ದುಬೈ(ಜೂ.10): ಕಳೆದೊಂದು ತಿಂಗಳ ಹಿಂದಷ್ಟೇ ತನ್ನ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳಿಸಿದ್ದ 28 ವರ್ಷದ ಇಂಜಿನಿಯರ್ ದುಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ಕೇರಳ ಮೂಲದ ನಿತಿನ್ ಚಂದ್ರನ್ ದುಬೈನಲ್ಲಿ ಹೃದಯಾಘಾತಕ್ಕೆ ಒಳಗಾದ ದುರ್ದೈವಿ. ನಿತಿನ್ ಅಧಿಕ ರಕ್ತದೊತ್ತಡ(High BP)ದಿಂದ ಬಳಲುತ್ತಿದ್ದರು. ನಿದ್ರೆ ಮಾಡುತ್ತಿರುವಾಗಲೇ ಅವರು ಕೊನೆಯುಸಿರೆಳೆದಿರುವುದಾಗಿ ಆತನ ಸ್ನೇಹಿತರು ಗಲ್ಪ್ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ನಿತಿನ್ ಅವರ 27 ವರ್ಷದ ಪತ್ನಿ ಅಥೀರಾ ಗೀತಾ ಶ್ರೀಧರನ್ ಕೂಡಾ ಕೇರಳದ ಮೂಲದವರಾಗಿದ್ದು, ಮೇ 07ರಂದು ವಂದೇ ಭಾರತ್ ಮಿಷನ್ ಮೂಲಕ ದುಬೈನಿಂದ ವಿಮಾನದಲ್ಲಿ ಕೇರಳಕ್ಕೆ ಬಂದಿಳಿದಿದ್ದರು. ಆದರೆ ನಿತಿನ್ ಚಂದ್ರನ್ ದುಬೈನಲ್ಲೇ ಉಳಿದುಕೊಳ್ಳಲು ತೀರ್ಮಾನಿಸಿದ್ದರು. 

ನಿತಿನ್ ನಿಧನದ ಸುದ್ದಿ ಕೇಳಿ ನಿಜಕ್ಕೂ ಆಘಾತವಾಗಿದೆ. ವಂದೇ ಭಾರತ್ ಮಿಷನ್ ಮೂಲಕ ಭಾರತಕ್ಕೆ ಬಂದಿಳಿದ ಮೊದಲಿಗರಲ್ಲಿ ನಿತಿನ್ ಪತ್ನಿ ಅಥೀರಾ ಗೀತಾ ಶ್ರೀಧರನ್ ಕೂಡಾ ಒಬ್ಬರು ಎಂದು ದುಬೈನಲ್ಲಿರುವ ಭಾರತದ ಕನ್ಸೂಲ್ ಜನರಲ್ ವಿಫುಲ್ ಹೇಳಿದ್ದಾರೆ. ವಿಫುಲ್ ಆದ್ಯತೆಯ ಮೇರೆಗೆ ಅಥೀರಾ ಗೀತಾ ಶ್ರೀಧರನ್ ಅವರನ್ನು ಭಾರತಕ್ಕೆ ಕಳಿಸಿಕೊಟ್ಟಿದ್ದರು.

ಅಮೆರಿಕಕ್ಕೆ ನ್ಯೂಯಾರ್ಕ್, ಚೀನಾಗೆ ವುಹಾನ್, ಭಾರತಕ್ಕೆ ಮುಂಬೈ ಮಾರಿ..!

ನಿತಿನ್ ಮಲೆಯಾಳಿ ಸಮುದಾಯದವರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದರು. ಅದರಲ್ಲೂ ರಕ್ತದಾನ ಹಾಗೆಯೇ ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದರು. ಇದು ಸಮುದಾಯಕ್ಕಾದ ದೊಡ್ಡ ನಷ್ಟ, ಅವರ ಕುಟುಂಬಕ್ಕೆ ದುಃಖ ಮರೆಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಫುಲ್ ಹೇಳಿದ್ದಾರೆ. ಮೃತದೇಹವನ್ನು ಇಂಟರ್‌ನ್ಯಾಷನಲ್ ಸಿಟಿಯಲ್ಲಿರುವ ಅಪಾರ್ಟ್ಮೆಂಟ್‌ನಿಂದ ರಶೀದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಕೋವಿಡ್ ಸ್ಯಾಂಪಲ್ ಪಡೆದು, ಶವಾಗಾರಕ್ಕೆ ನೀಡಲಾಗುತ್ತದೆ ಎಂದು ವರದಿಯಾಗಿದೆ.