* ಒಮಿಕ್ರೋನ್ ಪ್ರೇರಿತ ಅಲೆ ಬೇಗ ಉತ್ತುಂಗಕ್ಕೆ ತಲುಪಿ ಬಳಿಕ ಇಳಿಕೆ* ಲಭ್ಯವಿರುವ ಲಸಿಕೆ ಕೇವಲ ಸೋಂಕಿನ ತೀವ್ರತೆ ತಡೆಯುತ್ತದೆ* ಮೂಗಿನ ಮೂಲಕ ಹಾಕುವ ಲಸಿಕೆ ಸಿಕ್ಕರೆ ಕೊರೋನಾದಿಂದ ಮುಕ್ತಿ
ಬೆಂಗಳೂರು(ಜ.14): ನಗರದಲ್ಲಿ(Bengaluru) ಜನವರಿ ಕೊನೆಯ ವಾರದಲ್ಲಿ ಕೋವಿಡ್-19(Covid-19) ಪ್ರಕರಣಗಳು ಉತ್ತುಂಗಕ್ಕೆ ತಲುಪಲಿದೆ ಎಂದು ವೈರಾಣು ತಜ್ಞ ಮತ್ತು ರಾಜ್ಯದ ಕೊರೋನಾ(Coronavirus) ವೈರಾಣುವಿನ ತಳಿ ಪತ್ತೆ ವಿಭಾಗದ ನೋಡಲ್ ಅಧಿಕಾರಿ ಡಾ. ವಿ.ರವಿ(Dr V Ravi) ಹೇಳಿದ್ದಾರೆ. ‘ನ್ಯೂಬರ್ಗ್ ಡಯಾಗ್ನಾಸ್ಟಿಕ್ಸ್ ಆಯೋಜಿಸಿದ್ದ ರೂಪಾಂತರಗಳು, ಲಸಿಕೆಗಳು ಮತ್ತು ನಾವು’ ವರ್ಚುವಲ್ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೆಹಲಿಯಲ್ಲಿ(Delhi) ಈಗಾಗಲೇ ಮೂರನೇ ಅಲೆ ಉತ್ತುಂಗಕ್ಕೆ ತಲುಪಿರುವ ಮಾಹಿತಿ ಲಭಿಸುತ್ತಿದೆ. ಮುಂಬೈಯಲ್ಲಿ(Mumbai) ಮುಂದಿನ ವಾರದ ಹೊತ್ತಿಗೆ ಉತ್ತುಂಗ ತಲುಪುವ ನಿರೀಕ್ಷೆಯಿದೆ. ಹಾಗೆಯೇ ಉಳಿದ ನಗರಗಳಲ್ಲಿಯೂ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಒಮಿಕ್ರೋನ್(Omicron) ಪ್ರೇರಿತ ಅಲೆ ಬೇಗ ಉತ್ತುಂಗಕ್ಕೆ ತಲುಪಿ ಆ ಬಳಿಕ ಇಳಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
Booster Dose: 3ನೇ ಡೋಸ್ ಪಡೆಯಲು ನೀವು ಅರ್ಹರೇ?
ಸದ್ಯ ಜಗತ್ತಿನಾದ್ಯಂತ ನೀಡುತ್ತಿರುವ ಕೋವಿಡ್ ಲಸಿಕೆಯು(Vaccine) ಸೋಂಕಿತ ರೋಗಿ ಗಂಭೀರ ಸ್ಥಿತಿಗೆ ತಲುಪುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಕೊರೋನಾ ವೈರಸ್ ಬಾರದಂತೆ ತಡೆಯುವ ಯಾವುದೇ ಲಸಿಕೆ ಸದ್ಯ ಚಾಲ್ತಿಯಲ್ಲಿಲ್ಲ. ಒಂದು ವೇಳೆ ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಗಳ ಬಳಕೆಗೆ ಬಂದರೆ ಆಗ ಕೊರೋನಾ ವೈರಾಣು ದೇಹ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಾಗಬಹುದು ಎಂದು ಹೇಳಿದರು.
ಕೋವಿಡ್ ಲಸಿಕೆ ಪಡೆದರೂ ಕೂಡ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಕೊರೋನಾ ವೈರಾಣುವಿನ ಮೇಲಿನ ನಮ್ಮಲ್ಲಿನ ಪ್ರತಿಕಾಯ ಅಥವಾ ಲಸಿಕೆ ಸೃಷ್ಟಿಸುವ ಪ್ರತಿಕಾಯ ಸಮಯ ಕಳೆದಂತೆ ದುರ್ಬಲಗೊಳ್ಳುವುದರಿಂದ ಬೂಸ್ಟರ್ ಡೋಸ್(Booster Dose) ಪಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಅಪೊಲೋ ಹಾಸ್ಟಿಟಲ್‌ನ ಸಾಂಕ್ರಾಮಿಕ ರೋಗಗಳ ಸಮಾಲೋಚಕ ಡಾ. ವಿ.ರಾಮಸುಬ್ರಮಣ್ಯನ್ ಮಾತನಾಡಿ, ಒಮಿಕ್ರೋನ್ ಸೋಂಕಿತರರಲ್ಲಿ ಮೂರು ಮತ್ತು ನಾಲ್ಕನೇ ದಿನ ಸೋಂಕಿನ ತೀವ್ರ ಲಕ್ಷಣಗಳು ಕಾಣಿಸುತ್ತವೆ. ಗಂಟಲು ನೋವು ಮೂರನೇ ಅಲೆಯಲ್ಲಿ ಹೆಚ್ಚು ಕಂಡುಬರುತ್ತಿದೆ. ಐದನೇ ದಿನದ ಬಳಿಕ ರೋಗಿಗಳಲ್ಲಿ ಚೇತರಿಕೆ ಕಾಣುತ್ತಿದ್ದೇವೆ. ಆದರೂ ಸೋಂಕು ಮತ್ತು ಸೋಂಕಿನ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ತಾಳಬಾರದು ಎಂದು ಹೇಳಿದರು.
ಸಿಎಂಸಿ ವೆಲ್ಲೂರು ಕ್ಲಿನಕಲ್ ವೈರಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ. ಟಿ.ಜೇಕಬ್ ಜಾನ್ ಮಾತನಾಡಿ, ಮಕ್ಕಳಲ್ಲಿ ಮೊದಲು ಡೆಲ್ಟಾಕ್ಕಿಂತ(Delta) ಒಮಿಕ್ರೋನ್‌ನಿಂದ ಕೋವಿಡ್ ಬಂದರೆ ಒಳ್ಳೆಯದು. ಯಾಕೆಂದರೆ ಒಮಿಕ್ರೋನ್‌ನಿಂದ ಸೃಷ್ಟಿಯಾಗುವ ಪ್ರತಿಕಾಯದಿಂದ ಡೆಲ್ಟಾತಳಿ ತಂದೊಡ್ಡುವ ಅಪಾಯದಿಂದ ಪಾರಾಗಬಹುದು ಎಂದು ತಿಳಿಸಿದರು.
ಸೋಂಕು ಪತ್ತೆಯಾದರೆ ಕಾಲೇಜು, ಹಾಸ್ಟೆಲ್, ಪಿಜಿ ಮುಚ್ಚಿ
ಪಾಲಿಕೆ(BBMP) ವ್ಯಾಪ್ತಿಯಲ್ಲಿರುವ ನರ್ಸಿಂಗ್ ಕಾಲೇಜ್‌ಗಳು ಸೇರಿದಂತೆ ಇನ್ನಿತರ ಕಾಲೇಜ್‌ಗಳ ವಿದ್ಯಾರ್ಥಿ ನಿಲಯಗಳು ಹಾಗೂ ಪಿಜಿಗಳಲ್ಲಿ ಕೋವಿಡ್-19 ಪ್ರಕಣಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Covid 19 Third Wave: ಬೆಂಗ್ಳೂರಲ್ಲಿ 233 ದಿನ ಬಳಿಕ 15,000+ ಕೇಸ್: ಬೆಚ್ಚಿಬಿದ್ದ ಜನತೆ..!
ಗುರುವಾರ ಈ ಕುರಿತು ಎಲ್ಲ ವಲಯಗಳ ಆಯುಕ್ತರಿಗೆ ಆದೇಶಿಸಿರುವ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನರ್ಸಿಂಗ್ ಸೇರಿದಂತೆ ಎಲ್ಲ ಮಾದರಿಯ ಕಾಲೇಜುಗಳ ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಇರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾದರೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮತ್ತು ಎರಡು ಡೋಸ್ ಲಸಿಕೆ ತೆಗೆದುಕೊಂಡಿರುವ ಬಗ್ಗೆ ಆಯಾ ಕಾಲೇಜುಗಳ ಆಡಳಿತ ಮಂಡಳಿಯಿಂದ ನಿರಂತರವಾಗಿ ವರದಿ ಪಡೆದು ನಿಗಾವಹಿಸಬೇಕು ಎಂದು ತಿಳಿಸಿದ್ದಾರೆ.
ಕಾಲೇಜ್(College), ಹಾಸ್ಟೆಲ್(Hostel) ಹಾಗೂ ಪಿಜಿಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾದಲ್ಲಿ, ಅಂತಹ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ನರ್ಸಿಂಗ್ ಕಾಲೇಜು ಸೇರಿದಂತೆ ಇತರೆ ಕಾಲೇಜುಗಳಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದಲ್ಲಿ ಅವುಗಳನ್ನು ಮುಚ್ಚುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
