*ಶಿಕ್ಷಣ ನಿಲ್ಲುವ ಆತಂಕದಲ್ಲಿದ್ದ ಸಾವಿರಾರು ವೈದ್ಯ ವಿದ್ಯಾರ್ಥಿಗಳ ಆತಂಕ ನಿವಾರಣೆ*ಸುರಕ್ಷಿತ ಸ್ಥಳಗಳಿಂದ ಪಾಠ ಮಾಡುತ್ತಿರುವ ಶಿಕ್ಷಕರು*ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಆನ್‌ಲೈನ್‌ ಕ್ಲಾಸ್‌ ಶುರು*ತರಗತಿಗೆ ಹಾಜರು ಆರಂಭಿಸಿದ ಕನ್ನಡಿಗ ವಿದ್ಯಾರ್ಥಿಗಳು

ನವದೆಹಲಿ (ಮಾ. 16): ಯುದ್ಧಪೀಡಿತ ಉಕ್ರೇನಿನಿಂದ ಭಾರತಕ್ಕೆ ಮರಳಿರುವ ವೈದ್ಯ ವಿದ್ಯಾರ್ಥಿಗಳಿಗೆ ಉಕ್ರೇನಿನ ಹಲವು ವಿಶ್ವ ವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ. ತನ್ಮೂಲಕ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಮುಂದೇನು ಎಂದು ತಿಳಿಯದೆ ಕಂಗಾಲಾಗಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳ ಆತಂಕ ನಿವಾರಣೆಯಾಗಿದೆ. ವಿಷಯ ತಿಳಿದು ಹಲವು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೆಲ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಚಿಂತಿತರಾಗಿದ್ದಾರೆ.

ಹಲವು ವಿಶ್ವವಿದ್ಯಾಲಯಗಳು ಅದರಲ್ಲೂ ಪಶ್ಚಿಮ ಉಕ್ರೇನ್‌ನಲ್ಲಿರುವ ವಿಶ್ವವಿದ್ಯಾಲಯಗಳು ಸೋಮವಾರದಿಂದ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ. ಲೀವ್‌ ನ್ಯಾಷನಲ್‌ ಮೆಡಿಕಲ್‌ ಯುನಿವರ್ಸಿಟಿ, ಇವಾನೋ-ಫ್ರಾಂಕಿವ್‌ಸ್ಕ್‌ ಮೆಡಿಕಲ್‌ ಯುನಿವರ್ಸಿಟಿ, ವಿನ್ನಿಸ್ತಿಯಾ ನ್ಯಾಷನಲ್‌ ಪಿರೋಗೋವ್‌ ಮೆಡಿಕಲ್‌ ಯುನಿವರ್ಸಿಟಿ ಮತ್ತು ಬೊಗೋಮೊಲೆಟ್ಸ್‌ ನ್ಯಾಷನಲ್‌ ಮೆಡಿಕಲ್‌ ವಿಶ್ವವಿದ್ಯಾಲಯಗಳು ಸೋಮವಾರದಿಂದ ತರಗತಿ ಆರಂಭಿಸಿದೆ. ಇನ್ನೂ ಹಲವು ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿ ಆರಂಭಿಸಲು ಯೋಜಿಸುತ್ತಿವೆ.

ಇದನ್ನೂ ಓದಿRussia-Ukraine War: 20 ದಿನವಾದರೂ ನಿಲ್ಲದ ಯುದ್ಧ: ಅಕ್ಷರಶಃ ಸ್ಮಶಾನವಾದ ಉಕ್ರೇನ್‌..!

ರಷ್ಯಾ ಪಡೆಗಳ ಬಾಂಬ್‌ ಮತ್ತು ಶೆಲ್‌ ದಾಳಿಯ ನಡುವೆಯೂ ಶಿಕ್ಷಕರು ತಮ್ಮ ಮನೆಗಳಿಂದ ಅಥವಾ ಸುರಕ್ಷಿತ ಸ್ಥಳಗಳಿಂದ ತರಗತಿ ನಡೆಸುತ್ತಿದ್ದಾರೆ. ಪರೀಕ್ಷೆಯನ್ನೂ ಆನ್‌ಲೈನ್‌ ಮೂಲಕವೇ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ‘ಆಪರೇಷನ್‌ ಗಂಗಾ’ ಕಾರಾರ‍ಯಚರಣೆ ಮೂಲಕ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ.

ಯುದ್ಧ ಮುಗಿಯಲಿದೆ, ನಂತರ ಬನ್ನಿ ಎನ್ನು​ತ್ತಿ​ರುವ ವಿವಿ​ಗ​ಳು: ಯುದ್ಧ​ಪೀ​ಡಿತ ಉಕ್ರೇನ್‌ನಿಂದ ಗಾಬರಿ, ಆತಂಕದಿಂದ ಓಡೋಡಿ ತವರಿಗೆ ಬಂದಿದ್ದ ವೈದ್ಯ ವಿದ್ಯಾ​ರ್ಥಿ​ಗ​​ಳನ್ನು ಇದೀಗ ಅಲ್ಲಿನ ಕೆಲ ವಿ​ವಿ​​ಗ​ಳು ಹಲೋ, ಹೇಗಿದ್ದೀರಿ? ಹೇಗೆ ತಲುಪಿದಿರಿ? ಎಂದು ಕರೆ ಮಾಡಿ ವಿಚಾರಿಸಲಾರಂಭಿಸಿವೆ. ಯುದ್ಧದ ನಡು​ವೆ ಸೋಮ​ವಾ​ರ​ದಿಂದ ಆನ್‌​ಲೈನ್‌ ತರಗತಿಯನ್ನೂ ಆರಂಭಿ​ಸಿ​ವೆ. ಯುದ್ಧ ಶೀಘ್ರ ಅಂತ್ಯವಾಗಲಿದೆ. ಪ್ರ್ಯಾಕ್ಟಿ​ಕಲ್‌ ಆರಂಭಗೊಳ್ಳುವ ಮುನ್ನ ಮತ್ತೆ ಉಕ್ರೇನ್‌ಗೆ ಬಂದುಬಿಡಿ ಎಂದು ಕೆಲ ಪ್ರಾಧ್ಯಾ​ಪ​ಕರು ಹೇಳಲಾರಂಭಿ​ಸಿ​ದ್ದಾ​ರೆ.

ಉಕ್ರೇ​ನ್‌ನ ಪಶ್ಚಿಮ ಭಾಗ​ದ​ಲ್ಲಿ​ರುವ ಇವಾನೋ ನ್ಯಾಷನಲ್‌ ಮೆಡಿಕಲ್‌ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಬಳ್ಳಾ​ರಿಯ ಸಭಾ ಕೌಸರ್‌ ಹಾಗೂ ತಯ್ಯಾಬಾ ಕೌಸರ್‌ ಸೋದ​ರಿ​ಯ​ರಿಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ತರಗತಿಗಳು ನಡೆಯುತ್ತಿವೆ. ಮಧ್ಯೆ 20 ನಿಮಿಷಗಳ ವಿಶ್ರಾಂತಿ. ಎಲ್ಲ ವಿಷಯಗಳ ಪ್ರಾಧ್ಯಾಪಕರು ಮೆಡಿಕಲ್‌ ಕಾಲೇಜಿನಿಂದಲೇ ತರಗತಿ ನಡೆಸುತ್ತಿದ್ದಾರೆ.

‘ನಮಗೆ ಯಾವುದೇ ಯುದ್ಧ ಭೀತಿ ಇಲ್ಲ. ನಮ್ಮ ಭಾಗದಲ್ಲಿ ರಷ್ಯಾ ಸೇನೆ ದಾಳಿ ನಡೆಸುತ್ತಿಲ್ಲ. ನಾವು ನಿರಾಳವಾಗಿದ್ದೇವೆ. ಯುದ್ಧ ಶೀಘ್ರ ಅಂತ್ಯವಾಗಲಿದೆ. ಪ್ರಾಕ್ಟಿಕಲ್‌ ಆರಂಭಗೊಳ್ಳುವ ಮುನ್ನ ಮತ್ತೆ ಉಕ್ರೇನ್‌ಗೆ ಬಂದುಬಿಡಿ’ ಎಂದು ಅಧ್ಯಾಪಕರು ಹೇಳು​ತ್ತಿ​ದ್ದಾ​ರಂತೆ.

ಇದನ್ನೂ ಓದಿRussia Ukraine War: ಚೀನಾದಿಂದ ಸೇನಾ ನೆರವು ಕೋರಿದ ರಷ್ಯಾ?: ಅಮೆರಿಕ ಗಂಭೀರ ಆರೋಪ!

ಪಾಠ ಸರಿಯಾಗಿ ಅರ್ಥವಾಗದಿದ್ದರೆ ಹೇಳಿ, ಹೆಚ್ಚುವರಿ ತರಗತಿ ನಡೆಸಲು ಸಿದ್ಧರಿದ್ದೇವೆ. ಯುದ್ಧದ ಸ್ಥಿತಿ​ಯ​ಲ್ಲೂ ನಾವು ಮಾನಸಿಕವಾಗಿ ಗಟ್ಟಿಯಾಗಿದ್ದೇವೆ. ನಿಮ್ಮ ಶಿಕ್ಷಣ ಕುಂಠಿತವಾಗಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದು ಅಧ್ಯಾ​ಪ​ಕರು ತಿಳಿ​ಸಿ​ದ್ದಾ​ರೆಂದು ಹೇಳು​ತ್ತಾ​ರೆ ಕೌಸರ್‌ ಸೋದ​ರಿ​ಯ​ರು.

ಇನ್ನು ರೊಮೋ​ನಿಯಾದಿಂದ 40 ಕಿ.ಮೀ. ದೂರದ ಬುಕೊವೆನಿಯಾ ವಿವಿಯ ದ್ವಿತೀಯ ವರ್ಷ​ದ ಎಂಬಿಬಿಎಸ್‌ ವಿದ್ಯಾ​ರ್ಥಿನಿ ಮೈಸೂ​ರಿನ ಪ್ರಿಯಾಂಕಾಗೆ ಕೆಲ ವಿಷಯಗಳ ತರಗತಿಗಳು ಮಾತ್ರ ನಡೆ​ಯು​ತ್ತಿ​ವೆ. ಕಾರ​ಣ ವಿವಿಯ ಇಬ್ಬರು ಪ್ರಾಧ್ಯಾಪಕರು ಸೇನೆಗೆ ಸೇರ್ಪಡೆಗೊಂಡಿರುವುದರಿಂದ ಅವರು ತರ​ಗತಿ ತೆಗೆ​ದು​ಕೊ​ಳ್ಳು​ತ್ತಿ​ಲ್ಲ​ವಂತೆ.

‘ನಮ್ಮ ಕೆಲ ಪ್ರೊಫೆ​ಸ​ರ್‌​ಗಳು ಕ್ಲಾಸ್‌ ತೆಗೆ​ದು​ಕೊ​ಳ್ಳು​ತ್ತಿಲ್ಲ, ಯಾರಾರ‍ಯ​ರಿಗೆ ಏನೇನು ಆಗಿ​ದೆಯೋ ಎಂಬುದೇ ಗೊತ್ತಾ​ಗು​ತ್ತಿಲ್ಲ’ ಎನ್ನು​ತ್ತಾನೆ ಒಡಿಸಿ ನ್ಯಾಷ​ನಲ್‌ ಕಾಲೇ​ಜಿನ 2ನೇ ವರ್ಷದ ಎಂಬಿ​ಬಿ​ಎಸ್‌ ವಿದ್ಯಾರ್ಥಿ, ಕೋಲಾ​ರದ ವಿಶಾ​ಲ್‌.

ಯುದ್ಧ ನಡೆಯುತ್ತಿದ್ದರೂ ವಿವಿಯವರು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇದಕ್ಕೆ ಆನ್‌ಲೈನ್‌ ಕ್ಲಾಸ್‌ ಸಾಕ್ಷಿ. ಆನ್‌ಲೈನ್‌ ಕ್ಲಾಸ್‌ದಿಂದ ಸಮಸ್ಯೆಯಾಗುತ್ತದೆ ಎನ್ನುವುದಕ್ಕಿಂತ ಯುದ್ಧದ ಸಂದರ್ಭದಲ್ಲೂ ವಿದ್ಯಾರ್ಥಿಗಳ ಬಗ್ಗೆ ಇಷ್ಟೊಂದು ಕಾಳಜಿ ಮಾಡುತ್ತಾರಲ್ಲ ಎನ್ನುವುದೇ ಸಮಾಧಾನ.