ಪಹಲ್ಗಾಂ ದಾಳಿಯ ನಂತರ, ಪಾಕಿಸ್ತಾನವು PoKಯಲ್ಲಿ ಅಡಗಿದ್ದ ಉಗ್ರರನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಭಾರತದ ಪ್ರತೀಕಾರದ ಭಯದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ವಿಶ್ವಸಂಸ್ಥೆಯ ಪ್ರತಿನಿಧಿಗಳು ಮತ್ತು ಅಮೆರಿಕದಲ್ಲಿರುವ ರಾಯಭಾರಿ ಶಾಂತಿಯ ಮಾತುಗಳನ್ನಾಡಿದ್ದಾರೆ.

ವಾಷಿಂಗ್ಟನ್‌: ಒಂದು ಕಡೆ ಪಾಕಿಸ್ತಾನದ ಕೆಲ ನಾಯಕರು ತಮ್ಮ ಬಳಿ ಇರುವ ಅಣ್ವಸ್ತ್ರಗಳು ಇವೆ ಎಂದು ಹೇಳಿ ಭಾರತದ ಮೇಲೆ ಯುದ್ಧ ಸಾರುವ ಮಾತನಾಡುತ್ತಿದ್ದರೆ, ಪಾಕ್‌ನ ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿಗಳು ಮತ್ತು ಅಮೆರಿಕದಲ್ಲಿರುವ ಪಾಕ್‌ ರಾಯಭಾರಿಗಖು ಇದಕ್ಕೆ ವ್ಯತಿರಿಕ್ತವಾಗಿ ಶಾಂತಿಯ ಮಾತಾಡಿದ್ದಾರೆ. ಈ ಮೂಲಕ ಯುದ್ಧಕ್ಕೆ ಭಾರತ ಮಾಡಿಕೊಳ್ಳುತ್ತಿರುವ ಸಿದ್ಧತೆ ನೋಡಿ ಮತ್ತೆ ಬೆಚ್ಚಿಬಿದ್ದಂತಿದೆ.

‘ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊಂದಿವೆ. ಜವಾಬ್ದಾರಿಯುತ ರಾಷ್ಟ್ರಗಳಾದ ಇವು ಯುದ್ಧವನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು. ಅಣು ದಾಳಿಯ ಯುದ್ದೋನ್ಮಾದ ಬೇಡ’ ಎಂದು ವಿಶ್ವಸಂಸ್ಥೆಯ ಪಾಕ್‌ ಪ್ರತಿನಿಧಿ ಅಸಿಮ್ ಇಫ್ತಿಕಾರ್ ಅಹ್ಮದ್ ಹೇಳಿದ್ದಾರೆ. ಅಂತೆಯೇ, ’ಪರಮಾಣು ಶಸ್ತ್ರಾಸ್ತ್ರಗಳು ಮೊದಲು ಬಳಕೆ ಆಗಬಾರದು. ಅದೇನೇ ಇದ್ದರೂ ಕೊನೆಯ ಆಯ್ಕೆ’ ಎಂಬ ನೀತಿಯನ್ನು ಪಾಕಿಸ್ತಾನ ಹೊಂದಿರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಆ ಬಗ್ಗೆ ಉತ್ತರಿಸಲು ಅವರು ಹಿಂದೇಟು ಹಾಕಿದ್ದಾರೆ.

ಅತ್ತ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ರಿಜ್ವಾನ್‌ ಸಯೀದ್‌ ಪ್ರತ್ಯೇಕ ಸಮಾರಂಭವೊಂದರಲ್ಲಿ ಮಾತನಾಡಿ, ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿ ಹದಗೆಡಲು ಕಾಶ್ಮೀರ ಸಮಸ್ಯೆಯೇ ಮೂಲ ಕಾರಣ. ಯಾವುದೇ ದುಸ್ಸಾಹಸ ಅಥವಾ ತಪ್ಪು ಲೆಕ್ಕಾಚಾರವು ಪರಮಾಣು ದಾಳಿಗೆ ಕಾರಣವಾಗಬಹುದು. ಇದನ್ನು ಪರಿಹರಿಸುವಲ್ಲಿ, ಶಾಂತಿಯ ಪರವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪಾತ್ರ ಅತ್ಯಗತ್ಯ. ನಮಗೆ ಶಾಂತಿಯುತ ನೆರೆಹೊರೆಯವರು ಬೇಕು’ ಎಂದು ಹೇಳಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಂ ದಾಳಿಯ ಹಿಂದಿರುವ ಉಗ್ರರ ವಿರುದ್ಧ ಮತ್ತೆ ಪರೋಕ್ಷವಾಗಿ ಕಿಡಿ ಕಾರಿದ್ದು, ‘ಉಗ್ರವಾದದ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಭಾರತ ಬದ್ಧವಾಗಿದೆ’ ಎಂದು ಹೇಳಿದ್ದಾರೆ. ಆಫ್ರಿಕಾ ದೇಶವಾದ ಅಂಗೋಲಾದ ಅಧ್ಯಕ್ಷ ಜೋವೊ ಮ್ಯಾನುಯೆಲ್ ಲಾರೆಂಕೊ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಉಗ್ರವಾದವು ಮಾನವೀಯತೆಗೆ ಇರುವ ದೊಡ್ಡ ಕಂಟಕ. ಉಗ್ರರು ಹಾಗೂ ಅವರ ಬೆಂಬಲಿಗರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ’.

ಅಂಗೋಲಾ ಸೇನೆಗೆ ₹16 ಸಾವಿರ ಕೋಟಿ
ಸೇನೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಅಂಗೋಲಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ, ‘ಭಾರತ ಅಂಗೋಲಾದ ಸೇನೆಯನ್ನು ಆಧುನೀಕರಣಗೊಳಿಸಲು 16 ಸಾವಿರ ಕೋಟಿ ರು. ನೀಡಲಿದೆ’ ಎಂದು ಪ್ರಧಾನಿ ಮೋದಿ ಘೋಷಿಸಿದರು.

‘ಲಾರೆಂಕೊ ಅವರ ಭಾರತ ಭೇಟಿ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ, ಭಾರತ-ಆಫ್ರಿಕಾ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಅಂಗೋಲಾದ ರಕ್ಷಣಾ ವೇದಿಕೆಗಳ ದುರಸ್ತಿ, ಕೂಲಂಕಷ ಪರೀಕ್ಷೆ ಮತ್ತು ಪೂರೈಕೆಯ ಬಗ್ಗೆ ಅವರೊಂದಿಗೆ ಚರ್ಚೆ ನಡೆದಿದೆ’ ಎಂದು ಪ್ರಧಾನಿ ಹೇಳಿದರು.

ಪಹಲ್ಗಾಂ ದಾಳಿ ಬಗ್ಗೆ ಮೋದಿ ಜತೆ ಒಮರ್‌ ಭೇಟಿ
ಪಹಲ್ಗಾಂ ಉಗ್ರ ದಾಳಿ ಬಳಿಕ ಮೊದಲ ಬಾರಿಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಶನಿವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರು ಜಮ್ಮು ಕಾಶ್ಮೀರದ ಸ್ಥಿತಿಗತಿ, ಭದ್ರತೆ ಪರಿಶೀಲನೆ ಸಭೆ ಸೇರಿ ಹಲವು ವಿಷಯಗಳ ಕುರಿತು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾತುಕತೆಯ ವಿವರ ಲಭ್ಯವಾಗಿಲ್ಲ.

ಪಿಒಕೆ ಉಗ್ರರ ಜಾಗ ಖಾಲಿ ಮಾಡಿಸಿದ ಪಾಕ್‌
26 ಅಮಾಯಕರ ಬಲಿಪಡೆದ ಪಹಲ್ಗಾಂ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಭರದಿಂದ ನಡೆಸುತ್ತಿರುವ ತಯಾರಿ ಕಂಡು ಉಗ್ರಪೋಷಕ ಪಾಕಿಸ್ತಾನ ಬೆದರಿದಂತಿದೆ. ಪರಿಣಾಮವಾಗಿ, ಪಿಒಕೆಯಲ್ಲಿ (ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ) ಅಡಗಿ ಕುಳಿತು ಕಾಶ್ಮೀರದೊಳಗೆ ನುಸುಳಲು ಸಂಚು ರೂಪಿಸುತ್ತಿದ್ದ ಉಗ್ರರನ್ನು ಮರಳಿ ತನ್ನಲ್ಲಿಗೆ ಕರೆಸಿಕೊಂಡಿದೆ ಎಂದು ವರದಿಯಾಗಿದೆ.ಈ ಬಗ್ಗೆ ಮಾತನಾಡಿರುವ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು, ‘2019ರಲ್ಲಿ ಭಾರತ ಬಾಲಾಕೋಟ್‌ನಲ್ಲಿದ್ದ ಉಗ್ರರ ಕ್ಯಾಂಪ್‌ಗಳ ಮೇಲೆ ವಾಯುದಾಳಿ ನಡೆಸಿ ನೀಡಿದ್ದ ಪೆಟ್ಟಿನಿಂದ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಇದೀಗ ಪಹಲ್ಗಾಂ ದಾಳಿಯ ವಿರುದ್ಧ ಅಂತಾರಾಷ್ಟ್ರೀಯವಾಗಿ ಭುಗಿಲೆದ್ದಿರುವ ಆಕ್ರೋಶ ಕಂಡು ಹಾಗೂ ಭಾರತದ ದಾಳಿ ಸಾಧ್ಯತೆಯಿಂದ ಬೆದರಿ ಆಕ್ರಮಿತ ಕಾಶ್ಮೀರದ ಒಳ ಪ್ರದೇಶಗಳಿಗೆ ಅಥವಾ ಪಾಕಿಸ್ತಾನಕ್ಕೆ ಕಾಲ್ಕಿತ್ತಿದ್ದಾರೆ’ ಎಂದು ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಸಮೀಪವೇ ಇರುವ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಶಕರಗಢ, ಸಮಹ್ನಿ, ಸುಖ್ಮಲ್‌ ಲಾಂಚ್‌ಪ್ಯಾಡ್‌ಗಳಲ್ಲಿ ಲಷ್ಕರ್‌-ಎ-ತೊಯ್ಬಾ, ಜೈಶ್‌ ಹಾಗೂ ಅದರ ಉಪಸಂಸ್ಥೆಗಳಿಗೆ ಸೇರಿದ 10-12 ಉಗ್ರರು ಅಡಗಿ ಕುಳಿತಿದ್ದರು. ಇವರು ಜಮ್ಮು ಕಾಶ್ಮೀರದೊಳಗೆ ನುಸುಳಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದು, ಕಾಶ್ಮೀರದೊಳಗೆ ನುಸುಳುವ ಆದೇಶಕ್ಕಾಗಿ ಕಾದಿದ್ದರು. ಆದರೆ ಇದೀಗ ಜಾಗ ಖಾಲಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಂತೆಯೇ, ಉಗ್ರರಿಗೆ ನೆರವಾಗಲು ಲಾಂಚ್‌ಪ್ಯಾಡ್‌ಗಳ ಬಳಿ ಇರುತ್ತಿದ್ದ ಪಾಕ್‌ ಸೈನಿಕರೂ ಸಹ ಪಿಒಕೆಯಿಂದ ಪಲಾಯನಗೈದಿದ್ದಾರೆ ಎಂದು ವರದಿಯಾಗಿದೆ.