆಜಿಗೆ 400 ರೂಪಾಯಿ ಆಗಿದೆ. ತರಕಾರಿಗಳ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಪಾಕಿಸ್ತಾನವೀಗ ಭಾರತದ ಸಹಾಯ ಕೋರಿದೆ.
ಪಿಟಿಐ ಈ ಕುರಿತಾಗಿ ವರದಿ ಮಾಡಿದ್ದು, ಲಾಹೋರ್‌ನ ತರಕಾರಿ ಮಾರುಕಟ್ಟೆಯ ಡೀಲರ್‌ಗಳು ಪಾಕಿಸ್ತಾನದ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಅದರಂತೆ ತರಕಾರಿಗಳ ಬೆಲೆ ನಿಯಂತ್ರಿಸಲು ಭಾರತದಿಂದ ಟೊಮೇಟೋ ಹಾಗೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಎದುರಾದ ಕಂಡೂಕೆಳರಿಯದ ಪ್ರವಾಹದಿಂದಾಗಿ ತರಕಾರಿಗಳು ಹಾಗೂ ಇತರ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಈ ಕಾರಣದಿಂದಾಗಿ, ಪಾಕಿಸ್ತಾನದಲ್ಲಿ ತರಕಾರಿ ಸೇರಿದಂತೆ ಅನೇಕ ಅಗತ್ಯ ಆಹಾರ ಪದಾರ್ಥಗಳ ಕೊರತೆಯ ಬಿಕ್ಕಟ್ಟು ಉಂಟಾಗಿದೆ. ಟೊಮೆಟೊ ಮತ್ತು ಈರುಳ್ಳಿ ಮಾತ್ರವಲ್ಲದೆ, ಲಾಹೋರ್ ಸೇರಿದಂತೆ ಪಾಕಿಸ್ತಾನದ ಪಂಜಾಬ್‌ನ ಹಲವು ಭಾಗಗಳಲ್ಲಿ, ಎಲ್ಲಾ ತರಕಾರಿಗಳ ಬೆಲೆ ದಾಖಲೆಯ ಮಟ್ಟದಲ್ಲಿದೆ.
ಲಾಹೋರ್ ಮಾರುಕಟ್ಟೆಯ ಸಗಟು ವ್ಯಾಪಾರಿ ಜವಾದ್ ರಿಜ್ವಿ ಈ ಕುರಿತಾಗಿ ಪಿಟಿಐ ಜೊತೆ ಮಾತನಾಡಿದ್ದಾರೆ. "ಭಾನುವಾರದಂದು ಲಾಹೋರ್ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೆಜಿಗೆ 500 ರೂ. ಮತ್ತು ಈರುಳ್ಳಿ ಕೆಜಿಗೆ 400 ರೂ.ಗೆ ಆಗಿತ್ತು. ಆದರೆ, ಭಾನುವಾರದಂದು ನಡೆದ ಹಾಟ್‌ನಲ್ಲಿ ಅವುಗಳ ಬೆಲೆ ಸುಮಾರು 100 ರೂ. ಸಾಮಾನ್ಯ ಮಾರುಕಟ್ಟೆಗಿಂತ ಕೆಜಿ ಕಡಿಮೆಯಾಗಿತ್ತು. ಪ್ರವಾಹದಿಂದಾಗಿ ಬಲೂಚಿಸ್ತಾನ, ಸಿಂಧ್ ಮತ್ತು ದಕ್ಷಿಣ ಪಂಜಾಬ್‌ನಿಂದ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಇದರಿಂದಾಗಿ ಟೊಮೆಟೊ, ಈರುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ರಿಜ್ವಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈರುಳ್ಳಿ ಮತ್ತು ಟೊಮೇಟೊ ಬೆಲೆ ಕೆಜಿಗೆ 700 ರೂಪಾಯಿ ದಾಟಬಹುದು ಎಂಬ ಆತಂಕ ಅವರದಾಗಿದೆ. ಅದೇ ರೀತಿ ಆಲೂಗಡ್ಡೆ ಕೂಡ ಕೆಜಿ ಕೆಲ ತಿಂಗಳ ಹಿಂದೆ 40 ರೂಪಾಯಿ ಇದ್ದರೆ, ಮುಂದಿನ ದಿನದಲ್ಲಿ ಇದು 120 ರೂಪಾಯಿ ತಲುಪಬಹುದು ಎನ್ನಲಾಗಿದೆ.
ತ್ರಿವರ್ಣ ಧ್ವಜ ತಿರಸ್ಕರಿಸಿದ ಅಮಿತ್ ಶಾ ಪುತ್ರ ಜಯ್ ಶಾ, ಕಾಂಗ್ರೆಸ್ ಟೀಕೆ!
ಲಾಹೋರ್ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶಹಜಾದ್ ಚೀಮಾ ಹೇಳುವ ಪ್ರಕಾರ, ತೊರ್ಕಾಮ್ ಗಡಿಯಲ್ಲಿ ಪ್ರತಿದಿನ 100 ಕಂಟೈನರ್ ಟೊಮೆಟೊ ಮತ್ತು ಸುಮಾರು 30 ಈರುಳ್ಳಿ ಕಂಟೈನರ್ ಬರುತ್ತಿವೆ. ಇವುಗಳಲ್ಲಿ ಎರಡು ಕಂಟೈನರ್ ಟೊಮ್ಯಾಟೊ ಮತ್ತು ಒಂದು ಕಂಟೈನರ್ ಈರುಳ್ಳಿ ಲಾಹೋರ್‌ಗೆ ಪ್ರತಿದಿನ ಬರುತ್ತಿದೆ. ಪಾಕಿಸ್ತಾನಿ ಪಂಜಾಬ್‌ನ ರಾಜಧಾನಿ ಲಾಹೋರ್‌ನಲ್ಲಿ ಅವರ ಬೇಡಿಕೆಯ ಪ್ರಕಾರ ಇದು ತುಂಬಾ ಕಡಿಮೆ. ಪ್ರವಾಹದಿಂದಾಗಿ ದೊಡ್ಡಮೆಣಸಿನಕಾಯಿಯಂಥ ತರಕಾರಿಗಳು ಸಹ ಲಭ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಭಾರತದಿಂದ ಟೊಮೆಟೊ ಮತ್ತು ಈರುಳ್ಳಿಯನ್ನು ಆರ್ಡರ್ ಮಾಡಬಹುದು ಎಂದು ಹೇಳಿದ್ದಾರೆ. ಬಲೂಚಿಸ್ತಾನದ ತಫ್ತಾನ್ ಗಡಿಯ ಮೂಲಕ ಇರಾನ್‌ನಿಂದ ಟೊಮೆಟೊ ಮತ್ತು ಈರುಳ್ಳಿ ಆಮದು ಮಾಡಿಕೊಳ್ಳಲು ಅವಕಾಶವಿದೆ ಎಂದು ಚೀಮಾ ಹೇಳಿದರು, ಆದರೆ ಇರಾನ್ ಸರ್ಕಾರವು ಆಮದು-ರಫ್ತು ಮೇಲಿನ ತೆರಿಗೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ, ಇದರಿಂದಾಗಿ ಅದು ದುಬಾರಿಯಾಗಲಿದೆ. ಸಿಂಧ್‌ನಲ್ಲಿಯೂ ಸಹ ಪ್ರವಾಹದಿಂದಾಗಿ ಹಣ್ಣು ಹಂಪಲು ಹಾಳಾಗಿದ್ದು, ಮುಂದಿನ ದಿನಗಳಲ್ಲಿ ಖರ್ಜೂರ, ಬಾಳೆಹಣ್ಣಿನ ಬೆಲೆಯೂ ಭಾರಿ ಜಿಗಿತ ಕಾಣಲಿದೆ ಎಂದರು. ಬಲೂಚಿಸ್ತಾನ ಮತ್ತು ಇತರ ಪ್ರದೇಶಗಳಿಂದ ಸೇಬುಗಳ ಪೂರೈಕೆಯನ್ನು ಸಹ ಮುಚ್ಚಲಾಗಿದೆ.
ಪ್ರವಾಹದಲ್ಲಿ ಮುಳುಗಿದ ಅರ್ಧ ಪಾಕಿಸ್ತಾನ: 1041 ಜನರ ಸಾವು
ಪಾಕಿಸ್ತಾನದ ಸುದ್ದಿ ವಾಹಿನಿ ಸಮಾ ಟಿವಿ ವರದಿಯ ಪ್ರಕಾರ, ಟೊಮ್ಯಾಟೊ ಬೆಲೆ ಸರ್ಕಾರಿ ಬೆಲೆಗೆ ಹೋಲಿಸಿದರೆ 6 ಪಟ್ಟು ಹೆಚ್ಚಾಗಿದೆ. ಸರಕಾರ ಟೊಮೇಟೊ ಕೆಜಿಗೆ 80 ರೂ. ದರ ನಿಗದಿ ಮಾಡಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 500 ರೂ.ಗೆ ಏರಿದೆ. ಅದೇ ರೀತಿ, ಈರುಳ್ಳಿಯ ಅಧಿಕೃತ ದರ ಕೆಜಿಗೆ 61 ರೂ. ಆದರೆ ಅದು ಕೆಜಿಗೆ 400 ರೂ.ಗಿಂತ ಸುಮಾರು 7 ಪಟ್ಟು ಹೆಚ್ಚು ಸಿಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರವಾಹದಿಂದಾಗಿ ಪಾಕಿಸ್ತಾನ ಕನಿಷ್ಠ $5.5 ಬಿಲಿಯನ್ ನಷ್ಟವಾಗಿದೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.