ಪ್ರವಾಹದಲ್ಲಿ ಮುಳುಗಿದ ಅರ್ಧ ಪಾಕಿಸ್ತಾನ: 1041 ಜನರ ಸಾವು
ಇತ್ತೀಚಿನ ದಶಕಗಳಲ್ಲೇ ಕಂಡುಕೇಳರಿಯದ ಮಳೆ ಕಂಡಿರುವ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪಿದ್ದು, ಅರ್ಧ ದೇಶವೇ ಪ್ರವಾಹದಲ್ಲಿ ಮುಳುಗಿದೆ.
ಇಸ್ಲಾಮಾಬಾದ್: ಇತ್ತೀಚಿನ ದಶಕಗಳಲ್ಲೇ ಕಂಡುಕೇಳರಿಯದ ಮಳೆ ಕಂಡಿರುವ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪಿದ್ದು, ಅರ್ಧ ದೇಶವೇ ಪ್ರವಾಹದಲ್ಲಿ ಮುಳುಗಿದೆ. ಸಾಮಾನ್ಯವಾಗಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಸರಾಸರಿ 150 ಮಿ.ಮೀ ಮಳೆ ಬರುತ್ತದೆ. ಆದರೆ ಈ ವರ್ಷ ಜೂನ್‌ನಿಂದಲೇ ಮಳೆ ಆರಂಭವಾಗಿ ಆ.26ರ ವೇಳೆಗಾಗಲೇ 355 ಮಿ.ಮೀನಷ್ಟು ಭಾರೀ ಮಳೆ ಸುರಿದ ಪರಿಣಾಮ ಭಾರೀ ಅನಾಹುತ ಉಂಟಾಗಿದೆ.
ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 3.3 ಕೋಟಿ ಜನರು ಅಂದರೆ ದೇಶದ ಒಟ್ಟು ಜನಸಂಖ್ಯೆಯ ಶೇ.15ರಷ್ಟು ಜನ ಬಾಧಿತರಾಗಿದ್ದಾರೆ. ಮಳೆ ಸಂಬಂಧಿ ಘಟನೆಗಳಿಗೆ ಇದುವರೆಗೆ 1041 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಕಳೆದ 24 ಗಂಟೆಯ ಅವಧಿಯಲ್ಲೇ 119 ಜನರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದಾಗಿ 3,451 ಕಿ.ಮೀ.ನ ರಸ್ತೆ, 147 ಸೇತುವೆ, 170 ವಾಣಿಜ್ಯ ಕಟ್ಟಡ, 9.49 ಲಕ್ಷ ಮನೆಗಳು ಹಾನಿಗೊಳಗಾಗಿವೆ. ಪ್ರವಾಹದ ರೌದ್ರ ನರ್ತನದ ಹಲವು ದೃಶ್ಯಾವಳಿಗಳು ಇಲ್ಲಿವೆ.
ಈ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದ್ದು, ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನ ಜನರಿಂದ ಸಹಾಯ ನೀಡುವಂತೆ ಕೋರಿದೆ. ಈ ನಡುವೆ ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ 10 ಕೋಟಿ ರು. ನೀಡಲಿದೆ. ಬ್ರಿಟನ್, ಟರ್ಕಿ, ಇರಾನ್, ಸಂಯುಕ್ತ ಅರಬ್ ರಾಷ್ಟ್ರಗಳು ಸಹಾಯ ನೀಡಲು ಮುಂದಾಗಿವೆ.
ಇತಿಹಾಸದಲ್ಲಿ ಕಂಡು ಕೇಳರಿಯದ ಪ್ರವಾಹಕ್ಕೆ ಪಾಕಿಸ್ತಾನ ಅಕ್ಷರಶಃ ತ್ತರಿಸಿದೆ, 1200 ಜನ ಸಾವನ್ನಪ್ಪಿದ್ದರೆ, 30 ಮಿಲಿಯನ್ ಜನ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. 10 ಮಿಲಿಯನ್ ಜನ ಮನೆ ಕಳೆದುಕೊಂಡಿದ್ದಾರೆ. 8 ಲಕ್ಷ ಜಾನುವಾರುಗಳು ಪ್ರವಾಹಕ್ಕೆ ಬಲಿಯಾಗಿವೆ. ಒಂದು ಮಿಲಿಯನ್ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. 40ಕ್ಕೂ ಹೆಚ್ಚು ಸಣ್ಣ ಡ್ಯಾಂಗಳು ಒಡೆದು ಹೋಗಿವೆ. ಜೊತೆಗೆ 200 ಕ್ಕೂ ಹೆಚ್ಚು ಸೇತುವೆಗಳು ನಾಶವಾಗಿದ್ದು, ಬಹುತೇಕ ಸ್ಥಳಗಳಿಗೆ ಸಂಪರ್ಕ ಕಡಿತಗೊಂಡಿದೆ.