ಆಪರೇಷನ್ ಸಿಂಧು ಮೂಲಕ ಸಂಘರ್ಷಪೀಡಿತ ಇರಾನ್‌ನಿಂದ ಭಾರತೀಯರನ್ನು ಕರೆತರುತ್ತಿರುವ ಭಾರತ, ನೆರೆಯ ರಾಷ್ಟ್ರಗಳಾದ ನೇಪಾಳ ಹಾಗೂ ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೂ ನೆರವು ನೀಡುವುದಾಗಿ ಘೋಷಿಸಿದೆ. ಅಲ್ಲದೆ, ಅವರಿಗಾಗಿ ಸಹಾಯವಾಣಿಯನ್ನೂ ಆರಂಭಿಸಿದೆ.

ಟೆಹ್ರಾನ್: ಆಪರೇಷನ್ ಸಿಂಧು ಮೂಲಕ ಸಂಘರ್ಷಪೀಡಿತ ಇರಾನ್‌ನಿಂದ ಭಾರತೀಯರನ್ನು ಕರೆತರುತ್ತಿರುವ ಭಾರತ, ನೆರೆಯ ರಾಷ್ಟ್ರಗಳಾದ ನೇಪಾಳ ಹಾಗೂ ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೂ ನೆರವು ನೀಡುವುದಾಗಿ ಘೋಷಿಸಿದೆ. ಅಲ್ಲದೆ, ಅವರಿಗಾಗಿ ಸಹಾಯವಾಣಿಯನ್ನೂ ಆರಂಭಿಸಿದೆ.

ಈ ಕುರಿತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ನೇಪಾಳ ಮತ್ತು ಶ್ರೀಲಂಕಾ ಸರ್ಕಾರಗಳ ವಿನಂತಿಯ ಮೇರೆಗೆ ಇರಾನ್‌ನಲ್ಲಿರುವ ನೇಪಾಳ ಮತ್ತು ಶ್ರೀಲಂಕಾದ ನಾಗರಿಕರ ಸ್ಥಳಾಂತರವನ್ನೂ ಮಾಡಲಿದ್ದೇವೆ. ನೇಪಾಳ ಮತ್ತು ಶ್ರೀಲಂಕಾದ ನಾಗರಿಕರು ತುರ್ತಾಗಿ ಭಾರತೀಯ ರಾಯಭಾರ ಕಚೇರಿಯನ್ನು ಟೆಲಿಗ್ರಾಮ್ ಚಾನೆಲ್‌ನಲ್ಲಿ ಅಥವಾ +989010144557; +989128109115; +989128109109 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು’ ಎಂದು ತಿಳಿಸಿದೆ. ಇರಾನ್ ತೊರೆಯಲು ಇಚ್ಛಿಸಿದರೆ ಭಾರತೀಯ ರಾಯಭಾರ ಕಚೇರಿಯನ್ನು ತುರ್ತಾಗಿ ಸಂಪರ್ಕಿಸುವಂತೆ ಶ್ರೀಲಂಕಾ ಸರ್ಕಾರವೂ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.

ಇರಾನ್‌ನಿಂದ ಮತ್ತೆ 310 ಭಾರತೀಯರ ಆಗಮನ: ಒಟ್ಟು ಸಂಖ್ಯೆ 827ಕ್ಕೇರಿಕೆ

ನವದೆಹಲಿ: ಆಪರೇಷನ್ ಸಿಂಧು ಮೂಲಕ ಯುದ್ಧಪೀಡಿತ ಇರಾನ್‌ನಿಂದ 310 ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ ಶನಿವಾರ ಸಂಜೆ 4:30ಕ್ಕೆ ದೆಹಲಿಗೆ ಬಂದು ತಲುಪಿದೆ. ಈ ಮೂಲಕ ಇರಾನ್‌ನಿಂದ ಸ್ಥಳಾಂತರಗೊಂಡ ಒಟ್ಟು ಭಾರತೀಯರ ಸಂಖ್ಯೆ 827ಕ್ಕೇರಿದೆ.ಇರಾನ್‌ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಆರಂಭವಾದ ಬಳಿಕ ಮೊದಲ ಕಂತಿನಲ್ಲಿ 110 ಭಾರತೀಯರನ್ನು ಕರೆತರಲಾಗಿತ್ತು. ಇದೀಗ ಸ್ವದೇಶಕ್ಕೆ ಒಟ್ಟು 827 ಮಂದಿ ಸುರಕ್ಷಿತವಾಗಿ ಬಂದಿಳಿದಂತಾಗಿದೆ. ಆಪರೇಷನ್ ಸಿಂಧು ಮೂಲಕ ಭಾರತೀಯರ ಸ್ಥಳಾಂತರ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ

ಟೆಲ್‌ ಅವಿವ್‌/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಇಸ್ರೇಲ್‌-ಇರಾನ್‌ ಸಂಘರ್ಷ 9ನೇ ದಿನಕ್ಕೆ ಪ್ರವೇಶಿಸಿದೆ. ಇರಾನ್‌ ನಡೆಸಿದ ಕ್ಲಸ್ಟರ್‌ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್‌ ಮತ್ತೆ ಸಿಡಿದೆದ್ದಿದ್ದು, ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.

ಇದೇ ವೇಳೆ, ಇಸ್ರೇಲ್‌ನ 1200 ಜನರ ನರಮೇಧಕ್ಕೆ ಕಾರಣವಾದ ಅ.7ರ ಹಮಾಸ್‌ ದಾಳಿಗೆ ಸಹಕರಿಸಿದ್ದ ಕಮಾಂಡರ್‌ ಸೇರಿದಂತೆ ಇರಾನಿ ರೆವಲ್ಯೂಷನರಿ ಗಾರ್ಡ್ಸ್‌ನ 2 ಕಮಾಂಡರ್‌ಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ

ಇರಾನ್‌ ಅಣುಸ್ಥಾವರದ ಮೇಲೆ 2ನೇ ಬಾರಿ ದಾಳಿ: 

ಇಸ್ರೇಲ್ ಸೇನೆಯು ಇರಾನ್‌ನ ಇಸ್ಫಹಾನ್ ಅಣ್ವಸ್ತ್ರ ಕೇಂದ್ರದ ಮೇಲೆ 2ನೇ ಬಾರಿ 50 ಯುದ್ಧವಿಮಾನಗಳ ಮೂಲಕ ದಾಳಿ ನಡೆಸಿದೆ. ದಾಳಿಯಿಂದ ಘಟಕಕ್ಕೆ ಹಾನಿಯಾಗಿದ್ದು ಉಪಗ್ರಹ ಚಿತ್ರದಲ್ಲಿ ಕಾಣುತ್ತದೆ ಆದರೆ ಇರಾನ್‌ ಮಾತ್ರ ದಾಳಿಯನ್ನು ಹಿಮ್ಮೆಟ್ಟಿಸಿರುವುದಾಗಿ ಹೇಳಿಕೊಂಡಿದ್ದು, ಅಣ್ವಸ್ತ್ರ ಸೋರಿಕೆ ಭೀತಿಯಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ಫಹಾನ್‌ ಇರಾನ್‌ನ ಪ್ರಮುಖ ಅಣ್ವಸ್ತ್ರ ಕೇಂದ್ರವಾಗಿದ್ದು, ಇಲ್ಲಿ ಯುರೇನಿಯಂ ಸಂಸ್ಕರಣೆ ಮಾಡಲಾಗುತ್ತದೆ. ಇಂಧನ ಫ್ಯಾಬ್ರಿಕೇಷನ್‌ ಘಟಕವನ್ನೂ ಇದು ಹೊಂದಿದೆ. ಈ ಹಿಂದೆ ಜೂ.13ರಂದು ಮೊದಲ ಬಾರಿ ಘಟಕದ ಮೇಲೆ ದಾಳಿ ಆಗಿತ್ತು.