*ಚೀನಾ ಸೇನಾ ನೆರವು ಕೋರಿದ ರಷ್ಯಾ?: ಕಮ್ಯುನಿಸ್ಟ್‌ ಚೀನಾ ವಿರುದ್ಧ ಅಮೆರಿಕ ಗಂಭೀರ ಆರೋಪ*ಅಮೆರಿಕ ಸುಳ್ಳು ಸುದ್ದಿ ಹಬ್ಬಿಸುತ್ತಿದೆ: ಚೀನಾ, ರಷ್ಯಾ: ಅಣುಸ್ಥಾರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್‌ ಕಡಿತ*ಕೂಲಿಂಗ್‌ ವ್ಯವಸ್ಥೆ ಹಾಳಾಗಿ ವಿಕಿರಣ ಸೋರಿಕೆ: ಚೆರ್ನೋಬಿಲ್‌ ಸ್ಥಾವರದಲ್ಲಿ ಅಣುತ್ಯಾಜ್ಯಗಳ ಸಂಗ್ರಹ

ವಾಷಿಂಗ್ಟನ್‌ (ಮಾ. 15) : ಉಕ್ರೇನ್‌ ಮೇಲೆ ಸತತ 19 ದಿನಗಳಿಂದ ದಾಳಿ ನಡೆಸುತ್ತಿರುವ ರಷ್ಯಾ, ಇದೀಗ ಈ ಯುದ್ಧಕ್ಕೆ ನೆರವಾಗುವಂತೆ ತನ್ನ ಮಿತ್ರ ದೇಶ ಚೀನಾದ ನೆರವು ಕೋರಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಹೆಸರು ಹೇಳಬಯಸದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಈ ಸ್ಫೋಟಕ ಮಾಹಿತಿ ನೀಡಿದ್ದಾರೆ. ನ್ಯಾಟೋ ದೇಶಗಳ ತಂಟೆಗೆ ಬಂದರೆ, ಸುಮ್ಮನೆ ಬಿಡಲ್ಲ. ಅದು ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾದರೂ ಪರವಾಗಿಲ್ಲ ಎಂದು ರಷ್ಯಾಕ್ಕೆ ಜೋ ಬೈಡೆನ್‌ ಎಚ್ಚರಿಕೆ ಮತ್ತು ರಷ್ಯಾ ಮೇಲಿನ ಜಾಗತಿಕ ನಿರ್ಬಂಧಗಳ ಪರಿಣಾಮವನ್ನು ಕಡಿಮೆ ಮಾಡಲು ಚೀನಾ ನೆರವು ನೀಡಿದರೆ ಅದು ತಕ್ಕ ಪಾಠ ಎದುರಿಸಬೇಕಾಗಿ ಬರಲಿದೆ ಎಂಬ ಶ್ವೇತಭವನದ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ಎಚ್ಚರಿಕೆ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.

ಅಮೆರಿಕದ ಆರೋಪವನ್ನು ಸುಳ್ಳು ಎಂದು ಚೀನಾ ಹಾಗೂ ರಷ್ಯಾ ಸರ್ಕಾರಗಳು ತಳ್ಳಿಹಾಕಿವೆ. ಉಕ್ರೇನ್‌ ಯುದ್ಧ ನಿಭಾಯಿಸಲು ಬೇಕಾಗುವಷ್ಟುಸೇನೆ ನಮ್ಮ ಬಳಿ ಇದೆ ಎಂದು ರಷ್ಯಾ ಸರ್ಕಾರ ಹೇಳಿದೆ. ಇನ್ನೊಂದೆಡೆ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾಹೋ ಲಿಜಿಯಾನ್‌, ‘ಉಕ್ರೇನ್‌ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಚೀನಾ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಉಕ್ರೇನ್‌-ರಷ್ಯಾ 4ನೇ ಸಂಧಾನ ವಿಫಲ: ಕೀವ್‌, ಖಾರ್ಕೀವ್‌ ಮೇಲೆ ನಿರಂತರ ದಾಳಿ!

ಆದಾಗ್ಯೂ ಒಂದು ವೇಳೆ ಚೀನಾ ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾಕ್ಕೆ ನೆರವು ನೀಡಿದ್ದೇ ಅದಲ್ಲಿ ಅದು ಈಗಾಗಲೇ ನಡೆಯುತ್ತಿರುವ ಯುದ್ಧದ ಕ್ಷೇತ್ರ ವ್ಯಾಪ್ತಿ ಮತ್ತಷ್ಟುವಿಸ್ತೃತಗೊಳ್ಳುವ ಎಲ್ಲಾ ಆತಂಕವೂ ಎದುರಾಗಿದೆ.

ನೆರವು ಕೋರಿಕೆ- ಅಮೆರಿಕ ಆರೋಪ: ಅಮೆರಿಕದ ಹಿರಿಯ ಅಧಿಕಾರಿಯೊಬ್ಬರ ಅನ್ವಯ, ಕಳೆದ ಕೆಲ ದಿನಗಳಲ್ಲಿ ರಷ್ಯಾ ಸರ್ಕಾರವು ಚೀನಾದಿಂದ ಮಿಲಿಟರಿ ಉಪಕರಣ ಸೇರಿದಂತೆ ಉಕ್ರೇನ್‌ ದಾಳಿಗೆ ಅಗತ್ಯವಾದ ಹಲವು ರೀತಿಯ ನೆರವು ಕೋರಿದೆ. ಅಲ್ಲದೆ ಚೀನಾ ಸರ್ಕಾರ, ಉಕ್ರೇನ್‌ ಮೇಲೆ ರಷ್ಯಾ ಸೇನೆ ಯುದ್ಧ ಸಾರಲು ಪೂರಕವಾಗುವಂತೆ ಹಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಿದೆ ಎಂದೂ ಆರೋಪಿಸಿದ್ದಾರೆ.

ಮತ್ತೊಂದೆಡೆ ನಿರ್ಬಂಧಗಳ ಪರಿಣಾಮ ತಡೆಯಲು ರಷ್ಯಾಕ್ಕೆ ಚೀನಾ ನೆರವು ನೀಡುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ‘ನಾನು ಬಹಿರಂಗವಾಗಿ ಚೀನಾಕ್ಕೆ ಯಾವುದೇ ಎಚ್ಚರಿಕೆ ನೀಡಲು ಹೋಗುವುದಿಲ್ಲ. ಆದರೆ ನಾವು ನೇರವಾಗಿ ಮತ್ತು ಖಾಸಗಿಯಾಗಿ ಬೀಜಿಂಗ್‌ಗೆ ಈ ವಿಷಯವನ್ನು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ರಷ್ಯಾಕ್ಕೆ ಯಾವುದೇ ನೆರವು ನೀಡಲು ಮುಂದಾದಲ್ಲಿ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸೂಚಿಸಿದ್ದೇವೆ’ ಎಂದು ಹೇಳಿದ್ದಾರೆ.

ಚೆರ್ನೋಬೆಲ್‌ ಅಣುಸ್ಥಾವರಕ್ಕೆ ಹಾನಿ: ಮತ್ತೆ ವಿಕಿರಣ ಸೋರಿಕೆ ಭೀತಿ: ಚೆರ್ನೋಬಿಲ್‌ ಅಣುಸ್ಥಾವರಕ್ಕೆ ಪೂರೈಕೆ ಮಾಡಲಾಗುತ್ತಿದ್ದ ವಿದ್ಯುತ್‌ ಲೈನ್‌ಗಳಿಗೆ ರಷ್ಯಾ ಮತ್ತೊಮ್ಮೆ ಹಾನಿ ಮಾಡಿದೆ ಎಂದು ಉಕ್ರೇನ್‌ ಹೇಳಿದೆ. ಇದರಿಂದಾಗಿ ಚೆರ್ನೋಬಿಲ್‌ನಿಂದ ಮತ್ತೊಮ್ಮೆ ವಿಕಿರಣ ಸೋರಿಕೆ ಭೀತಿ ಎದುರಾಗಿದೆ.

ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿದ ಪುಟಿನ್‌ಗೆ ವಾಲಿ ಚಾಲೆಂಜ್!

ಈ ಹಿಂದೆ ಹಾಳು ಮಾಡಿದ್ದ ವಿದ್ಯುತ್‌ ಲೈನ್‌ಗಳನ್ನು ಭಾನುವಾರ ಉಕ್ರೇನ್‌ ಸರಿಪಡಿಸಿತ್ತು. ಆದರೆ ವಿದ್ಯುತ್‌ ಪೂರೈಕೆ ಪೂರ್ತಿಯಾಗಿ ಮರುಸ್ಥಾಪನೆಯಾಗುವ ಮೊದಲೇ ರಷ್ಯಾ ಮತ್ತೊಮ್ಮೆ ವಿದ್ಯುತ್‌ ಲೈನ್‌ ಅನ್ನು ಕಡಿತಗೊಳಿಸಿದೆ ಎಂದು ಅಣುಸ್ಥಾವರದ ಆಡಳಿತ ಹೇಳಿದೆ. ಚೆರ್ನೋಬಿಲ್‌ ಅಣುಸ್ಥಾವರ ಈಗ ಕೆಲಸ ಮಾಡುತ್ತಿಲ್ಲವಾದರೂ ಅಣು ತ್ಯಾಜ್ಯಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

ಹಾಗಾಗಿ ವಿಕಿರಣಗಳು ಬಿಡುಗಡೆಯಾಗದಂತೆ ತಡೆಯಲು ಅಣು ಕ್ರಿಯಾಕಾರಿಗಳನ್ನು ತಂಪಾಗಿಡುವುದು ಅನಿವಾರ್ಯವಾಗಿದೆ. ಆದರೆ ಈಗ ವಿದ್ಯುತ್‌ ಪೂರೈಕೆ ಕಡಿತಗೊಂಡಿರುವುದರಿಂದ ಅಣುಸ್ಥಾವರವನ್ನು ತಂಪಾಗಿಡುವ ವ್ಯವಸ್ಥೆ ಹಾಳಾಗಿ ವಿಕಿರಣ ಸೋರಿಕೆಯಾಗುವ ಸಂಭವವಿದೆ.

ಚೆನೋಬಿಲ್‌ನಲ್ಲಿ ಸಂಗ್ರಹಿಸಿರುವ ಅಣು ತ್ಯಾಜ್ಯಗಳಿಂದ ವಿಕಿರಣಗಳು ಹೊರಹೊಮ್ಮದಂತೆ ತಡೆಗಟ್ಟಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಸೂಚನೆ ನೀಡಿದೆ. ಒಂದು ವೇಳೆ ಕೂಲಿಂಗ್‌ ವ್ಯವಸ್ಥೆ ಹಾಳಾದರೆ ಇಡೀ ಜಗತ್ತೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ. ಹಾಗಾಗಿ ಚೆರ್ನೋಬಿಲ್‌ನಲ್ಲಿ ಡೀಸೆಲ್‌ ಮೋಟಾರ್‌ಗಳನ್ನು ಸಹ ಅಳವಡಿಸಲಾಗಿದೆ. ಆದರೆ ಅವು ಹೆಚ್ಚಿನ ದಿನದವರೆಗೆ ಕೆಲಸ ನಿರ್ವಹಿಸುವುದು ಅಸಾಧ್ಯವಾಗಿದೆ. ಈಗ ರಷ್ಯಾ ದಾಳಿಯಿಂದ ವಿದ್ಯುತ್‌ ಸಂಪರ್ಕ ಕಡಿಗೊಂಡಿರುವುದು ಭೀತಿಗೆ ಕಾರಣವಾಗಿದೆ.