Pakistans Fake Football Team ಎಫ್‌ಐಎ ಮೂಲಗಳ ಪ್ರಕಾರ, ಆಟಗಾರರು ಪೂರ್ಣ ಫುಟ್‌ಬಾಲ್ ಡ್ರೆಸ್‌ನಲ್ಲಿ ಪ್ರಯಾಣ ಮಾಡಿದ್ದಲ್ಲದೆ, ಪಾಕಿಸ್ತಾನ ಫುಟ್‌ಬಾಲ್ ಫೆಡರೇಶನ್ (ಪಿಎಫ್‌ಎಫ್) ಜೊತೆ ಸಂಪರ್ಕ ಇದೆ ಎಂದು ಹೇಳಿದ್ದರು.  

ನವದೆಹಲಿ (ಸೆ.17): ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ವೃತ್ತಿಪರ ಫುಟ್‌ಬಾಲ್ ಆಟಗಾರರ ವೇಷ ಧರಿಸಿ ಜಪಾನ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಪಾನ್ ಅಧಿಕಾರಿಗಳು ವಂಚನೆಯನ್ನು ಬಹಿರಂಗಪಡಿಸಿದ ನಂತರ ಆಟಗಾರರೆಂದು ಹೇಳಿಕೊಂಡು ಜಪಾನ್‌ಗೆ ಹೋಗಿದ್ದ ಇಪ್ಪತ್ತೆರಡು ಶಂಕಿತರನ್ನು ಬಂಧಿಸಲಾಗಿದೆ. ಎಫ್‌ಐಎ ಮೂಲಗಳ ಪ್ರಕಾರ, ಆಟಗಾರರು ಪೂರ್ಣ ಫುಟ್‌ಬಾಲ್ ಡ್ರೆಸ್‌ನಲ್ಲಿ ಪ್ರಯಾಣ ಮಾಡಿದ್ದಲ್ಲದೆ, ಪಾಕಿಸ್ತಾನ ಫುಟ್‌ಬಾಲ್ ಫೆಡರೇಶನ್ (ಪಿಎಫ್‌ಎಫ್) ಜೊತೆ ಸಂಪರ್ಕ ಇದೆ ಎಂದು ಹೇಳಿದ್ದರು. ವಿದೇಶಾಂಗ ಸಚಿವಾಲಯ ಹೊರಡಿಸಿದ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ಹೊಂದಿದ್ದರು.

ವಿಚಾರಣೆಯ ಸಮಯದಲ್ಲಿ ಜಪಾನಿನ ವಲಸೆ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಇದರಿಂದಾಗಿ ಇಡೀ 22 ಜನರ ಗುಂಪನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿದೆ. ಒಂಚೂರು ಅನುಮಾನ ಬರದಂತೆ ಈ ವ್ಯಕ್ತಿಗಳು ಪಾಕಿಸ್ತಾನದ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ಹತ್ತಲು ಹೇಗೆ ಸಾಧ್ಯವಾಯಿತು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.ತನಿಖಾಧಿಕಾರಿಗಳು ಈ ಯೋಜನೆಯನ್ನು ಸಿಯಾಲ್‌ಕೋಟ್‌ನ ಪಾಸ್ರೂರ್ ನಿವಾಸಿ ಮಲಿಕ್ ವಕಾಸ್ ಮೂಲಕ ಪತ್ತೆಹಚ್ಚಿದ್ದಾರೆ, ಈತ ಗೋಲ್ಡನ್ ಫುಟ್‌ಬಾಲ್ ಟ್ರಯಲ್ ಎಂಬ ನಕಲಿ ಫುಟ್‌ಬಾಲ್ ಕ್ಲಬ್ ಅನ್ನು ಹುಟ್ಟುಹಾಕಿದ್ದಾನೆ ಎಂದು ವರದಿಯಾಗಿದೆ. ಈ ಪ್ರವಾಸಕ್ಕಾಗಿ ವಕಾಸ್ ಪ್ರತಿಯೊಬ್ಬ ಆಕಾಂಕ್ಷಿಯಿಂದ 4 ಮಿಲಿಯನ್‌ನಿಂದ 4.5 ಮಿಲಿಯನ್ ರೂ.ಗಳವರೆಗೆ ಶುಲ್ಕ ವಿಧಿಸಿದ್ದಾನೆ ಎಂದು ಆರೋಪಿಸಲಾಗಿದೆ. ಗುಜ್ರಾನ್‌ವಾಲಾದ ಎಫ್‌ಐಎಯ ಕಾಂಪೋಸಿಟ್ ಸರ್ಕಲ್ ಸೆಪ್ಟೆಂಬರ್ 15 ರಂದು ಆತನನ್ನು ಬಂಧಿಸಿತು ಮತ್ತು ಆತನ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಳೆದ ವರ್ಷವೂ ಇದೇ ರೀತಿ ಮಾಡಿದ್ದ ವಕಾಸ್‌

ಇದೇ ವಿಧಾನದ ಮೂಲಕ ವಕಾಸ್ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 2024 ರಲ್ಲಿ, ಅವರು ಜಪಾನಿನ ಕ್ಲಬ್, ಬೋವಿಸ್ಟಾ ಎಫ್‌ಸಿಯಿಂದ ಇದೇ ರೀತಿಯ ನಕಲಿ ದಾಖಲೆಗಳು ಮತ್ತು ನಕಲಿ ಆಹ್ವಾನಗಳನ್ನು ಬಳಸಿಕೊಂಡು 17 ಪುರುಷರಿಗೆ ಜಪಾನ್‌ಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದರು. ಇವರಲ್ಲಿ ಯಾರೊಬ್ಬರೂ ಕೂಡ ಪಾಕಿಸ್ತಾನಕ್ಕೆ ವಾಪಾಸ್‌ ಆಗಿಲ್ಲ.