ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಭೀಕರ 'ಸೂಪರ್ ಎಲ್ ನಿನೋ' ವಿದ್ಯಮಾನವು 2027ರ ಫೆಬ್ರವರಿವರೆಗೆ ಮುಂದುವರೆಯಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಇದರಿಂದಾಗಿ ಪೆಸಿಫಿಕ್ ಮಹಾಸಾಗರದ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗಲಿದ್ದು, ವಿಶ್ವಾದ್ಯಂತ ಬರಗಾಲ, ಪ್ರವಾಹ ಹಾಗೂ 4.5 ಲಕ್ಷಕ್ಕೂ ಹೆಚ್ಚು ಜನರ ಪ್ರಾಣಹಾನಿಯಾಗುವ ಆತಂಕವಿದೆ.

ನವದೆಹಲಿ: ಕಳೆದ ಕೆಲ ತಿಂಗಳಿಂದ ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಜನರ ಬೆವರಿಳಿಸುತ್ತಿರುವ ಎಲ್‌ ನಿನೋ, ಮುಂದಿನ ವರ್ಷದ ಫೆಬ್ರವರಿಯ ವರೆಗೆ ಮುಂದುವರಿಯಲಿದೆ. ಇಡೀ ವಿಶ್ವಕ್ಕೇ ಇದು ಆವರಿಸಿದ್ದು, ಭೂಮಿಯ ಬಹುತೇಕ ಭಾಗವನ್ನು ಸುಡಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಸಡನ್ನಾಗಿ ಬದಲಾಗುತ್ತಿರುವ ಹವಾಮಾನ ಮತ್ತು ಹೆಚ್ಚುತ್ತಿರುವ ತಾಪಮಾನದಿಂದ ತತ್ತರಿಸುತ್ತಿರುವ ಇಡೀ ಜಗತ್ತಿಗೆ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಗಳು ಮತ್ತೊಂದು ಆಘಾತಕಾರಿ ಮುನ್ನೆಚ್ಚರಿಕೆ ನೀಡಿವೆ. ಪ್ರಸ್ತುತ ಜಾಗತಿಕ ಹವಾಮಾನವನ್ನು ನಿಯಂತ್ರಿಸುತ್ತಿರುವ ಭೀಕರ 'ಸೂಪರ್ ಎಲ್ ನಿನೋ' ವಿದ್ಯಮಾನವು ಮತ್ತಷ್ಟು ತೀವ್ರಗೊಂಡು, ಮುಂಬರುವ 2027ರ ಫೆಬ್ರವರಿ ತಿಂಗಳವರೆಗೂ ನಿರಂತರವಾಗಿ ಮುಂದುವರೆಯಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

1950ರಲ್ಲಿ ಜಾಗತಿಕ ಹವಾಮಾನ ದಾಖಲೆಗಳು ಆರಂಭವಾದ ನಂತರ ಕಂಡುಬಂದ ಅತ್ಯಂತ ಪ್ರಬಲ ಹಾಗೂ ವಿನಾಶಕಾರಿ ಎಲ್ ನಿನೋಗಳಲ್ಲಿ ಇದು ಒಂದಾಗಿದ್ದು, ಡಿಸೆಂಬರ್ ವೇಳೆಗೆ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಅಭೂತಪೂರ್ವ ಉಷ್ಣಾಂಶ: ದಾಖಲೆ ಉಗುಳಿದ ಸಮುದ್ರ!

ಎಲ್ ನಿನೋದ ಕೇಂದ್ರಬಿಂದುವಾಗಿರುವ ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ತಾಪಮಾನವು ಇದುವರೆಗೆ ಕಾಣದ ಮಟ್ಟಕ್ಕೆ ಏರಿಕೆಯಾಗಿದೆ.

3.7°C ನಿಂದ 4.0°C ಹೆಚ್ಚಳ: ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನವು ವಾಡಿಕೆಗಿಂತ 3.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು WMO ಅಂದಾಜಿಸಿದೆ. ಇದು 2015-16ರಲ್ಲಿದ್ದ 2.6°C ಯ ಸಾರ್ವಕಾಲಿಕ ದಾಖಲೆಯನ್ನು ಮುರಿದಿದೆ.

ಜಪಾನ್ ಹವಾಮಾನ ಸಂಸ್ಥೆಯ ಎಚ್ಚರಿಕೆ: ಜಪಾನ್‌ನ ಹವಾಮಾನ ಸಂಸ್ಥೆಯ ವರದಿಯಂತೆ, ಸೆಪ್ಟೆಂಬರ್ ತಿಂಗಳಲ್ಲೇ ಪೆಸಿಫಿಕ್ ಸಮುದ್ರದ ತಾಪಮಾನವು ಸರಾಸರಿಗಿಂತ 4.0 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು 1949 ರಿಂದೀಚೆಗೆ ದಾಖಲಾದ ಅತ್ಯಂತ ಗರಿಷ್ಠ ಮಟ್ಟವಾಗಿದೆ.

ನಾವು ಅಳೆಯುತ್ತಿರುವ ಸಮುದ್ರವು ಇತಿಹಾಸದಲ್ಲೇ ಅತ್ಯಂತ ಬೆಚ್ಚಗಿನ ಸ್ಥಿತಿಯಲ್ಲಿದೆ. ಅದು ತನ್ನಲ್ಲಿ ಹೀರಿಕೊಂಡಿರುವ ಅಗಾಧ ಶಾಖವನ್ನು ವಾತಾವರಣಕ್ಕೆ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು WMO ಪ್ರಧಾನ ಕಾರ್ಯದರ್ಶಿ ಸೆಲೆಸ್ಟ್ ಸೌಲೊ ಆತಂಕ ವ್ಯಕ್ತಪಡಿಸಿದ್ದಾರೆ.

4.5 ಲಕ್ಷಕ್ಕೂ ಹೆಚ್ಚು ಮಾನವ ಜೀವಗಳಿಗೆ ಕಂಟಕ!

ವೇಗವಾಗಿ ಬಿಸಿಯಾಗುತ್ತಿರುವ ಸಾಗರ ಮತ್ತು ವಾತಾವರಣದ ಪರಿಣಾಮವಾಗಿ ಜಾಗತಿಕವಾಗಿ ಭಾರಿ ಮಟ್ಟದ ಜೀವಹಾನಿಯಾಗುವ ಭೀತಿಯಿದೆ. ಚಿಕಾಗೊ ವಿಶ್ವವಿದ್ಯಾಲಯದ 'ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್' ನಡೆಸಿದ ಅಧ್ಯಯನದ ಪ್ರಕಾರ:

ಜೂನ್ 2026 ರಿಂದ ಫೆಬ್ರವರಿ 2027 ರ ನಡುವೆ ಈ ಸೂಪರ್-ಎಲ್ ನಿನೋದಿಂದ ಸೃಷ್ಟಿಯಾಗುವ ತೀವ್ರ ಶಾಖದ ಅಲೆಗಳು (Heatwaves), ಬರಗಾಲ, ಸಾಂಕ್ರಾಮಿಕ ರೋಗಗಳು ಹಾಗೂ ಪ್ರವಾಹಗಳಿಂದಾಗಿ ವಿಶ್ವಾದ್ಯಂತ ಸುಮಾರು 4,51,000 (4.51 ಲಕ್ಷ) ಹೆಚ್ಚುವರಿ ಜನರು ಪ್ರಾಣ ಕಳೆದುಕೊಳ್ಳುವ ಆತಂಕವಿದೆ.

ಚಳಿಗಾಲದಲ್ಲೂ ಕೆಂಡದಂತೆ ಕಾಯಲಿದೆ ಭೂಗೋಳ

ಸಾಮಾನ್ಯವಾಗಿ ಅತಿಯಾದ ಚಳಿ ಇರಬೇಕಾದ ಉತ್ತರ ಗೋಳಾರ್ಧದ ದೇಶಗಳಲ್ಲೂ ಈ ಬಾರಿ ತಾಪಮಾನ ಸುಡಲಿದೆ ಎಂದು ಹವಾಮಾನ ತಜ್ಞ ರಯಾನ್ ಮೌ ಎಚ್ಚರಿಸಿದ್ದಾರೆ. ಅಮೆರಿಕದ ಕೆಲವು ಭಾಗಗಳನ್ನು ಹೊರತುಪಡಿಸಿ, ಇಡೀ ಭೂಮಂಡಲವು ಬಿಸಿಲಿನಿಂದಾಗಿ ಕೆಂಪು ಬಣ್ಣಕ್ಕೆ ತಿರುಗಿರುವ ತಾಪಮಾನ ನಕ್ಷೆಯನ್ನು ಅವರು ಹಂಚಿಕೊಂಡಿದ್ದಾರೆ.

ಯುರೋಪಿಯನ್ ಒಕ್ಕೂಟದ 'ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವೆ' (C3S) ಪ್ರಕಾರ, ಜಾಗತಿಕ ಸರಾಸರಿ ತಾಪಮಾನವು ಈಗಾಗಲೇ 16.96°C ತಲುಪಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿದೆ.

ಭಾರತ ಸೇರಿದಂತೆ ಜಗತ್ತಿನ ಮೇಲಾಗುವ ದುಷ್ಪರಿಣಾಮಗಳು

ದೀರ್ಘಕಾಲದ ಮಳೆ ಅಭಾವದಿಂದಾಗಿ ಪ್ರಮುಖ ಕೃಷಿ ದೇಶಗಳಲ್ಲಿ ಬೆಳೆ ನಾಶವಾಗಿ ಜಾಗತಿಕ ಮಟ್ಟದಲ್ಲಿ ಆಹಾರ ಧಾನ್ಯಗಳ ಅಭಾವ ಎದುರಾಗಲಿದೆ. ಕೆಲವು ಪ್ರದೇಶಗಳು ಸಂಪೂರ್ಣ ಒಣಗಿದ ಬರಗಾಲಕ್ಕೆ ಈಡಾದರೆ, ಕರಾವಳಿ ಭಾಗಗಳು ಅಕಾಲಿಕ ಹಾಗೂ ಭೀಕರ ಚಂಡಮಾರುತಗಳಿಗೆ ತುತ್ತಾಗಲಿವೆ. ಮುಂಬರುವ 2027ರ ಆರಂಭದವರೆಗೂ ಜಾಗತಿಕವಾಗಿ ಉಷ್ಣ ಗಾಳಿಯ ಪ್ರಭಾವ ಮುಂದುವರೆಯಲಿದ್ದು, ಮಾನವ ಆರೋಗ್ಯ, ವಿದ್ಯುತ್ ಬೇಡಿಕೆ ಮತ್ತು ಜಲಸಂಪನ್ಮೂಲ ನಿರ್ವಹಣೆ ಜಗತ್ತಿನ ಸರ್ಕಾರಗಳಿಗೆ ದೊಡ್ಡ ಸವಾಲಾಗಲಿದೆ.