Asianet Suvarna News Asianet Suvarna News

Russia-Ukraine War: 20 ದಿನವಾದರೂ ನಿಲ್ಲದ ಯುದ್ಧ: ಅಕ್ಷರಶಃ ಸ್ಮಶಾನವಾದ ಉಕ್ರೇನ್‌..!

*  ಸಂಧಾನ ನಡುವೆಯೂ ಭಾರಿ ಪ್ರಮಾಣದ ಶೆಲ್‌, ಬಾಂಬ್‌ ದಾಳಿ
*  ಜನವಸತಿ, ಅಪಾರ್ಟ್‌ಮೆಂಟ್‌, ಸರ್ಕಾರಿ ಇಲಾಖೆ ಕಟ್ಟಡಗಳು ಭಸ್ಮ
*  ಕೀವ್‌, ಮರಿಯುಪೋಲ್‌, ಕಾರ್ಖೀವ್‌ ಮುಂತಾದ ನಗರಗಳೀಗ ಸ್ಮಶಾನ ದೃಶ್ಯ
 

Not Yet Stop Russia Ukraine War After 20 Days grg
Author
First Published Mar 16, 2022, 5:23 AM IST

ಕೀವ್‌(ಮಾ.16): ಉಕ್ರೇನನ್ನು(Ukraine) ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳಲು ರಷ್ಯಾ(Russia) ಆರಂಭಿಸಿರುವ ಯುದ್ಧ(War) ಮಂಗಳವಾರ 20 ದಿನ ಪೂರೈಸಿದೆ. ಇಷ್ಟು ದಿನಗಳಾದರೂ ಮುಗಿಯದ ಯುದ್ಧ ಈ 2 ದೇಶ ಮಾತ್ರವಲ್ಲದೆ ವಿಶ್ವಾದ್ಯಂತ(World) ಆತಂಕ ಸೃಷ್ಟಿಸಿದೆ.

ಉಭಯ ದೇಶಗಳ ನಡುವೆ ಯುದ್ಧ ಸ್ಥಗಿತಕ್ಕೆ ಮಾತುಕತೆ ನಡೆಯುತ್ತಿದ್ದರೂ, ರಾಜಧಾನಿ ಕೀವ್‌, ಮರಿಯುಪೋಲ್‌ ಸೇರಿದಂತೆ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ತನ್ನ ಯತ್ನವನ್ನು ರಷ್ಯಾ ಮುಂದುವರೆಸಿದೆ. ಅದರಂತೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಭಾರಿ ಪ್ರಮಾಣದ ಶೆಲ್‌, ಬಾಂಬ್‌ ದಾಳಿ ಮುಂದುವರೆಸಿದೆ. ಹೀಗಾಗಿ ಸತತ 20ನೇ ದಿನವೂ ದೇಶದ ಬಹುತೇಕ ಪ್ರಮುಖ ಪಟ್ಟಣಗಳಲ್ಲಿ ಜನಜೀವನ ಸ್ತಬ್ಧಗೊಂಡಿದ್ದು, ಜನರು ಬಂಕರ್‌ನಲ್ಲೇ ಜೀವನ ಮುಂದುವರೆಸಿದ್ದಾರೆ. ಈ ನಡುವೆ, ಯುದ್ಧಾತಂಕದಿಂದಾಗಿ ಕೀವ್‌ನಲ್ಲಿ 36 ತಾಸಿನ ಕರ್ಫ್ಯೂ(Curfew) ಘೋಷಣೆ ಮಾಡಲಾಗಿದೆ.

ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿ: ಭಾರತೀಯ ವಿದ್ಯಾರ್ಥಿಗಳು ನಿರಾಳ

ಮಂಗಳವಾರ ಬೆಳಗ್ಗೆಯೇ ರಷ್ಯಾ ಪಡೆಗಳು ರಾಜಧಾನಿ ಕೀವ್‌ನ ಹಲವು ಸ್ಥಳಗಳ ಮೇಲೆ ಸರಣಿ ದಾಳಿ ನಡೆಸಿದವು. ಜನವಸತಿ ಪ್ರದೇಶಗಳ ಸಮೀಪದಲ್ಲೇ ನಡೆದ ಈ ದಾಳಿಯಿಂದಾಗಿ, ಉರುಳಿ ಬಿದ್ದ ಕಟ್ಟಡಗಳಿಂದ ಜನರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೆ ಮೆಟ್ರೋ ಸ್ಟೇಷನ್‌ನ ಪ್ರವೇಶ ದ್ವಾರ ಪ್ರದೇಶ ಧ್ವಂಸಗೊಂಡಿದೆ. ಹೀಗಾಗಿ ಈ ಸ್ಟೇಷನ್‌ನಲ್ಲಿ ಮೆಟ್ರೋ ರೈಲು(Metro Railway) ನಿಲುಗಡೆ ಸ್ಥಗಿತಗೊಳಿಸಲಾಗಿದೆ. ಈ ಸ್ಟೇಷನ್‌ನ ಬಂಕರ್‌ಗಳಲ್ಲಿ ನೂರಾರು ಜನರು ಆಶ್ರಯ ಪಡೆದುಕೊಂಡಿದ್ದಾರೆ.

ಕೀವ್‌ ನಗರ ಮಾತ್ರವಲ್ಲದೆ, ನಗರದ ಹೊರವಲಯದ ಪ್ರದೇಶಗಳಾದ ಇರ್ಪಿನ್‌, ಬುಚಾ, ಹೊಸ್ಟೊಮೆಲ್‌ ನಗರಗಳ ಮೇಲೂ ಸತತ ದಾಳಿ ನಡೆಸಲಾಗಿದೆ. ಕೀವ್‌ನ ಪೊಡಿಲ್‌ಸ್ಕಿ ಜಿಲ್ಲೆಯ ಕಟ್ಟಡವೊಂದರ ಮೇಲೆ ನಡೆದ ದಾಳಿಯ ಪರಿಣಾಮ 10 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ(Apartment) ಬೆಂಕಿ ಬಿದ್ದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಮತ್ತೊಂದೆಡೆ ವಿಶ್ವದ ಅತಿದೊಡ್ಡ ಸರಕು ವಿಮಾನ ತಯಾರಿಸುವ ಆ್ಯಂಟನೋವ್‌ ಕಾರ್ಖಾನೆ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಸತತ ದಾಳಿಯ ಪರಿಣಾಮ ನಗರದ ಬಹುತೇಕ ರಸ್ತೆಗಳು ಕಟ್ಟಡದ ಅವಶೇಷಗಳಿಂದ ತುಂಬಿಹೋಗಿದ್ದು, ಸಂಚಾರ ನಡೆಸಲಾಗದ ಸ್ಥಿತಿಗೆ ತಲುಪಿವೆ. ಆದರೆ 20 ದಿನಗಳ ದಾಳಿಯ ನಂತರವೂ ರಷ್ಯಾ ಪಡೆಗಳು ಇನ್ನೂ ಕೀವ್‌ನ ಕೇಂದ್ರ ಭಾಗದಿಂದ 15 ಕಿ.ಮೀ ದೂರದಲ್ಲೇ ಇವೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

Ukraine Crisis ಉಕ್ರೇನ್ ಬೈರೆಕ್ಟರ್ ಡ್ರೋನ್‌ಗೆ ಪ್ರತಿಯಾಗಿ ನಿರ್ಬಂಧಿತ ಈರುಳ್ಳಿ ಬಾಂಬ್ ಹಾಕಿತಾ ರಷ್ಯಾ?

20 ದಿನದಲ್ಲಿ 900 ಕ್ಷಿಪಣಿ ದಾಳಿ:

ಕಳೆದ 20 ದಿನಗಳಲ್ಲಿ ರಷ್ಯಾ ಸೇನೆ ಕನಿಷ್ಠ 900 ಕ್ಷಿಪಣಿಗಳನ್ನು(Missile) ಉಕ್ರೇನ್‌ ಮೇಲೆ ದಾಳಿ ಮಾಡಲು ಬಳಸಿದೆ. ಆದರೆ ಈಗಲೂ ಉಕ್ರೇನ್‌ ವಾಯುಸೀಮೆಯು, ರಷ್ಯಾ ದಾಳಿಯನ್ನು ಹಿಮೆಟ್ಟಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಲೇ ಇದೆ. ಹೀಗಾಗಿ ಇನ್ನೂ ಉಕ್ರೇನ್‌ ವಾಯಸೀಮೆಯ ಮೇಲೆ ಪೂರ್ಣ ಹಿಡಿತ ಸಾಧಿಸುವುದು ರಷ್ಯಾ ಸೇನೆಗೆ ಸಾಧ್ಯವಾಗಿಲ್ಲ. ಜೊತೆಗೆ ಹಿಂದಿನ ವಾರಗಳಿಗೆ ಹೋಲಿಸಿದರೆ ಒಟ್ಟಾರೆ ದಾಳಿಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 20 ದಿನದಲ್ಲಿ ಯುದ್ಧಕ್ಕೆ ಬೆಚ್ಚಿ 3 ಲಕ್ಷಕ್ಕೂ ಹೆಚ್ಚು ಜನರು ವಿದೇಶಕ್ಕೆ ವಲಸೆ ಹೋಗಿದ್ದಾರೆ.

ಮರಿಯುಪೋಲ್‌ನಲ್ಲಿ ಜನರ ರಕ್ಷಣೆ:.

ರಷ್ಯಾದ ತೀವ್ರ ದಾಳಿಗೆ ಸಾಕ್ಷಿಯಾಗಿರುವ ಮರಿಯುಪೋಲ್‌ನಿಂದ ಮಂಗಳವಾರ 160 ಕಾರುಗಳಲ್ಲಿ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ. ಹಲವು ದಿನಗಳಿಂದ ಸತತವಾಗಿ ನಡೆಯುತ್ತಿದ್ದ ಭೀಕರ ದಾಳಿಯ ಪರಿಣಾಮ ಇಲ್ಲಿ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಜೊತೆಗೆ ಸತತ ದಾಳಿಯ ಪರಿಣಾಮ ನಗರದ ಸಾವಿರಾರು ಜನರು ನೀರು, ಆಹಾರ, ವಿದ್ಯುತ್‌, ಔಷಧಿ ಇಲ್ಲದೆ ಪರಿತಪಿಸುವಂತಾಗಿತ್ತು. ಉಳಿದಂತೆ ಮೈಕೋಲೈವ್‌, ಚೆರ್ನಿಹಿಲ್‌, ಖೇರ್‌ಸನ್‌ ಸೇರಿದಂತೆ ಹಲವು ನಗರಗಳ ಮೇಲೂ ರಷ್ಯಾ ದಾಳಿ ಮುಂದುವರೆದಿದೆ.
 

Follow Us:
Download App:
  • android
  • ios