ಮಾಸ್ಕೋ(ಜು.21): ವಿಶ್ವದಾದ್ಯಂತ 1.4 ಕೋಟಿ ಜನರಿಗೆ ಹಬ್ಬಿ, 6 ಲಕ್ಷಕ್ಕೂ ಹೆಚ್ಚು ಜನರ ಬಲಿ ಪಡೆದ ಕೊರೋನಾ ಸೋಂಕಿಗೆ ಮುಂದಿನ ತಿಂಗಳೇ ಲಸಿಕೆ ಲಭ್ಯವಾಗಲಿದೆ ಎಂದು ರಷ್ಯಾ ಘೋಷಿಸಿದೆ. ಇದು ಕೋಟ್ಯಂತರ ಸೋಂಕಿತರು ಮತ್ತು ಸೋಂಕು ತಗಲುವ ಭಯದಲ್ಲಿರುವ ನೂರಾರು ಕೋಟಿ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ಯಾವುದೇ ಲಸಿಕೆ ರೋಗಿಗಳ ಸಾಮಾನ್ಯ ಬಳಕೆಗೆ ಲಭ್ಯವಾಗುವ ಮುನ್ನ ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯ ಫಲಿತಾಂಶ ಆಧರಿಸಿ ಆಯಾ ದೇಶಗಳ ಔಷಧ ನಿಯಂತ್ರಣ ಪ್ರಾಧಿಕಾರಗಳು ಮುಕ್ತ ಬಳಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಆದರೆ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ರಷ್ಯಾ, ಪಿಡುಗಿನ ಭಾರೀ ತೀವ್ರತೆ ಹಿನ್ನೆಲೆಯಲ್ಲಿ ಮೂರು ಮತ್ತು ಕಡೆಯ ಹಂತದ ಪರೀಕ್ಷೆಗೂ ಮುನ್ನವೇ ಲಸಿಕೆಯನ್ನು ಬಳಕೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಆತಂಕದ ನಡುವೆ ಶುಭಸುದ್ದಿ: ಕರ್ನಾಟಕದಲ್ಲಿ ಶೇಕಡ ಸೋಂಕು ಇಳಿಮುಖ!

ಈ ಕುರಿತು ಹೇಳಿಕೆ ನೀಡಿರುವ ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್‌ ಮುರಷ್ಕೋವ್‌ ‘ಮೂರು ಮತ್ತು ಕಡೆಯ ಹಂತದ ಪರೀಕ್ಷೆ ಹಂತ ದಾಟುವ ಮೊದಲೇ ನಾವು ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುವಂತೆ ಮಾಡಲು ಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ಸರ್ಕಾರದ ನಿರ್ಧಾರ ಖಚಿತವಿದೆ. ಈ ಲಸಿಕೆ ಇನ್ನಷ್ಟುಕ್ಲಿನಿಕಲ್‌ ಪ್ರಯೋಗಗಳಿಗೆ ಒಳಪಡಬೇಕು. ಈ ಪ್ರಕ್ರಿಯೆಯನ್ನು ಲಸಿಕೆ ಬಿಡುಗಡೆಗೆ ಸಮಾನಾಂತರವಾಗಿ ನಾವು ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಸರ್ಕಾರಿ ಸ್ವಾಮ್ಯದ ಆರ್‌ಡಿಐಎಫ್‌ನ ಮುಖ್ಯ ಕಾರ್ಯನಿರ್ವಾಹಕ ಕಿರಿಲ್‌ ಡೆಮಿಟ್ರಿವ್‌ ಮಾತನಾಡಿ, ಆ.3ರಿಂದ ನಾವು ಮೂರನೇ ಹಂತದ ಲಸಿಕೆಯ ಕ್ಲಿನಿಕಲ್‌ ಪ್ರಯೋಗವನ್ನು ಸೌದಿ ಅರೇಬಿಯಾ, ಯುಎಇದಲ್ಲಿ ಸಾವಿರಾರು ಜನರ ಮೇಲೆ ಆರಂಭಿಸಲಿದ್ದೇವೆ. ನಾವು ಪ್ರಸಕ್ತ ವರ್ಷವೇ ದೇಶೀಯವಾಗಿ 3 ಕೋಟಿ ಮತ್ತು 5 ವಿದೇಶಗಳಲ್ಲಿ 17 ಕೋಟಿ ಲಸಿಕೆ ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಬುಧವಾರದಿಂದ ಬೆಂಗಳೂರು ಅನ್‌ಲಾಕ್‌: ಲಾಕ್‌ಡೌನ್‌ ವಿಸ್ತರಣೆ ಇಲ್ಲ!

ಆದರೆ ರಷ್ಯಾ ಇದುವರೆಗೂ ತಾನು ಅಭಿವೃದ್ಧಿಪಡಿಸಿರುವ ಲಸಿಕೆಯ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಕೆಲ ದಿನಗಳ ಹಿಂದಷ್ಟೇ ರಷ್ಯಾದ ಸೆಶ್ನೋವ್‌ ವಿವಿಯು, ರಕ್ಷಣಾ ಸಚಿವಾಲಯದ ಗಮಲೇ ಇನ್ಸ್‌ಟಿಟ್ಯೂಟ್‌ ಆಫ್‌ ಎಪಿಡೆಮೋಲಜಿ ಆ್ಯಂಡ್‌ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ್ದ ಲಸಿಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದಾಗಿ ಹೇಳಿಕೊಂಡಿತ್ತು. ಪ್ರಯೋಗದ ಫಲಿತಾಂಶವು ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಸಾಬೀತಾಗಿದೆ ಎಂದು ಘೋಷಿಸಿತ್ತು.