ಇರಾನ್‌ನ ಪರಮೋಚ್ಚ ನಾಯಕನ ಪುತ್ರ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹಬ್ಬಿದ್ದ ವದಂತಿಗಳನ್ನು ತಳ್ಳಿಹಾಕಲು ಇರಾನ್ ಸರ್ಕಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಫೆ.28ರ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಬಿಡುಗಡೆಯಾದ ವಿಡಿಯೋದಲ್ಲಿ ಅವರು ಆರೋಗ್ಯದಿಂದಿರುವಂತೆ ಕಾಣಿಸಿಕೊಂಡಿದ್ದಾರೆ.
ಟೆಹ್ರಾನ್: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಉತ್ತರಾಧಿಕಾರಿ ಆಗಿರುವ ಪುತ್ರ ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ಸಾಕಷ್ಟು ಪುಕಾರುಗಳು ಹರಿದಾಡುತ್ತಿರುವಾಗ, ಇರಾನ್ ಸರ್ಕಾರ ಅವರ ವಿಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕುವ ಪ್ರಯತ್ನ ಮಾಡಿದೆ.
ಫೆ.28ರ ದಾಳಿಯಲ್ಲಿ ತಂದೆ ಆಯತೊಲ್ಲಾ ಖಮೇನಿ ಸಾವಿಗೀಡಾದಾಗ, ಮೊಜ್ತಬಾ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ, ತಂದೆಯ ಅಂತ್ಯಕ್ರಿಯೆಯಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಮೊನ್ನೆಯಷ್ಟೇ ಅವರು ಕೊನೆಯ ದಿನ ಎಣಿಸುತ್ತಿದ್ದಾರೆ ಎಂದು ವರದಿಗಳು ಹೇಳಿದ್ದವು.
ಇದರ ನಡುವೆ 12 ಸೆಕೆಂಡಿನ ವಿಡಿಯೋ ಬಿಡುಗಡೆ ಆಗಿದ್ದು, ಮೊಜ್ತಬಾ ಕೋಣೆಯೊಂದರಲ್ಲಿ ಕಾರ್ಪೆಟ್ ಮೇಲೆ ತಮ್ಮ ಮುಂದೆ ಕೂತಿರುವವರ ಜತೆಗೆ ಮಾತನಾಡುತ್ತಿದ್ದಾರೆ. ಈ ವಿಡಿಯೋವನ್ನು ಎಲ್ಲಿ, ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಆದರೆ, ಆರೋಗ್ಯದಿಂದಿರುವಂತೆ ಕಾಣುತ್ತಿರುವ ಮೊಜ್ತಬಾ ಅವರು ಹಿಂಬಾಲಕರಿಗೆ ಧಾರ್ಮಿಕ ವಿಜ್ಞಾನವನ್ನು ಕಲಿಸುತ್ತಿರುವ ವಿಡಿಯೋ ಇದಾಗಿದೆ ಎಂದು ಇರಾನ್ ಹೇಳಿಕೊಂಡಿದೆ.
ಟ್ರಂಪ್‌ರ ಗಾಜಾ ಶಾಂತಿ ಯೋಜನೆಗೆ ನೆತನ್ಯಾಹು ನಕಾರ, ಹಮಾಸ್ ನಿಶ್ಶಸ್ತ್ರೀಕರಣದ ವರೆಗೆ ದಾಳಿ
ಇಸ್ರೇಲ್ ದಾಳಿಯಿಂದ ನಲುಗಿರುವ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತಾಪಿಸಿರುವ 15 ಅಂಶಗಳ ಪೀಸ್ ಪ್ಲ್ಯಾನ್ ಅನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಿರಸ್ಕರಿಸಿದ್ದಾರೆ.
ಅಮೆರಿಕದ ಪ್ರಸ್ತಾವನೆಯನ್ನು ಒಪ್ಪಿಕೊಂಡು ಪ್ಯಾಲೆಸ್ಟೀನಿಯನ್ ಆಡಳಿತ ಸಮಿತಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಾಗಿ ಹೇಳಿರುವ ಹಮಾಸ್, ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿತ್ತು. ಇದರ ಬೆನ್ನಲ್ಲೆ, ‘ಹಮಾಸ್ ನಿಶ್ಶಸ್ತ್ರೀಕರಣ ಪೂರ್ಣವಾಗುವ ವರೆಗೆ ದಾಳಿ ನಿಲ್ಲದು. ನಮ್ಮ ದೇಶ ಹಾಗೂ ನಾಗರಿಕರಿಗೆ ಬೆದರಿಕೆ ಒಡ್ಡುವುದನ್ನು ಅವರು ನಿಲ್ಲಿಸುವ ತನಕ ನಮ್ಮ ಸೇನಾಪಡೆಗಳು ಆಕ್ರಮಣದಿಂದ ಹಿಂದೆ ಸರಿಯುವುದಿಲ್ಲ’ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.


