ಆಪರೇಷನ್ ಸಿಂದೂರ್‌ನಲ್ಲಿ ಇಸ್ರೇಲಿ ಶಸ್ತ್ರಾಸ್ತ್ರಗಳಾದ ಬರಾಕ್-8 ಕ್ಷಿಪಣಿ ಮತ್ತು ಹಾರ್ಪಿ ಡ್ರೋನ್‌ಗಳ ಯಶಸ್ವಿ ಬಳಕೆ ಬಗ್ಗೆ ಇಸ್ರೇಲ್ ಪ್ರಧಾನಿ ಬಹಿರಂಗಪಡಿಸಿದ್ದಾರೆ. ಈ ತಂತ್ರಜ್ಞಾನಗಳು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಜೆರುಸಲೆಂ(ಆ.8): ಭಾರತದ ಆಪರೇಷನ್ ಸಿಂದೂರ್‌ನಲ್ಲಿ ಇಸ್ರೇಲಿ ಶಸ್ತ್ರಾಸ್ತ್ರಗಳಾದ ಬರಾಕ್-8 ಕ್ಷಿಪಣಿ ವ್ಯವಸ್ಥೆ ಮತ್ತು ಹಾರ್ಪಿ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಹಿರಂಗಪಡಿಸಿದ್ದಾರೆ. 'ನಮ್ಮ ಶಸ್ತ್ರಾಸ್ತ್ರಗಳು ಆಪರೇಷನ್ ಸಿಂದೂರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿವೆ' ಎಂದು ಹೇಳಿದ್ದಾರೆ,

ಮೇ 7, 2025 ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ವಿಧ್ವಂಸಕ ದಾಳಿ ನಡೆಸಿತು. ಈ ದಾಳಿಯಲ್ಲಿ ಬರಾಕ್-8 ಕ್ಷಿಪಣಿಗಳು ಪಾಕಿಸ್ತಾನಿ ಕ್ಷಿಪಣಿಗಳನ್ನು ಪ್ರತಿಬಂಧಿಸಿದರೆ, ಹಾರ್ಪಿ ಡ್ರೋನ್‌ಗಳು ಶತ್ರು ರಾಡಾರ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ ಭಾರತೀಯ ವಾಯುಪಡೆಗೆ ದಾರಿ ಮಾಡಿಕೊಟ್ಟವು.

ಡಿಆರ್‌ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬರಾಕ್-8, 360-ಡಿಗ್ರಿ ವ್ಯಾಪ್ತಿ, ಬಹು-ಗುರಿ ಯಶಸ್ವಿಯಾಗಿ ತಲುಪುವ ಮತ್ತು 100 ಕಿ.ಮೀ. ದಾಳಿ ವ್ಯಾಪ್ತಿಯೊಂದಿಗೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಹಾರ್ಪಿ ಡ್ರೋನ್‌ಗಳು ರಾಡಾರ್-ಸೀಕಿಂಗ್ ತಂತ್ರಜ್ಞಾನದೊಂದಿಗೆ ಶತ್ರು ವಾಯು ರಕ್ಷಣೆಯನ್ನು ನಾಶಪಡಿಸುವಲ್ಲಿ ಪರಿಣಾಮಕಾರಿಯಾಗಿವೆ.

ಇಸ್ರೇಲ್‌ನ ಈ ಹೇಳಿಕೆ ಭಾರತ-ಇಸ್ರೇಲ್ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿದೆ, ಜಂಟಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಭಾರತದ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮಹತ್ವದ ಕೊಡುಗೆಯಾಗಿದೆ.