Asianet Suvarna News Asianet Suvarna News

ಒಂದೇ ವರ್ಷದಲ್ಲಿ ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಶೇ.500ರಷ್ಟು ಏರಿಕೆ, ಕೋಳಿ ಕೆಜಿಗೆ 383 ರೂಪಾಯಿ!

ವಿಶ್ವದಲ್ಲಿಯೇ ಅತಿದೊಡ್ಡ ಈರುಳ್ಳಿ ಉತ್ಪಾದಕ ದೇಶಗಳಲ್ಲಿ ಒಂದಾಗಿರುವ ಪಾಕಿಸ್ತಾನದಲ್ಲಿಯೇ ಈರುಳ್ಳಿಯ ಬೆಲೆ ಒಂದೇ ವರ್ಷದಲ್ಲಿ ಶೇ.500ರಷ್ಟು ಏರಿಕೆಯಾಗಿದೆ. ಇನ್ನು ದೇಶದ ಖಜಾನೆಯಲ್ಲಿ ಮುಂದಿನ 21 ದಿನಗಳಿಗೆ ಆಗುವಷ್ಟು ಮಾತ್ರವೇ ಹಣದ ವ್ಯವಸ್ಥೆ ಇದೆ.

Onion prices increased by 500 percent in a year in Pakistan chicken 383 rs per KG san
Author
First Published Jan 11, 2023, 4:11 PM IST

ಕರಾಚಿ (ಜ.11): ಪಾಕಿಸ್ತಾನದ ಆರ್ಥಿಕತೆಯ ಬಗ್ಗೆ ದಿನಕ್ಕೊಂದು ರೀತಿಯ ಸುದ್ದಿಗಳು ಬರುತ್ತಿವೆ. ಆಪ್ತ ದೇಶಗಳು ಸಹಾಯಕ್ಕೆ ಬರದೇ ಇದ್ದಲ್ಲಿ ಪಾಕಿಸ್ತಾನ ದಿವಾಳಿಯಾಗುವುದು ಖಚಿತವಾಗಿದೆ. ಸಾಲದ ಮೇಲೆ ಸಾಲ ಮಾಡಿಕೊಂಡು, ದೇಶವನ್ನೇ ಮಾರಿಕೊಳ್ಳುವ ಸ್ಥಿತಿಯಲ್ಲಿ ಪಾಕಿಸ್ತಾನವಿದೆ. ಅದರೆ, ದೇಶದ ರಾಜಕಾರಣಿಗಳು ಮಾತ್ರ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ಇದ್ದಾರೆ. ಪಾಕಿಸ್ತಾನದ ದಿನಬಳಕೆಯ ಎಲ್ಲಾ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವ ಈರುಳ್ಳಿ ಒಂದೇ ವರ್ಷದಲ್ಲಿ ಶೇ.500ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಜನವರಿಯಲ್ಲಿ ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಕೆಜಿ 36 ರೂಪಾಯಿಗಳಾಗಿತ್ತು. ಈ ಬಾರಿಯ ಜನವರಿಯಲ್ಲಿ 220 ರೂಪಾಯಿ ಆಗಿದೆ.  ಜನವರಿ 2022 ರಲ್ಲಿ ಹಣದುಬ್ಬರವು 13% ದರದಲ್ಲಿ ಏರುತ್ತಿದ್ದರೆ,  ಪ್ರಸ್ತುತ ಅದು 25% ದರದಲ್ಲಿ ಹೆಚ್ಚುತ್ತಿದೆ. ವಿದೇಶಿ ವಿನಿಮಯ ಮೀಸಲು 9 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಡಾಲರ್‌ ಎದುರು ಪಾಕಿಸ್ತಾನದ ರೂಪಾಯಿಯ ಮೌಲ್ಯ ಸಂಪೂರ್ಣವಾಗಿ ನೆಲಕಚ್ಚಿದೆ. ಪ್ರಸ್ತುತ ಪಾಕಿಸ್ತಾನದ ಮೇಲಿನ ಸಾಲದ ಹೊರೆ ಜಿಡಿಪಿಯ ಶೇ. 78ರಷ್ಟಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

ದಿನಬಳಕೆಯ ವಸ್ತುಗಳಲ್ಲಿ ಭಾರಿ ಏರಿಕೆ: 2022ರ ಜನವರಿಯಲ್ಲಿ ಪಾಕಿಸ್ತಾನದಲ್ಲಿ ಒಂದು ಕೆಜಿ ಈರುಳ್ಳಿಗೆ 36 ರೂಪಾಯಿ ಆಗಿದ್ದರೆ, ಈ ವರ್ಷ 220 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಕಳೆದ ವರ್ಷದ ಇದೇ ಸಮಯದಲ್ಲಿ ಒಂದು ಕೆಜಿ ಚಿಕನ್‌ಗೆ 210 ರೂಪಾಯಿ ಆಗಿತ್ತು. ಈ ಬಾರಿ ಅದು 383 ರೂಪಾಯಿಗೆ ಏರಿದೆ. 150 ರೂಪಾಯಿ ಇದ್ದ ಬೇಳೆ ಕೆಜಿಗೆ ಈಗ 228 ರೂಪಾಯಿ ಆಗಿದೆ. 32 ಕೆಜಿಗೆ ಸಿಗುತ್ತಿದ್ದ ಒಂದು ಕೆಜಿ ಉಪ್ಪಿನ ಬೆಲೆ ಈಗ 49 ರೂಪಾಯಿ ಆಗಿದೆ. 36 ರೂಪಾಯಿಗೆ ಸಿಗುತ್ತಿದ್ದ ಒಂದು ಕೆಜಿ ಬಾಸುಮತಿ ಅಕ್ಕಿಗೆ ಈಗ 220 ರೂಪಾಯಿ ಆಗಿದೆ. ಒಂದು ಕೆಜಿ ಸಾಸಿವೆ ಎಣ್ಣೆಗೆ 532 ರೂಪಾಯಿ ಆಗಿದೆ. ಒಂದು ವರ್ಷದ ಹಿಂದೆ 374 ರೂಪಾಯಿ ಆಗಿತ್ತು. 65 ರೂಪಾಯಿಗೆ ಸಿಗುತ್ತಿದ್ದ 1 ಪ್ಯಾಕೆಟ್‌ ಬ್ರೆಡ್‌ಗೆ ಈಗ 89 ರೂಪಾಯಿ ಆಗಿದೆ.  ಒಂದು ಲೀಟರ್‌ ಹಾಲಿಗೆ 114 ರೂಪಾಯಿಯಿಂದ 149 ರೂಪಾಯಿ ಆಗಿದೆ.

ಪಾಕಿಸ್ತಾನದಲ್ಲಿ ಹೂಡಿಕೆ ಏರಿಸುವ ಬಗ್ಗೆ ಸೌದಿ ರಾಜನ ಮಹಾಪ್ಲ್ಯಾನ್‌!

ಏರಿಕೆಗೆ ಕಾರಣವೇನು?: ಕಳೆದ 9 ತಿಂಗಳಿನಿಂದ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಇದೆ. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಇನ್ನು ಜೂನ್ 2022 ಮತ್ತು ಸೆಪ್ಟೆಂಬರ್ 2022 ರ ನಡುವೆ, ಪ್ರವಾಹವು ದೇಶದ ಹೆಚ್ಚಿನ ಭಾಗಗಳನ್ನು ಧ್ವಂಸಗೊಳಿಸಿತು. ಇದು 1.5 ಕೋಟಿಗೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಇದರಿಂದ ದೇಶಕ್ಕೆ 12.5 ಬಿಲಿಯನ್ ಡಾಲರ್ ನಷ್ಟವಾಗಿದೆ. ಹೆಚ್ಚುತ್ತಿರುವ ಆರ್ಥಿಕ ಕೊರತೆಯಿಂದ ಪಾಕಿಸ್ತಾನದ ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತವಾಗಿದೆ.

ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್‌ ಹಿಡಿದು ಸರ್ಕಾರದಿಂದ ಆಹಾರ ವಿತರಣೆ

ಪಾಕಿಸ್ತಾನದ ರೂಪಾಯಿ ಡಿಸೆಂಬರ್ 2020 ರಲ್ಲಿ ಡಾಲರ್ ವಿರುದ್ಧ ರೂ 160.1 ಆಗಿತ್ತು, ಡಿಸೆಂಬರ್ 2022 ರಲ್ಲಿ ರೂ 224.8 ಕ್ಕೆ ದುರ್ಬಲವಾಯಿತು. ಪ್ರಪಂಚದಾದ್ಯಂತ ತೈಲ ಮತ್ತು ಇತರ ವಸ್ತುಗಳ ಬೆಲೆಗಳು ಹೆಚ್ಚಾಗಿದೆ. ಪಾಕಿಸ್ತಾನವು ತನ್ನ ಹೆಚ್ಚಿನ ಅಗತ್ಯ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಕಾರಣದಿಂದಲೇ ಇಲ್ಲಿ ತಾಳೆ ಎಣ್ಣೆ, ಔಷಧಿ, ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ.

Follow Us:
Download App:
  • android
  • ios