ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಪರಿಹಾರ: ಮೋದಿ ಬೈಡೆನ್‌ ಚರ್ಚೆ

  • ಉಕ್ರೇನಿಗೆ ಭಾರತ ಮಾನವೀಯ ನೆರವಿಗೆ ಅಮೆರಿಕ ಶ್ಲಾಘನೆ
  • ಉಕ್ರೇನ್‌ನ ಬುಚಾ ಮೇಲಿನ ರಷ್ಯಾ ದಾಳಿಗೆ ಮೋದಿ ಬೇಸರ
  • ರಷ್ಯಾ-ಉಕ್ರೇನ್‌ ಬಿಕ್ಕಟ್ಟಿನ ಬಗ್ಗೆ ಉಭಯ ನಾಯಕರ ಚರ್ಚೆ
Modi Biden discussed on Russia-Ukraine crisis resolved akb

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden)ಸೋಮವಾರ ರಾತ್ರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ, ರಷ್ಯಾ-ಉಕ್ರೇನ್‌ ನಡುವಣ ಬಿಕ್ಕಟ್ಟು (Russia-Ukraine crisis)ಪರಿಹಾರದ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಇದೇ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ವ್ಯವಹಾರಗಳ ಬಗ್ಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ರಷ್ಯಾ ದಾಳಿಯಿಂದ ಉಕ್ರೇನಿನಲ್ಲಿ ಪರಿಸ್ಥಿತಿ ಚಿಂತಾಜನಕವಾಗಿರುವ ಸಂದರ್ಭದಲ್ಲಿ ನಾವು ಮಾತನಾಡುತ್ತಿದ್ದೇವೆ. ಉಕ್ರೇನಿನ (Ukraine) ಬುಚಾದಲ್ಲಿ (Bucha) ನಡೆದ ಮುಗ್ಧ ನಾಗರಿಕರ ಹತ್ಯೆ ತೀವ್ರ ನೋವುಂಟು ಮಾಡಿದೆ. ಈ ಘಟನೆಯನ್ನು ಭಾರತ ಖಂಡಿಸಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ ಎಂದು ತಿಳಿಸಿದರು.

ಇದೇ ವೇಳೆ ರಷ್ಯಾ (Russia) ಮತ್ತು ಉಕ್ರೇನ್‌ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದೇನೆ. ಉಕ್ರೇನಿನ ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡಿ ಬಿಕ್ಕಟ್ಟು ಪರಿಹರಿಸಿಕೊಳ್ಳುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Russian President Vladimir Putin) ಅವರಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು. ನಂತರ ರಷ್ಯಾ-ಉಕ್ರೇನ್‌ ನಡುವಣ ನಡೆಯುತ್ತಿರುವ ಶಾಂತಿ ಮಾತುಕತೆ ಯಶಸ್ವಿಯಾಗುವುದೆಂದು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Modi virtually meet ಅಮೆರಿಕ ಅಧ್ಯಕ್ಷ ಬೈಡೆನ್ ಜೊತೆ ಏ.11ಕ್ಕೆ ಪ್ರಧಾನಿ ಮೋದಿ ವರ್ಚುವಲ್ ಸಭೆ!

ನಂತರ ಭಾರತ-ಅಮೆರಿಕ ದ್ವಿಪಕ್ಷೀಯ (India-US bilateral relationship) ಸಂಬಂಧದ ಕುರಿತು ಮಾತನಾಡುತ್ತಾ, ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ-ಅಮೆರಿಕ ಸ್ವಾಭಾವಿಕ ಪಾಲುದಾರರು ಎಂದು ಬಣ್ಣಿಸಿದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಾನು ವಾಷಿಂಗ್ಟನ್‌ಗೆ ಬಂದಾಗ, ಭಾರತ-ಅಮೆರಿಕ ಪಾಲುದಾರಿಕೆಯು (Indo-US partnership) ಅನೇಕ ಜಾಗತಿಕ ಸಮಸ್ಯೆಗಳ (global problems) ಪರಿಹಾರಕ್ಕೆ ಕೊಡುಗೆ ನೀಡಬಹುದು ಎಂದು ನೀವು ಹೇಳಿದ್ದೀರಿ. ಈ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಹೇಳಿದರು.

ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಉಕ್ರೇನಿನ ಜನರಿಗೆ ಮಾನವೀಯ ನೆರವು ನೀಡಿದ ಭಾರತ ಕ್ರಮವನ್ನು ಅಮೆರಿಕ ಸ್ವಾಗತಿಸುತ್ತದೆ. ರಷ್ಯಾದ ಯುದ್ಧದ ಪರಿಣಾಮಗಳ ನಿರ್ವಹಣೆ ಹೇಗೆ ಎಂಬ ಬಗ್ಗೆ ಅಮೆರಿಕ ಮತ್ತು ಭಾರತ ಸಮಾಲೋಚನೆಯನ್ನು ಮುಂದುವರಿಸಲಿವೆ ಎಂದು ಹೇಳಿದರು. ಇದೇ ವೇಳೆ ಬಲವಾದ ಮತ್ತು ಬೆಳೆಯುತ್ತಿರುವ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಪರಸ್ಪರ ಹಂಚಿಕೊಳ್ಳುತ್ತೇವೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ

ಒಂದು ಕಡೆ ಜೋ ಬೈಡೆನ್‌ ಹಾಗೂ ನರೇಂದ್ರ ಮೋದಿ ವರ್ಚುವಲ್‌ ಮಾತುಕತೆ ನಡೆಸಿದರೆ, ಭಾರತ ಹಾಗೂ ಅಮೆರಿಕದ ರಕ್ಷಣೆ ಹಾಗೂ ವಿದೇಶಾಂಗ ಸಚಿವರ ನಡುವೆ ಅಮೆರಿಕದಲ್ಲಿ ಮಾತುಕತೆ (2+2 ಮಾತುಕತೆ) ನಡೆದವು.

ಭಾರತ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮತ್ತು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರು ಸೋಮವಾರ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚೆ ನಡೆಸಿದರು. ಈ ಕುರಿತು ಟ್ವೀಟ್‌ ಮಾಡಿರುವ ಬ್ಲಿಂಕನ್‌, ‘ಜಾಗತಿಕ ಪರಿಸ್ಥಿತಿ, ಪ್ರಾದೇಶಿಕ ಹಾಟ್‌ಸ್ಪಾಟ್‌ಗಳು ಮತ್ತು ದ್ವಿಪಕ್ಷೀಯ ಸಹಕಾರದ ಕುರಿತು ಪರಸ್ಪರ ವಿಚಾರ ವಿನಿಮಯ ನಡೆಯಿತು ಎಂದು ತಿಳಿಸಿದ್ದಾರೆ.

ಇದೇ ವೇಳೆ ಭಾರತ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಅಮೆರಿಕ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಸಹ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ‘ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಬಗ್ಗೆ ಸಂವಾದ ನಡೆಸಿದೆವು’ ಎಂದು ಆಸ್ಟಿನ್‌ ಟ್ವೀಟ್‌ ಮಾಡಿದ್ದಾರೆ.

Latest Videos
Follow Us:
Download App:
  • android
  • ios