12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿದ್ದ ವ್ಯಕ್ತಿ ಗೆ 52 ವರ್ಷಗಳ ನಂತರ ಅದರ ನೆನಪಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಅದನ್ನು ವೈದ್ಯರು ಹೊರತೆಗೆದಿದ್ದಾರೆ.
12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿದ್ದ ವ್ಯಕ್ತಿ 52 ವರ್ಷಗಳ ಕಾಲ ಅದನ್ನು ತನ್ನ ಕರುಳಿನಲ್ಲಿಯೇ ಇರಿಸಿಕೊಂಡು ಬದುಕಿದಂತಹ ವಿಚಿತ್ರ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಕಡೆಗೂ ಆತನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆತನ ಕರುಳಿನಲ್ಲಿದ್ದ ಹಲ್ಲುಜ್ಜುವ ಬ್ರಶ್ ಅನ್ನು ಹೊರತೆಗೆದಿದ್ದಾರೆ. ಚೀನಾದ ಯಾಂಗ್ ಎನ್ನುವ ವ್ಯಕ್ತಿ 12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಈಗ ಆತನಿಗೆ 64 ವರ್ಷವಾಗಿದ್ದು, ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ವೈದ್ಯರ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೊಟ್ಟೆನೋವಿಗೆ ಕಾರಣ ಏನು ಎಂದು ತಿಳಿಯಲು ವೈದ್ಯರು ಆತನ ಹೊಟ್ಟೆಯನ್ನು ಸ್ಕ್ಯಾನಿಂಗ್ ಮಾಡಿ ತಪಾಸಣೆ ನಡೆಸಿದಾಗ ಆತನ ಹೊಟ್ಟೆಯ ಒಳಗೆ 17 ಸೆಂಟಿ ಮೀಟರ್ ಉದ್ದದ ಹಲ್ಲುಜ್ಜುವ ಬ್ರಶ್ ಕಾಣಿಸಿದೆ. ಇದು ಸುಮಾರು 52 ವರ್ಷಗಳ ಕಾಲ ಈತನ ಹೊಟ್ಟೆಯಲ್ಲಿ ಇದ್ದಿದ್ದು ನೋಡಿ ವೈದ್ಯರೇ ಅಚ್ಚರಿಪಟ್ಟಿದ್ದಾರೆ. ಈ ವಸ್ತು ಆತನ ಸಣ್ಣ ಕರುಳಿನಲ್ಲಿ (small intestine) ಜಾಗ ಪಡೆದುಕೊಂಡಿದ್ದು, ದೈನಂದಿನ ಜೀರ್ಣಾಂಗ ವ್ಯವಸ್ಥೆಯ ತಪಾಸಣೆ (Regular Digestive System) ವೇಳೆ ಈ ಹಲ್ಲುಜ್ಜುವ ಬ್ರಶ್ ಕಂಡು ಬಂದಿದೆ.
ಬಾಲ್ಯದಲ್ಲಿದ್ದಾಗ ಬ್ರಶ್ ನುಂಗಿದ್ದ ಯಾಂಗ್
ಈತ ತಾನು 12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶನ್ನು(toothbrush) ನುಂಗಿರುವುದಾಗಿ ನೆನಪು ಮಾಡಿಕೊಂಡಿದ್ದಾನೆ. ಅಲ್ಲದೇ ಈ ವಿಚಾರವನ್ನು ಆಗ ಪೋಷಕರ ಬಳಿ ಹೇಳಿಕೊಳ್ಳಲು ಭಯವಾಗಿತ್ತು. ಹೀಗಾಗಿ ಈ ವಿಚಾರವನ್ನು ಅವರಿಗೆ ತಿಳಿಸದೇ ಸುಮ್ಮನಿದ್ದಿದ್ದಾಗಿ ಯಾಂಗ್ ಹೇಳಿದ್ದಾನೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (South China Morning Post) ವರದಿ ಮಾಡಿದೆ. ಅಲ್ಲದೇ ಈ ಹಲ್ಲುಜ್ಜುವ ಬ್ರಶ್ ನುಂಗಿದ ನಂತರ ತನಗೆ ಯಾವುದೇ ತೊಂದರೆ ಕಾಣಿಸಿಕೊಳ್ಳದ ಹಿನ್ನೆಲೆ ತಾನು ನುಂಗಿದ್ದ ಈ ಹಲ್ಲುಜ್ಜುವ ಬ್ರಶ್ ತನ್ನ ಜೀರ್ಣಾಂಗ ವ್ಯವಸ್ಥೆಯಲ್ಲಿ ಅದರಷ್ಟಕ್ಕೆ ಅದು ಜೀರ್ಣಗೊಂಡು ದೇಹದಿಂದ ಹೊರ ಹೋಗಿರಬಹುದು ಎಂದು ಅವರು ಈ ಬ್ರಶ್ ಮತ್ತೆ ಕಾಣಿಸುವವರೆಗೂ ಹಾಗೆಯೇ ಭಾವಿಸಿದ್ದರಂತೆ.
80 ನಿಮಿಷದ ಎಂಡೋಸ್ಕೋಪಿಕ್ ಸರ್ಜರಿ ನಡೆಸಿದ ವೈದ್ಯರು
ಆದರೆ ಈಗ ಅವರಿಗೆ 64 ವರ್ಷವಾದ ನಂತರ ಅವರು 12 ವರ್ಷದವರಿರುವಾಗ ನುಂಗಿದ್ದ ಬ್ರಶ್ ಹೊಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಅಚ್ಚರಿ ಮೂಡಿಸಿದೆ. ನಂತರ ಯಾಂಗ್‌ನ ವೈದ್ಯರು ಆತನಿಗೆ ಎಂಡೋಸ್ಕೋಪಿಕ್ ಸರ್ಜರಿ (Endoscopic Surgery) ಮಾಡಿದ್ದು, 80 ನಿಮಿಷದಲ್ಲಿ ಆತನ ದೇಹದಲ್ಲಿದ್ದ ಹಲ್ಲುಜ್ಜುವ ಬ್ರಶ್ ಅನ್ನು ಹೊರತೆಗೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ಆಸ್ಪತ್ರೆಯಲ್ಲಿ ಮಾನವನ ದೇಹದ ಜೀರ್ಣಾಂಗ ವ್ಯವಸ್ಥೆಯಿಂದ (Digestive System) ಹೊರ ತೆಗೆದ ಅತ್ಯಂತ ದೊಡ್ಡ ವಸ್ತು ಇದು ಎಂದು ಯಾಂಗ್‌ಗೆ ಶಸ್ತ್ರಚಿಕಿತ್ಸೆ ನಡೆಸಿದ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ವೈದ್ಯಕೀಯ ತಜ್ಞರ ಪ್ರಕಾರ, ಕರುಳಿನಲ್ಲಿ ಸಂಗ್ರಹಿಸಲ್ಪಟ್ಟಿದ್ದ ಹಲ್ಲುಜ್ಜುವ ಬ್ರಶ್ ಅಲ್ಲಿ ಅತ್ತಿತ್ತ ಸಾಗುವ ಮೂಲಕ ದೇಹದ ಒಳಭಾಗದಲ್ಲಿ ಹಾನಿ ಮಾಡುವ ಸಾಧ್ಯತೆ ಇತ್ತು. ಹಾಗಾದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಆದರೆ ಯಾಂಗ್ ಅವರ ದೇಹದಲ್ಲಿ ಈ ಬ್ರಶ್ ಕರುಳಿನ ಒಂದು ಕಡೆ ಶೇಖರಣೆಗೊಂಡು ದಶಕಗಳ ಕಾಲ ಅದು ಚಲಿಸದೇ ಅಲ್ಲೇ ಸ್ಥಗಿತಗೊಂಡಿತ್ತು ಎಂದು ವೈದ್ಯರು ಹೇಳಿದ್ದಾರೆ. ಆದರೆ 64ನೇ ವರ್ಷದಲ್ಲಿ ಅವರ ದೇಹದಿಂದ ಹಲ್ಲುಜ್ಜುವ ಬ್ರಶನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದ್ದು, ಈ ವಿಚಾರವೀಗ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆತ ನಿಜವಾಗಿಯೂ ಅದೃಷ್ಟವಂತ ಎಂದು ಅಲ್ಲಿನ ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ.
ಅನೇಕರು ಐದು ದಶಕಗಳ ಕಾಲ ಈತನ ದೇಹದಲ್ಲಿ ಹಲ್ಲುಜ್ಜುವ ಬ್ರಶ್ ಇದ್ದಿದ್ದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಂತ ಮಾನವ ಕರುಳಿನಲ್ಲಿ ಇಂತಹ ಬಾಹ್ಯ ವಸ್ತುಗಳು ಕಾಣಿಸುವ ಪ್ರಕರಣ ಇದೇ ಮೊದಲಲ್ಲ, ಈ ಹಿಂದೆ 2019ರಲ್ಲೂ ಚೀನಾದ ಆಸ್ಪತ್ರೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಗುಂಗ್ಡಾಂಗ್ ಪ್ರಾಂತ್ಯದ (Guangdong province) ಆಸ್ಪತ್ರೆಯೊಂದರಲ್ಲಿ ವೈದ್ಯರು ವ್ಯಕ್ತಿಯೊಬ್ಬರ ದೇಹದಿಂದ 14 ಸೆಂಟಿ ಮೀಟರ್ ಉದ್ದದ ಹಲ್ಲುಜ್ಜುವ ಬ್ರಶನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದರು.
