ಲಂಡನ್(ಜು.21):   ಕೊರೋನಾಗೆ ಸಿದ್ಧವಾಗುತ್ತಿರುವ ಔಷಧಗಳ ಪೈಕಿ ಅತ್ಯಂತ ಭರವಸೆ ಮೂಡಿಸಿರುವ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನಿಕ ಕಂಪನಿ ಅಭಿವೃದ್ದಿಪಡಿಸಿರುವ ಲಸಿಕೆಯ ಮೊದಲ ಹಂತದ ಪ್ರಯೋಗ ಅತ್ಯಂತ ಭರವಸೆದಾಯಕ ಫಲಿತಾಂಶ ನೀಡಿದೆ. ಪ್ರಾಯೋಗಿಕ ಕೊರೋನಾ ವೈರಸ್‌ ಲಸಿಕೆ ಆರಂಭಿಕ ಹಂತದಲ್ಲಿ ನುರಾರು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ರಷ್ಯಾದಿಂದ ಕೊರೋನಾಗೆ ಲಸಿಕೆ: ಮುಂದಿನ ತಿಂಗಳೇ ಜನ ಬಳಕೆಗೆ ಲಭ್ಯ!

ಆರಂಭಿಕ ಹಂತವಾಗಿ ಏಪ್ರಿಲ್‌ನಲ್ಲಿ 1000 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಅವರಲ್ಲಿ ಅರ್ಧದಷ್ಟುಮಂದಿ ಪ್ರಾಯೋಗಿಕ ಲಸಿಕೆಯನ್ನು ಪಡೆದಿದ್ದರು. ಈ ಲಸಿಕೆ 18ರಿಂದ 55 ವರ್ಷದ ವಯಸ್ಸಿನವರಲ್ಲಿ ಎರಡು ರೀತಿಯ ರೋಗ ನಿರೋಧಕ ಶಕ್ತಿಯನ್ನು ಉತ್ಪಾದಿಸಿರುವುದು ಕಂಡುಂಬಂದಿದೆ. ಪ್ರತಿಕಾಯಗಳ ಉತ್ಪಾದನೆಯ ಜೊತೆಗೆ ಕೊರೋನಾ ವೈರಸ್‌ ವಿರುದ್ಧ ಹೋರಾಡುವ ಟಿ- ಕೋಶಗಳ ಬೆಳವಣಿಗೆಗೂ ಕಾರಣವಾಗಿದೆ.

ಕೊರೋನಾ ಲಸಿಕೆ ರೇಸ್‌ನಲ್ಲಿ ಭಾರತದ 7 ಕಂಪನಿಗಳು!

ಹೀಗಾಗಿ ದೊಡ್ಡ ಮಟ್ಟದಲ್ಲಿ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬ್ರಿಟನ್‌ನಲ್ಲಿ 10 ಸಾವಿರ ಜನರನ್ನು ಲಸಿಕೆ ಪ್ರಯೋಗಕ್ಕೆ ಗುರಿಪಡಿಸಲಾಗುತ್ತಿದೆ. ಅದೇ ರೀತಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲೂ ಪ್ರಯೋಗ ನಡೆಯುತ್ತಿದೆ. ಅಮೆರಿಕದಲ್ಲಿ 30 ಸಾವಿರ ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ನಿರ್ದೇಶಕ ಅಡ್ರಿಯನ್‌ ಹಿಲ್‌ ತಿಳಿಸಿದ್ದಾರೆ.