ಹಿಜಾಬ್ ವಿರೋಧಿ ಪ್ರತಿಭಟನೆ ಎಫೆಕ್ಟ್: 5000 ಮಕ್ಕಳ ಮೇಲೆ ವಿಷಾನಿಲ ದಾಳಿ, ಇಸ್ಲಾಮಿಕ್ ಸಂಘಟನೆ ಕೃತ್ಯ..!
ಇರಾನ್‌ನಲ್ಲಿ 5000 ಶಾಲಾ ಮಕ್ಕಳ ಮೇಲೆ ವಿಷಾನಿಲ ದಾಳಿ ನಡೆದಿದೆ. ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿ ದೇಶಾದ್ಯಂತ ದಾಳಿ ನಡೆದಿದ್ದು, ಕಟ್ಟರ್ ಇಸ್ಲಾಮಿಕ್ ಸಂಘಟನೆಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ.
ತೆಹ್ರಾನ್ (ಮಾರ್ಚ್ 9, 2023): ಕಳೆದ ಸೆಪ್ಟೆಂಬರ್‌ನಲ್ಲಿ ವಸ್ತ್ರ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಬಂಧನಕ್ಕೊಳಗಾಗಿ ಜೈಲಿನಲ್ಲೇ ಸಾವನ್ನಪ್ಪಿದ ಮಹ್ಸಾ ಅಮಿನಿ ಪ್ರಕರಣ, ಇರಾನ್‌ನಾದ್ಯಂತ 5000ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತಂದಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಮೆಹ್ಸಾ ಅಮಿನಿ (Mehsa Amini) ಸಾವಿನ ಬಳಿಕ ದೇಶಾದ್ಯಂತ ಹಿಜಾಬ್ ವಿರೋಧಿ ಪ್ರತಿಭಟನೆ (Anti Hijab Protest) ಆರಂಭವಾಗಿ, ಮಹಿಳೆಯರು ಬಹಿರಂಗವಾಗಿಯೇ ಹಿಜಾಬ್ (Hijab), ಬುರ್ಖಾ (Burkha) ಸುಟ್ಟುಹಾಕಿ ಕಟ್ಟರ್ ಇಸ್ಲಾಮಿಕ್ ಸಂಪ್ರದಾಯ ಪಾಲಿಸುವ ಆಡಳಿತಕ್ಕೆ ಸವಾಲು ಹಾಕಿದ್ದರು. ಅದರ ಬೆನ್ನಲ್ಲೇ ಪ್ರತಿಭಟನೆಯ ತಾಣವಾಗಿರುವ ಶಾಲೆಗಳನ್ನು ಮತ್ತು ಇಂಥ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳನ್ನು (Students) ಮಟ್ಟಹಾಕುವ ಸಲುವಾಗಿ ಕನಿಷ್ಠ 230 ಶಾಲೆಗಳ ಮೇಲೆ ವಿಷಾನಿಲ (Poisoned Gas) ದಾಳಿ ನಡೆಸಲಾಗಿದೆ ಎಂದು ಈ ಕುರಿತು ತನಿಖೆ ನಡೆಸಿದ ಸಂಸದೀಯ ಸತ್ಯಶೋಧನಾ ಸಮಿತಿ ಸದಸ್ಯ ಮಹಮ್ಮದ್ ಹಸ್ಸನ್ ಅಸಫಾರಿ ಬಹಿರಂಗಪಡಿಸಿದ್ದಾರೆ.
ಇದನ್ನು ಓದಿ: Iran Anti Hijab Protest: ಕೂದಲು ಕತ್ತರಿಸಿಕೊಂಡು ಸಹೋದರನ ಸಮಾಧಿ ಮೇಲೆ ಎಸೆದ ಮಹಿಳೆ
ಹೀಗೆ ವಿಷಾನಿಲ ದಾಳಿಗೆ ಕನಿಷ್ಠ 5000 ವಿದ್ಯಾರ್ಥಿಗಳು ತುತ್ತಾಗಿದ್ದಾರೆ. ಈ ಪೈಕಿ ಬಹುತೇಕರ ವಿದ್ಯಾರ್ಥಿನಿಯರು. ಹೀಗೆ ಶಾಲೆ ಅವಧಿಯಲ್ಲೇ ನಿಗೂಢ ರೀತಿಯಲ್ಲಿ ವಿಷಾನಿಲ ದಾಳಿಗೆ ತುತ್ತಾದ ವಿದ್ಯಾರ್ಥಿಗಳು ಉಸಿರಾಟದ ತೊಂದರೆ, ವಾಕರಿಕೆ, ತಲೆ ಸುತ್ತುವಿಕೆ ಮೊದಲಾದ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಹೀಗೆ ದಾಳಿಗೆ ತುತ್ತಾದವರ ಪೈಕಿ ಶೇ.25ರಷ್ಟು ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕನಿಷ್ಠ ಓರ್ವ ವಿದ್ಯಾರ್ಥಿನಿ ಇಂಥ ದಾಳಿಗೆ ಬಲಿಯಾಗಿದ್ದಾಳೆ ಎಂದು ಅಸಫಾರಿ ಮಾಹಿತಿ ನೀಡಿದ್ದಾರೆ. ಈ ವರದಿಯಲ್ಲಿನ ಮಾಹಿತಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೇಶದ ಪರಮೋಚ್ಛ ಧಾರ್ಮಿಕ ನಾಯಕ ಆಯಾತೊಲ್ಲಾ ಖೊಮೇನಿ ಸೂಚಿಸಿದ್ದಾರೆ.
ಕಾರಣ ಏನು?:
ಕಟ್ಟರ್ ಇಸ್ಲಾಮಿಕ್ ಮತೀಯ ಗುಂಪುಗಳು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದನ್ನು ವಿರೋಧಿಸುತ್ತಿವೆ. ಇಂಥ ದಾಳಿ ನಡೆಸಿದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಹೆದರಿ ಅಂಥ ಶಾಲೆಗಳನ್ನು ಮುಚ್ಚಬಹುದು ಎಂಬ ಕೆಟ್ಟ ಲೆಕ್ಕಾಚಾರ. ವಿಷಾನಿಲ ದಾಳಿಯ ಮೂಲಕ ಹಿಜಾಬ್ ವಿರೋಧಿ ಪ್ರತಿಭಟನೆ ಹತ್ತಿಕ್ಕುವುದು ಮತ್ತೊಂದು ಗುರಿ ಎನ್ನಲಾಗಿದೆ.
ಇದನ್ನೂ ಓದಿ: ಇರಾನ್‌ನಲ್ಲಿ ತೀವ್ರಗೊಂಡ Anti Hijab Protest; ಕೂದಲು ಕತ್ತರಿಸಿಕೊಂಡು ಹಿಜಾಬ್ ಸುಟ್ಟ ಮಹಿಳೆಯರು