Economic Crisis ಚೀನಾ ಸಂಗ ಬೆಳೆಸಿದ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು, ಶ್ರೀಲಂಕಾ ಬಳಿಕ ಇದೀಗ ನೇಪಾಳ!
- ತೀವ್ರ ಹದಗೆಟ್ಟಿದೆ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ
- ಇದೀಗ ನೇಪಾಳದಲ್ಲೂ ಶುರುವಾಗಿದೆ ಆರ್ಥಿಕ ಬಿಕ್ಕಟ್ಟು
- ಚೀನಾದಿಂದ ಸಾಲ ಪಡೆದ, ವ್ಯವಹಾರ ಕುದುರಿಸಿದ ದೇಶಗಳಿಗೆ ಸಮಸ್ಯೆ
ನವದೆಹಲಿ(ಏ.12): ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದ ತುತ್ತು ಅನ್ನಕ್ಕೂ ಹಾಹಾಕಾರ ಎದ್ದಿದೆ. ಒಂದು ಲೀಟರ್ ಹಾಲಿನ ಬೆಲೆ 300 ರೂಪಾಯಿ ಆಗಿದೆ. ಇರುವ ಚಿನ್ನ ಮಾರಿ ಒಂದು ಹೊತ್ತಿನ ಊಟ ಮಾಡುವ ಪರಿಸ್ಥಿತಿ ಹಲವರದ್ದು. ಇದೀಗ ಲಂಕಾದ ಬೆನ್ನಲ್ಲೇ ನೇಪಾಳದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಅನ್ನೋ ವರದಿ ಆತಂಕ ತರುತ್ತಿದೆ. ಆಹಾರ ಉತ್ಪನ್ನಗಳ ಕೊರತೆ, ಔಷಧಿ ಸೇರಿದಂತೆ ವೈದ್ಯಕೀಯ ಕೊರತೆ, ತೈಲ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಇದೀಗ ನೇಪಾಳದಲ್ಲಿ ತಲೆದೋರಿದೆ.
ಶ್ರೀಲಂಕಾದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಇದ್ದ ಪರಿಸ್ಥಿತಿ ಇದೀಗ ನೇಪಾಳದಲ್ಲಿ ತಲೆದೋರಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ನೇಪಾಳದ ವಿರೋಧ ಪಕ್ಷ CPN-UM ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಶ್ರೀಲಂಕಾಗಿಂತಲೂ ಕೆಟ್ಟ ಪರಿಸ್ಥಿತಿಯನ್ನು ನೇಪಾಳ ಎದುರಿಸಲಿದೆ ಎಂದು ನೇಪಾಳ ವಿರೋಧ ಪಕ್ಷ ಹೇಳಿದೆ.
ನೇಪಾಳಿಯರ ರಕ್ಷಿಸಿದ್ದಕ್ಕೆ ಪ್ರಧಾನಿ ಮೋದಿಗೆ ದೇವುಬಾ ಧನ್ಯವಾದ!
ನೇಪಾಳದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಎರಡು ತಿಂಗಳ ಹಿಂದೆ ವಿಪಕ್ಷಗಳು ಗದ್ದಲ ಎಬ್ಬಿಸಿತ್ತು. ಇದಕ್ಕೆ ಈ ಹಿಂದಿನ ಸರ್ಕಾರ ಮಾಡಿದ ಎಡವಟ್ಟು ನಿರ್ಧಾರಗಳು ಹಾಗೂ ಚೀನಾ ಜೊತೆಗಿನ ಸಾಲ ವ್ಯವಹಾರ ಕಾರಣ ಎಂದು ಆರೋಪಿಸಿತ್ತು. ಆರೋಪ ಪ್ರತ್ಯಾರೋಪದ ಬಳಿಕ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಶಾಂತವಾಗಿತ್ತು. ಇದೀಗ ನೇಪಾಳದಲ್ಲಿ ಆಹಾರ ಕೊರತೆ, ತೈಲ ಕೊರತೆ ಕಾಣುತ್ತಿದೆ. ಆಮದು ಮಾಡಿಕೊಳ್ಳಲು ಆರ್ಥಿಕ ಸಂಪನ್ಮೂಲ ಕೊರತೆ ಕಾಡುತ್ತಿದೆ.
ವಿಪಕ್ಷಗಳ ಆರೋಪ, ಮಾಧ್ಯಮಗಳ ವರದಿ ಬೆನ್ನಲ್ಲೇ ಶ್ರೀಲಂಕಾ ಹಣಕಾಸು ಸಚಿವ ಜನಾರ್ಧನ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ನೇಪಾಳ ಆರ್ಥಿಕತೆ ಲಂಕಾ ರೀತಿ ಇಲ್ಲ. ನಮ್ಮ ಆರ್ಥಿಕತೆ ಉತ್ತಮವಾಗಿದೆ. ನೇಪಾಳದ ಉತ್ಪಾನೆ ಹಾಗೂ ಆದಾಯ ಸಮತೋಲನದಲ್ಲಿದೆ. ನೇಪಾಳ ಅತೀಯಾಗಿ ಸಾಲ ಪಡೆದುಕೊಂಡಿಲ್ಲ. ವಿದೇಶಿ ವಿನಿಮಿಯ ಕೂಡ ಸಮತೋಲನದಲ್ಲಿದೆ. ಯಾವುದೇ ಸಮಸ್ಯೆಗಳು ಇಲ್ಲ. ಕೊಂಚ ಏರಿಳಿತಗಳು ಸರ್ವೆ ಸಾಮಾನ್ಯ ಎಂದು ಜನಾರ್ಧನ ಶರ್ಮಾ ಹೇಳಿದ್ದಾರೆ.
ಲಂಕೆಯ ಬೆಂಕಿಗೂ, ಪಾಕ್ ಪತನದ ಹಿಂದೆಯೂ ಚೀನೀ ಹಣದ ಕೈವಾಡ!
ಆದರೆ ಹಣಕಾಸು ಸಚಿವರ ಮಾತುಗಳಿಗೆ ನೇಪಾಳದ ಕಮ್ಯೂನಿಸ್ಟ್ ಪಾರ್ಟಿ ತಿರುಗೇಟು ನೀಡಿದೆ. ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಗೆ ನೇಪಾಳ ಆರ್ಥಿಕತೆ ಸಾಗುತ್ತಿದೆ. ಅಸಮರ್ಪಕ ಆಡಳಿತದಿಂದ ಹೀಗಾಗಿದೆ ಎಂದು ಆರೋಪಿಸಿದೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು
ಈಗಾಗಲೇ ತೀವ್ರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಶ್ರೀಲಂಕಾ ಮತ್ತೊಂದು ಭಾರೀ ಬಿಕ್ಕಟ್ಟಿನ ಕೂಪಕ್ಕೆ ನೂಕಲ್ಪಡುವ ಅಪಾಯ ಎದುರಿಸುತ್ತಿದೆ. ಭಾರತ ನೀಡಿದ್ದ 500 ದಶಲಕ್ಷ ಡಾಲರ್ ಸಾಲದ ಹಣ ಖಾಲಿ ಆಗುತ್ತಿದ್ದು, ಏಪ್ರಿಲ್ ಅಂತ್ಯಕ್ಕೆ ದೇಶದಲ್ಲಿನ ಡೀಸೆಲ್ ದಾಸ್ತಾನು ಖಾಲಿ ಆಗುವ ಭೀತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೂ ಹಣವಿಲ್ಲದಂತಾಗಿದ್ದು, ಶೀಘ್ರದಲ್ಲೇ ತುರ್ತು ಚಿಕಿತ್ಸೆ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಈ ನಡುವೆ ಶ್ರೀಲಂಕಾ ವೈದ್ಯಕೀಯ ಮಂಡಳಿಯು ಅಧ್ಯಕ್ಷ ರಾಜಪಕ್ಸೆಗೆ ಪತ್ರ ಬರದಿದ್ದು, ಔಷಧ ಮತ್ತು ಚಿಕಿತ್ಸಾ ಸಲಕರಣೆ ತರಿಸಿಕೊಳ್ಳಲು ಕೂಡ ಹಣವಿಲ್ಲ. ಹೀಗಾಗಿ ಶೀಘ್ರದಲ್ಲೇ ತುರ್ತು ಚಿಕಿತ್ಸಾ ಸೌಲಭ್ಯ ನಿಲ್ಲುವ ಆತಂಕವಿದೆ. ಈಗಾಗಲೇ ಕೆಲವು ತುರ್ತು ಅಗತ್ಯವಲ್ಲದ ವೈದ್ಯಕೀಯ ಸೇವೆಗಳನ್ನು ನಿಲ್ಲಸಲಾಗಿದೆ ಎಂದಿದೆ.ಔಷಧ ಹಾಗೂ ಸಲಕರಣೆಗಳು ಪೂರೈಕೆ ಆಗದೇ ಹೋದರೆ ಮುಂಬರುವ ವಾರಗಳಲ್ಲಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗದು. ಆಗ ಭಾರೀ ಪ್ರಮಾಣದ ಸಾವು ನೋವು ಸಂಭವಿಸುವ ಭೀತಿಯಿದೆ ಎಂದು ಪತ್ರದಲ್ಲಿ ಎಚ್ಚರಿಸಿದೆ.