Omicron Not Become Endemic: ಕೊರೊನಾ ಲಸಿಕೆ ಪಡೆಯದವರಿಗೆ ಒಮಿಕ್ರಾನ್ ಅಪಾಯಕಾರಿ WHO ಎಚ್ಚರಿಕೆ
ಇದುವರೆಗೆ ಕೊರೊನಾ ಲಸಿಕೆ ಪಡೆಯದ ಮಂದಿಗೆ ಒಮಿಕ್ರಾನ್ ರೂಪಾಂತರಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಇದನ್ನು ಎಂಡೆಮಿಕ್ ಅಂತಾ ಪರಿಗಣಿಸಲು ಸಾಧ್ಯವಿಲ್ಲ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಜಿನಿವಾ: ಇದುವರೆಗೆ ಕೊರೊನಾ ಲಸಿಕೆ ಪಡೆಯದ ಮಂದಿಗೆ ಒಮಿಕ್ರಾನ್ ರೂಪಾಂತರಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಒಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್‌ನಿಂದಾಗಿ ಜಾಗತಿಕವಾಗಿ ಕೋವಿಡ್ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಡೆಲ್ಟಾಗಿಂತಲೂ ಒಮಿಕ್ರಾನ್ ಬಹಳ ವೇಗವಾಗಿ ಹರಡುತ್ತಿದ್ದು, ಇದನ್ನು ಎಂಡೆಮಿಕ್ ಅಂತಾ ಪರಿಗಣಿಸಲು ಸಾಧ್ಯವಿಲ್ಲ ಎಂದೂ ಡಬ್ಲ್ಯೂಎಚ್‌ಒ ಹೇಳಿದೆ.
ಕೊರೊನಾ ವೈರಸ್ ಸೋಂಕಿನ ಪ್ರಮಾಣ ಜಾಗತಿಕವಾಗಿ ತೀವ್ರ ಸ್ವರೂಪದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಮಿಕ್ರಾನ್ ವೈರಸ್ ಅನ್ನು ಸೋಂಕು ಕೊನೆಯಾಗುವ ಲಕ್ಷಣ ಎಂದು ಈಗಲೇ ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕಳೆದ ಒಂದು ವಾರದಲ್ಲಿ ಈಗಾಗಲೇ 15 ದಶಲಕ್ಷ ಕೊರೊನಾ ಪ್ರಕರಣಗಳು ಜಾಗತಿಕವಾಗಿ ದೃಢಪಟ್ಟಿದ್ದು, ಲೆಕ್ಕಕ್ಕೇ ಸಿಗದ ಕೋಟ್ಯಂತರ ಪ್ರಕರಣಗಳು ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡೆಲ್ಟಾಗಿಂತಲೂ ಒಮಿಕ್ರಾನ್ ಅಷ್ಟೇನೂ ಅಪಾಯಕಾರಿ ಅಲ್ಲವಾದರೂ ಈ ರೂಪಾಂತರಿಯ ಅಪಾಯ ಇದ್ದೇ ಇದೆ. ಕೊರೊನಾ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರ ಸ್ವರೂಪದ ರೋಗ ಲಕ್ಷಣ ಹೊಂದಿರುವುದಿಲ್ಲ, ಇನ್ನು ಸಾವಿನ ಪ್ರಮಾಣ ಕೂಡಾ ಡೆಲ್ಟಾಗೆ ಹೋಲಿಸಿದರೆ ಕಡಿಮೆ ಎಂದು ಹೇಳಬಹುದಾಗಿದೆ. ಆದರೆ, ಲಸಿಕೆ ಪಡೆಯದವರು ಸೋಂಕನ್ನು ಹರಡುವ ಸಾಧ್ಯತೆ ಇದ್ದೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Covid 19 Third Wave: '2-3 ದಿನಕ್ಕೇ ರಾಜ್ಯದಲ್ಲಿ ಕೋವಿಡ್ ದ್ವಿಗುಣ, ಇನ್ನಷ್ಟು ಕಠಿಣ ನಿರ್ಬಂಧ'
ಒಮಿಕ್ರಾನ್ ಸೌಮ್ಯ ಸೋಂಕು ಎಂದು ಕಡೆಗಣಿಸಬೇಡಿ: ಜನವರಿ ಮೊದಲ ವಾರದಲ್ಲಿ ಕೂಡ ಒಮಿಕ್ರಾನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಘೇಬ್ರೆಯೇಸಸ್ ಮಾತನಾಡಿ, ‘ಒಮಿಕ್ರಾನ್ (Omicron) ಕೋವಿಡ್ (Coronavirus) ರೂಪಾಂತರಿ ವೈರಸ್ ಜಗತ್ತಿನಾದ್ಯಂತ ಜನರನ್ನು ಕೊಲ್ಲುತ್ತಿದೆ. ಇದೊಂದು ಸೌಮ್ಯ ಸೋಂಕು ಎಂದು ಕಡೆಗಣಿಸುವಂತಿಲ್ಲ ಎಂದಿದ್ದರು.
‘ಲಸಿಕೆ ಪಡೆದವರಲ್ಲಿ, ಡೆಲ್ಟಾಗಿಂತ ಒಮಿಕ್ರೋನ್ ಸೌಮ್ಯವಾಗಿ ಕಾಣುತ್ತಿದೆ. ಆದರೆ ಹಾಗಂತ ಅದನ್ನು ಸೌಮ್ಯ ಸೋಂಕು ಎಂದು ವರ್ಗೀಕರಿಸಲಾಗದು’ ಎಂದು ಹೇಳಿದ್ದರು. ಈ ಮೂಲಕ ಲಸಿಕೆ ಪಡೆಯದವರಿಗೆ ಇದು ಅಪಾಯಕಾರಿ ಎಂಬ ಎಚ್ಚರಿಕೆಯನ್ನು ಅವರು ಪರೋಕ್ಷವಾಗಿ ನೀಡಿದ್ದರು.
‘ಒಮಿಕ್ರೋನ್ ಸೋಂಕು ಈ ಹಿಂದಿನ ರೂಪಾಂತರಿಗಳಂತೇ ವೇಗವಾಗಿ ವ್ಯಾಪಿಸುತ್ತಿದೆ. ಹಲವು ದೇಶಗಳಲ್ಲಿ 2ನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರಿ ವಿರುದ್ಧ ಸ್ಪರ್ಧಿಸುತ್ತಿದೆ. ಈ ಹಿಂದಿನ ರೂಪಾಂತರಿ ವೈರಸ್‌ಗಳಂತೆ ಇದೂ ಜನರನ್ನು ಕೊಲ್ಲುತ್ತಿದೆ. ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತಿದೆ. ಹೀಗಾಗಿ ಅದನ್ನು ಸೌಮ್ಯ ಸೋಂಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗಳಿಗೆ ದಾಖಲಾಗುವ ವ್ಯಕ್ತಿಗಳಿಗೆ ಇದು ಮಾರಕವಾಗಬಹುದು’ ಎಂದಿದ್ದರು.
Covid 19 Spike: ತಿಂಗಳಾಂತ್ಯಕ್ಕೆ ಬೆಂಗ್ಳೂರಲ್ಲಿ ಕೋವಿಡ್ ಉತ್ತುಂಗಕ್ಕೆ..!
ಹೊಟ್ಟೆಯ ಮೇಲೆ ಒಮಿಕ್ರಾನ್ ದಾಳಿ: ಒಮಿಕ್ರಾನ್ ಸೋಂಕಿನಿಂದ ಉಸಿರಾಟಕ್ಕೆ ತೊಂದರೆ ಉಂಟಾಗುವ ಜತೆಗೆ ಹೊಟ್ಟೆಯೂ ಸಮಸ್ಯೆಗೆ ತುತ್ತಾಗುತ್ತದೆ ಎನ್ನುವುದು ತಿಳಿದುಬಂದಿದೆ. ಹೊಟ್ಟೆಯಲ್ಲಿ ನೋವು(Pain), ಕಿರಿಕಿರಿ (Irritation) ಹಾಗೂ ನುಲಿದಂತೆ ಆಗುವುದು ಮತ್ತು ಹಸಿವಾಗದಿರುವ ಸಮಸ್ಯೆಯೂ ತಲೆದೋರುತ್ತದೆ.
ಹೊಟ್ಟೆಯ ಮೇಲೆ ಒಮಿಕ್ರಾನ್ ಸೋಂಕಿನ ಪ್ರಭಾವವಾದಾಗ ವಾಂತಿ ಬರಬಹುದು. ಹೊಟ್ಟೆಯಲ್ಲಿ ನುಲಿದಂತೆ ಆಗಬಹುದು, ಹೊಟ್ಟೆನೋವು ಸಹ ಕಾಣಿಸಿಕೊಳ್ಳಬಹುದು. ಹೀಗಾಗಿ, ಜ್ವರ(Fever), ನೆಗಡಿ, ತಲೆನೋವು, ತಲೆಭಾರ ಯಾವುದೂ ಇಲ್ಲದೆ ಕೇವಲ ಹೊಟ್ಟೆಯೊಂದೇ ನೋಯುತ್ತಿದ್ದರೂ ನಿರ್ಲಕ್ಷ್ಯ ಮಾಡಬಾರದು. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಈ ರೂಪಾಂತರಿ ವೈರಸ್ ಪೀಡಿತರಾಗಿರುವ ಹಲವಾರು ಜನರಲ್ಲಿ ಕೇವಲ ಹೊಟ್ಟೆ ನೋವೊಂದೇ ಕಂಡುಬಂದಿದೆ. ಅಷ್ಟೇ ಅಲ್ಲ, ಹೊಟ್ಟೆಯ ಸಮಸ್ಯೆ ತೀವ್ರವಾಗಿದೆ. ಎರಡೂ ಲಸಿಕೆಗಳನ್ನು ಪಡೆದುಕೊಂಡಿದ್ದರೂ ಈ ಲಕ್ಷಣಗಳು ಕಂಡುಬರುತ್ತವೆ ಎನ್ನುವುದು ವೈದ್ಯರ ಅಭಿಮತ. ಒಮಿಕ್ರಾನ್ ಸೋಂಕು ಬಂದಾಗ ಪದೇ ಪದೆ ಭೇದಿಯಾಗುವುದು ಸಾಮಾನ್ಯವಾಗಿದೆ.