ಥೈಲ್ಯಾಂಡ್‌ನ ಖಾವೊ ಯಾಯ್ ರಾಷ್ಟ್ರೀಯ ಉದ್ಯಾನವನದ ಬಳಿ ಕಾಡಾನೆಯೊಂದು ದಿನಸಿ ಅಂಗಡಿಗೆ ನುಗ್ಗಿ ತಿಂಡಿ ತಿಂದು ಹೋಗಿದೆ.
ಕಾಡುಗಳ ನಾಶದಿಂದಾಗಿ ಪ್ರಾಣಿಗಳು ಹಾಗೂ ಮಾನವರ ಸಂಘರ್ಷ ಇತ್ತೀಚೆಗೆ ಸಾಮಾನ್ಯ ಎನಿಸಿದೆ. ಕಾಡುಪ್ರಾಣಿಗಳು ನಾಡಿಗೆ ದಾಂಗುಡಿ ಇಟ್ಟು ಬೆಳೆ ನಾಶ ಮಾಡುವುದು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಹೀಗಿರುವಾಗ ಇಲ್ಲೊಂದು ಕಡ ಕಾಡಾನೆಯೊಂದು ಹಸಿವು ತಡೆಯಲಾಗದೇ ಶಾಪೊಂದಕ್ಕೆ ದಾಂಗುಡಿ ಇಟ್ಟಿದ್ದು, ಅಲ್ಲಿನ ಕೆಲವಸ್ತುಗಳನ್ನು ತನ್ನ ಸೊಂಡಿಲಿನಲ್ಲಿ ತುಂಬಿಕೊಂಡು ಹೋಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಥೈಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ. ಥೈಲ್ಯಾಂಡ್‌ನ ಖಾವೊ ಯಾಯ್ ರಾಷ್ಟ್ರೀಯ ಉದ್ಯಾನವನದ ಬಳಿಯ ದಿನಸಿ ಅಂಗಡಿಯೊಂದಕ್ಕೆ ನುಗ್ಗಿದ ಕಾಡಾನೆಯೊಂದು ಮನಸ್ಸಿಗೆ ಮುದ ನೀಡುವಷ್ಟು ತಿಂಡಿ ಯಾವುದೇ ವಸ್ತುಗಳಿಗೆ ಹಾನಿ ಮಾಡದೇ ಅಲ್ಲಿಂದ ಬಹಳ ತಾಳ್ಮೆಯಿಂದ ನಿಧಾನವಾಗಿ ಹಿಂದಿರುಗಿದೆ.
ವನ್ಯಜೀವಿ ಅಧಿಕಾರಿಗಳು ಪ್ಲೈ ಬಿಯಾಂಗ್ ಲೆಕ್ ಎಂದು ಗುರುತಿಸಿರುವ ಈ ಕಾಡಾನೆ ಅಂಗಡಿಯ ಹತ್ತಿರ ಬಂದು ಮುಂಭಾಗದ ಪ್ರವೇಶದ್ವಾರದ ಮೂಲಕ ಒಳಗೆ ನುಗ್ಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಆನೆ ಆಹಾರ ಇರುವ ಕೌಂಟರ್‌ಗೆ ನೇರವಾಗಿ ಸಾಗಿ ಕಪಾಟಿನಿಂದ ಸರಕುಗಳನ್ನು ಸೊಂಡಿಲಿನಲ್ಲಿ ತೆಗೆಯುತ್ತಿರುವುದನ್ನು ಕಾಣಬಹುದು. ಈ ವೇಳೆ ರಾಷ್ಟ್ರೀಯ ಉದ್ಯಾನವನದ ಕಾರ್ಮಿಕರು ಆನೆಯನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಆನೆ ಮಾತ್ರ ಕದಲದೇ ತಿನ್ನುವುದರಲ್ಲಿ ಮಗ್ನವಾಗಿದೆ. ಅಲ್ಲದೇ ತನ್ನ ಸೊಂಡಿಲಿನಲ್ಲಿ ಸಾಧ್ಯವಾದಷ್ಟು ಆಹಾರದ ಪೊಟ್ಟಣಗಳನ್ನು ತುಂಬಿಸಿಕೊಂಡು ನಿಧಾನವಾಗಿ ಹೊರ ಬಂದಿದೆ.
ವೀಡಿಯೋದಲ್ಲಿ ಆನೆಯ ಬೆನ್ನಿಗೆ ಅಂಗಡಿಯ ಮಹಡಿ ಎತ್ತರ ಕಡಿಮೆ ಆಗಿದ್ದರಿಂದ ತಾಕುತ್ತಿರುವುದು ಕಾಣುತ್ತಿದೆ. ಆದರೂ ಅದು ಜಾಣತನದಿಂದ ತುಸು ಬಗ್ಗಿಕೊಂಡೆ ಅಂಗಡಿಯೊಳಗೆ ನುಗ್ಗಿದೆ. ಅಲ್ಲದೇ ಅಲ್ಲಿ ಯಾವುದೇ ವಸ್ತುಗಳನ್ನು ಕೆಳಗೆ ಬೀಳಿಸಿ ಹಾನಿ ಮಾಡದೇ ಸಾವಧಾನದಿಂದ ಬಂದ ದಾರಿಯಲ್ಲೇ ಹೊರಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಅಂಗಡಿಯ ಮಾಲೀಕ ಕ್ಯಾಂಪ್ಲಾಯ್ ಕಾಕೇವ್, ಆನೆಯು ಬೆಳಗ್ಗೆ ತಾನು ದಾಸ್ತಾನು ಮಾಡಿದ್ದ ಒಂಬತ್ತು ಪ್ಯಾಕೆಟ್ ಸಿಹಿ ಅಕ್ಕಿ ಕ್ರ್ಯಾಕರ್‌ಗಳು, ಒಂದು ಸ್ಯಾಂಡ್‌ವಿಚ್ ಮತ್ತು ಒಣಗಿದ ಬಾಳೆಹಣ್ಣುಗಳು ಸೇರಿದಂತೆ ಹಲವಾರು ವಸ್ತುಗಳನ್ನು ಹೇಗೆ ಬಾಯೊಳಗೆ ತುಂಬಿಸಿಕೊಂಡಿತು ಎಂಬುದನ್ನು ಹೇಳಿದರು.
ಹಲವು ವರ್ಷಗಳಿಂದ ಆನೆ ಪ್ಲೈ ಬಿಯಾಂಗ್ ಲೆಕ್ ಅನ್ನು ಗಮನಿಸುತ್ತಿರುವ ಸ್ವಯಂಸೇವಕ ರೇಂಜರ್ ದನೈ ಸೂಕ್ಕಾಂತಚಾಟ್, ಈ 30 ವರ್ಷದ ಆನೆ ಮಾನವ ಹೀಗೆ ಮಾನವರಿರುವ ಸ್ಥಳದಲ್ಲಿ ಓಡಾಡುವುದು ಹೊಸತೇನಲ್ಲ, ಆದರೆ ಇದು ಆಹಾರಕ್ಕಾಗಿ ಅಂಗಡಿಗೆ ನುಗ್ಗಿದ್ದು, ಇದೇ ಮೊದಲು ಎಂದರು. ಅಲ್ಲದೇ ಅಂಗಡಿಯಿಂದ ಹೊರಬಂದ ಈ ಆನೆ ಪಕ್ಕದಲ್ಲೇ ಇದ್ದ ಮತ್ತೊಂದು ಮನೆಯೊಂದರ ಬೆಡ್‌ರೂಮ್ ಕಿಟಕಿಯನ್ನು ತೆರೆಯಲು ಹೋದ ಎಂದು ಹೇಳಿಕೊಂಡಿದ್ದಾರೆ.
