ಲಂಡನ್(ಮಾ.23)‌: ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜನೆಕಾ ಜಂಟಿಯಾಗಿ ಉತ್ಪಾದಿಸಿರುವ ಕೋವಿಡ್‌ ಲಸಿಕೆಯನ್ನು ಅಮೆರಿಕ, ಚಿಲಿ ಮತ್ತು ಪೆರು ದೇಶದಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಈ ವೇಳೆ ಅದು ಶೇ.79ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕೆಲ ಯುರೋಪಿಯನ್‌ ದೇಶಗಳಲ್ಲಿ ಆಕ್ಸ್‌ಫರ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಲಸಿಕೆಯ ಸುರಕ್ಷತೆಯ ಕುರಿತು ಅನುಮಾನಗಳು ವ್ಯಕ್ತವಾಗಿ, ಕೆಲ ದೇಶಗಳು ಅದರ ಬಳಕೆಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದವು. ಅದರ ಬೆನ್ನಲ್ಲೇ ಹೊರಬಿದ್ದಿರುವ ಈ ವರದಿ, ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ಒತ್ತಿಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಕಂಪನಿ, 22000ಕ್ಕೂ ಹೆಚ್ಚು ಜನರ ಮೇಲೆ 3ನೇ ಹಂತದ ಪ್ರಯೋಗದ ಭಾಗವಾಗಿ ಲಸಿಕೆ ನೀಡಲಾಗಿತ್ತು. ಈ ವೇಳೆ ರೋಗಲಕ್ಷಣ ಇರುವವರಲ್ಲಿ ಲಸಿಕೆ ಶೇ.79ರಷ್ಟುಪರಿಣಾಮಕಾರಿಯಾಗಿದೆ. ಜೊತೆಗೆ ಸೋಂಕಿತರ ಸ್ಥಿತಿ ಗಂಭೀರವಾಗದಂತೆ ಮತ್ತು ಮತ್ತು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ತಡೆಯುವಲ್ಲಿ ಶೇ.100ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿದೆ. ಎಲ್ಲಾ ವಯೋವರ್ಗ ಮತ್ತು ಜನಾಂಗದವರ ಮೇಲೂ ಲಸಿಕೆ ಯಶಸ್ವಿಯಾಗಿದೆ ಎಂದು ಹೇಳಿದೆ. ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಆಕ್ಸ್‌ಫರ್ಡ್‌ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ. ಆದರೆ ಅಮೆರಿಕದಲ್ಲಿ ಇನ್ನೂ ಸಿಕ್ಕಿಲ್ಲ.

ಬ್ರಿಟನ್‌ನಲ್ಲಿ ನಡೆಸಿದ ಪರೀಕ್ಷೆಗಿಂತ ಅಮೆರಿಕ ಸೇರಿದಂತೆ ಮೂರು ದೇಶಗಳಲ್ಲಿ ನಡೆಸಿದ ಪ್ರಯೋಗದ ವೇಳೆ ಲಸಿಕೆಯು ಇನ್ನಷ್ಟುಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದು ಕೊರೋನಾ ಸಾಂಕ್ರಾಮಿಕವನ್ನು ಕೊನೆಗೊಳಿಸಲು ಯತ್ನಿಸುತ್ತಿರುವ ವಿಶ್ವದ ಇನ್ನಷ್ಟುಭಾಗಗಳಿಗೆ ಭರವಸೆಯಾಗಿ ಹೊರಹೊಮ್ಮಿದೆ. ಈ ವರದಿಯನ್ನು ಸಂಸ್ಥೆಯು ಶೀಘ್ರವೇ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ)ಗೆ ಸಲ್ಲಿಸಿ, ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಲು ನಿರ್ಧರಿಸಿದೆ.