ಜೆಕ್ ಗಣರಾಜ್ಯದಲ್ಲಿ ಪರ್ವತಾರೋಹಣ ಮಾಡುತ್ತಿದ್ದ ಇಬ್ಬರಿಗೆ ₹2.8 ಕೋಟಿ ಮೌಲ್ಯದ 200 ವರ್ಷ ಹಳೆಯ ಚಿನ್ನದ ಖಜಾನೆ ದೊರೆತಿದೆ. 600 ಚಿನ್ನದ ನಾಣ್ಯಗಳು, ಆಭರಣಗಳು, ತಂಬಾಕು ಡಬ್ಬಿಗಳು ಸೇರಿ 7 ಕಿಲೋ ತೂಕದ ನಿಧಿ ಪತ್ತೆಯಾಗಿದೆ. ನಾಜಿಗಳು ಮರೆಮಾಚಿದ್ದಿರಬಹುದೆಂಬ ಶಂಕೆಯಿದೆ. ಪರ್ವತಾರೋಹಿಗಳಿಗೆ ನಿಧಿಯ ಶೇ.10ರಷ್ಟು ಬಹುಮಾನ ಸಿಗಲಿದೆ.

ಸಾಮಾನ್ಯವಾಗಿ ಇತ್ತೀಚಿನ ಯುವಜನರ ಪೈಕಿ ಪರ್ವತಾರೋಹಣ ಮತ್ತು ಟ್ರೆಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಂದು ವಾರ ಅಥವಾ ತಿಂಗಳು ಪೂರ್ತಿ ಕಚೇರಿಯಲ್ಲಿ ಕೆಲಸ ಮಾಡುವ ಯುವಜನರು ಬಿಡುವು ಪಡೆದು ನಿಸರ್ಗದ ಸೌಂದರ್ಯವನ್ನು ಸವಿಯಲು ದೇಹ ದಂಡಿಸಿ ಟ್ರೆಕ್ಕಿಂಗ್ ಮಾಡುತ್ತಾರೆ. ಇದೇ ರೀತಿ ಪರ್ವತಾರೋಹಣ ಮಾಡುತ್ತಿದ್ದವರಿಗೆ ಚಿನ್ನದ ಖಜಾನೆಯೊಂದು ಸಿಕ್ಕಿದೆ. ಈ ನಿಧಿಪೆಟ್ಟಿಯನ್ನು ತೆಗೆದು ನೋಡಿದಾಗ 200 ವರ್ಷಗಳ ಹಿಂದಿನ ಚಿನ್ನದ ನಾಣ್ಯಗಳು, ಚಿನ್ನಾಭರಣಗಳಾದ ಬಳೆ, ಸರ, ಓಲೆ, ಚಿನ್ನದ ಪರ್ಸ್‌ಗಳು ಲಭ್ಯವಾಗಿದೆ. ಇದರ ಮೌಲ್ಯ ಬರೋಬ್ಬರಿ 2.8 ಕೋಟಿ ರೂ. ಆಗಿದೆ ಎಂದು ಅಂದಾಜಿಲಾಗಿದೆ.

ಈ ಘಟನೆ ಜೆಕ್ ಗಣರಾಜ್ಯದಲ್ಲಿ ನಡೆದಿದೆ. ನ್ಯೂಯಾರ್ಕ್‌ ಪೋಸ್ಟ್ ವರದಿಯ ಪ್ರಕಾರ, ಜೆಕ್ ಗಣರಾಜ್ಯದಲ್ಲಿ ಪರ್ವತಾರೋಹಣಕ್ಕೆ ಹೋಗಿದ್ದ ಇಬ್ಬರು ವ್ಯಕ್ತಿಗಳಿಗೆ ಅದೃಷ್ಟದ ಅಚ್ಚರಿ ಕಾದಿತ್ತು. ಅವರಿಗೆ ದಾರಿಯಲ್ಲಿ 2.8 ಕೋಟಿ ರೂ. (USD 340,000) ಗಿಂತ ಹೆಚ್ಚು ಮೌಲ್ಯದ ನಿಧಿ ಸಿಕ್ಕಿದೆ. ಇದನ್ನು ತೆಗೆದುಕೊಂಡು ಬಂದು ನಿಧಿಯ ವಸ್ತುಗಳು ಸಿಕ್ಕಿರುವ ಬಗ್ಗೆ ಸ್ಥಳೀಯ ಆಡಳಿತಕ್ಕೆ ತಿಳಿಸಿದ್ದಾರೆ. ಖಜಾನೆಯಲ್ಲಿ ಸಿಕ್ಕಿದ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೂರ್ವ ಬೊಹೆಮಿಯಾ ವಸ್ತು ಸಂಗ್ರಹಾಲಯವು, ಪೆಟ್ಟಿಗೆಯಲ್ಲಿದ್ದ ಸುಮಾರು 600 ಚಿನ್ನದ ನಾಣ್ಯಗಳು, ಆಭರಣಗಳು ಹಾಗೂ ಚಿನ್ನ ಮತ್ತು ಬೆಳ್ಳಿ ಮಿಶ್ರಿತ ಲೋಹದಿಂದ ಮಾಡಲಾದ ತಂಬಾಕು ಡಬ್ಬಿಗಳು ಸೇರಿವೆ. ಈ ಎಲ್ಲ ವಸ್ತುಗಳ ತೂಕ ತೂಕ ಸುಮಾರು 7 ಕಿಲೋಗ್ರಾಂ ಎಂದು ವಸ್ತು ಸಂಗ್ರಹಾಲಯ ತಿಳಿಸಿದೆ.

ಯುರೋಪಿಯನ್ ದೇಶದ ಪೊಡ್ಕರ್ಕೊನೊಸಿ ಪರ್ವತಗಳಲ್ಲಿರುವ ಕಾಡಿನ ಹೊರ ಅಂಚಿನಲ್ಲಿ ಪರ್ವತಾರೋಹಿಗಳು ನಡೆದುಕೊಂಡು ಹೋಗುತ್ತಿದ್ದಾಗ ಈ ನಿಧಿ ಸಿಕ್ಕಿದೆ. ಚಿನ್ನದ ನಾಣ್ಯಗಳು ಬಹುಶಃ ನೂರು ವರ್ಷಗಳಿಗೂ ಹೆಚ್ಚು ಕಾಲ ಅಡಗಿಸಿ ಇಟ್ಟಿರುವಂತೆ ಕಾಣುತ್ತದೆ. ಅಂದರೆ, ಬಹುಶಃ 1921ರ ನಂತರ ಹೂಳಲಾಗಿದೆ ಎಂದು ತಜ್ಞರು ಹೇಳುತ್ತಾರೆ. ಈ ಪೆಟ್ಟಿಗೆಯಲ್ಲಿ ಫ್ರಾನ್ಸ್, ಬೆಲ್ಜಿಯಂ, ಒಟ್ಟೋಮನ್ ಸಾಮ್ರಾಜ್ಯ ಮತ್ತು ಹಿಂದಿನ ಆಸ್ಟ್ರಿಯಾ-ಹಂಗೇರಿಯ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಬಳಸುತ್ತಿದ್ದ ನಾಣ್ಯಗಳು ಸೇರಿವೆ ಎಂದು ತಿಳಿದುಬಂದಿದೆ. ಪರ್ವತಾರೋಹಿಗಳ ಪೈಕಿ ಒಬ್ಬರು ನಿಧಿ ಪೆಟ್ಟಿಗೆಯನ್ನು ತೆರೆದಾಗ ಮುಖಕ್ಕೆ ಗಾಯವಾದ ಬಗ್ಗೆಯೂ ಹೇಳಿಕೊಂಡಿದ್ದಾರೆ' ಎಂದು ತಿಳಿಸಿದರು.

3 ತಿಂಗಳ ಹಿಂದೆ ಸಿಕ್ಕಿರುವ ನಿಧಿ ಕಳೆದ ವಾರ ಬಹಿರಂಗ:
ಫೆಬ್ರವರಿಯಲ್ಲಿ ಆವಿಷ್ಕಾರ ಮಾಡಲಾಗಿದ್ದರೂ, ವಸ್ತುಸಂಗ್ರಹಾಲಯವು ಕಳೆದ ವಾರವಷ್ಟೇ ಸಾರ್ವಜನಿಕರಿಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಪುರಾತತ್ವ ತಜ್ಞರು ಪ್ರಸ್ತುತ ಪರ್ವತದ ಬದಿಯಲ್ಲಿ ನಿಧಿಯನ್ನು ಯಾರು ಹೂತು ಹಾಕಿರಬಹುದು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. 'ಖಜಾನೆಗಳ ರೂಪದಲ್ಲಿ ನೆಲದಲ್ಲಿ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಲು ನಿಧಿ ಉಗ್ರಾಣಗಳು, ಟಂಕಸಾಲೆಗಳು ಇರುತ್ತವೆ. ಆದರೆ, ಇಲ್ಲಿಗೆ ಹೇಗೆ ಬಂದಿದೆ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ವಸ್ತುಸಂಗ್ರಹಾಲಯ ಅಧಿಕಾರಿ ಹೇಳಿದರು.

ಈ ನಿಧಿಯು ಎರಡನೇ ಮಹಾಯುದ್ಧದ ಕೊನೆಯಲ್ಲಿ ರಷ್ಯಾದ ಪಡೆಗಳನ್ನು ಹೊರಹಾಕಿದಾಗ ನಾಜಿಗಳು ಈ ನಿಧಿಯನ್ನು ಇಲ್ಲಿ ಹೂತುಹಾಕಿ ಬಚ್ಚಿಟ್ಟಿರಬಹುದು. ಅಂದರೆ, 'ಇದು 1938ರ ನಾಜಿ ಆಕ್ರಮಣದ ನಂತರ ಆಕ್ರಮಿತ ಪ್ರದೇಶವನ್ನು ತೊರೆಯಬೇಕಾದ ಜೆಕ್‌ನ ಚಿನ್ನವನ್ನು ಇಲ್ಲಿ ಇಟ್ಟಿರಬಹುದು ಎಂಬ ಅನುಮಾನವಿದೆ. ಅಥವಾ 1945ರ 2ನೇ ಜಾಗತಿಕ ಮಹಾಯುದ್ಧದ ನಂತರ ಸೈನಿಕರು ಲೂಟಿ ಮಾಡಿದ ಸಂಪತ್ತನ್ನು ಸ್ಥಳಾಂತರ ಮಾಡುವುದಕ್ಕೆ ಹೆದರಿಕೊಂಡು ಜರ್ಮನ್ನರು ಚಿನ್ನವನ್ನು ಇಲ್ಲಿ ಬಚ್ಚಿಟ್ಟಿದ್ದಾರೆಯೇ ಎಂಬ ಅನುಮಾನವೂ ಬರುತ್ತಿದೆ. ಆದರೆ, ಈ ಚಿನ್ನವನ್ನು ಇಲ್ಲಿ ಯಾರಿಟ್ಟಿದ್ದಾರೆ ಎಂಬುದನ್ನು ಹೇಳುವುದು ಕಷ್ಟ' ಎಂದು ವಸ್ತುಸಂಗ್ರಹಾಲಯ ನಿರ್ದೇಶಕ ಪೆಟ್ರ್ ಗ್ರುಲಿಚ್ ಹೇಳಿದರು.

ಇನ್ನು ಕೆಲವರು 'ಇದು ಪ್ರಾಚೀನ ವಸ್ತುಗಳ ಅಂಗಡಿಯಿಂದ ಕದ್ದ ವಸ್ತುಗಳಾಗಿರಬಹುದು ಎಂದು ಹೇಳುತ್ತಾರೆ. ಆದರೆ, ನಾವು ಈ ಜನರು ಹೇಳಿರುವ ಈ ಹೇಳಕೆಯನ್ನು ಒಂದು ಆಯ್ಕೆಯಾಗಿ ಪರಿಗಣಿಸುವುದಿಲ್ಲ. ಕಾರಣ ಈ ಹಿಂದೆ ಇಂತಹ ನಿಧಿಯ ವಸ್ತುಗಳು ಲಭ್ಯವಾದ ಮಾಹಿತಿ ಸಿಕ್ಕಿಲ್ಲವೆಂದು' ಪುರಾತತ್ವ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಜೆಕ್ ಗಣರಾಜ್ಯದ ಕಾನೂನಿನ ಪ್ರಕಾರ, ಚಿನ್ನದ ನಿಧಿ ಸಿಕ್ಕಿದ ಇಬ್ಬರು ಅದೃಷ್ಟಶಾಲಿ ಪರ್ವತಾರೋಹಿಗಳಿಗೆ ಖಜಾನೆಯಲ್ಲಿರುವ ನಿಧಿಯ ಮೌಲ್ಯದಲ್ಲಿ ಶೇ.10ರಷ್ಟು ಮೌಲ್ಯದ ಹಣವನ್ನ ಪಡೆದುಕೊಳ್ಳುತ್ತಾರೆ.