ಚೀನಾದಿಂದ ಮತ್ತಷ್ಟು ತಂಟೆ: ಡೋಕ್ಲಾಂ ಬಳಿ ಶಸ್ತ್ರ ಸಂಗ್ರಹ!| ಭೂತಾನ್‌ ಜಾಗದಲ್ಲಿ ಹಳ್ಳಿ, ರಸ್ತೆ ನಿರ್ಮಿಸಿ ಮತ್ತೆ ಕಿತಾಪತಿ| ಮತ್ತೊಂದು ಸಂಘರ್ಷಕ್ಕೆ ಸಜ್ಜಾಗುತ್ತಿದೆಯೇ ಡ್ರ್ಯಾಗನ್‌?

ನವದೆಹಲಿ(ನ.24): ಮೂರು ವರ್ಷಗಳ ಹಿಂದೆ ಭಾರತ- ಚೀನಾ ನಡುವೆ ಸಂಘರ್ಷ ನಡೆದಿದ್ದ ಡೋಕ್ಲಾಂಗೆ ಸಮೀಪದ ಭೂತಾನ್‌ನ ಭಾಗದಲ್ಲಿ ಸದ್ದಿಲ್ಲದೆ ಹಳ್ಳಿ, 9 ಕಿ.ಮೀ. ರಸ್ತೆ ನಿರ್ಮಿಸಿದ್ದ ಕಪಟಿ ಚೀನಾ ಈಗ ಮತ್ತೊಂದು ಕುತಂತ್ರ ನಡೆಸಿದೆ. ಡೋಕ್ಲಾಂ ಸಂಘರ್ಷ ನಡೆದ ಸ್ಥಳದಿಂದ ಕೇವಲ 7 ಕಿ.ಮೀ. ದೂರದಲ್ಲಿ ಶಸ್ತಾ್ರಸ್ತ್ರ ಬಂಕರ್‌ಗಳನ್ನು ನಿರ್ಮಿಸಿರುವುದು ಬೆಳಕಿಗೆ ಬಂದಿದ್ದು, ಭಾರತದ ಕಳವಳಕ್ಕೆ ಕಾರಣವಾಗಿದೆ.

ಭೂತಾನ್‌ ಒಳಗೆ ಚೀನಾದಿಂದ 9 ಕಿ.ಮೀ. ರಸ್ತೆ!

2017ರಲ್ಲಿ ಸಂಘರ್ಷ ನಡೆದಿದ್ದ ಸ್ಥಳವಾದ ಡೋಕಾ ಲಾದಿಂದ ಹೊಸ ಬಂಕರ್‌ಗಳು 7 ಕಿ.ಮೀ. ದೂರದಲ್ಲಿವೆ. ಈ ಬಂಕರ್‌ಗಳು ಉಪಗ್ರಹ ಚಿತ್ರಗಳಲ್ಲಿ ಪತ್ತೆಯಾಗಿವೆ. ‘ಮತ್ತೊಂದು ಬಾರಿ ಏನಾದರೂ ಡೋಕ್ಲಾಂ ಸಂಘರ್ಷ ಸೃಷ್ಟಿಯಾದರೆ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಚೀನಾ ಸಿದ್ಧತೆ ನಡೆಸಿರುವಂತಿದೆ. ಇದು ನಿಜಕ್ಕೂ ಕಳವಳಕಾರಿ ಬೆಳವಣಿಗೆ. ಇತ್ತೀಚೆಗೆ ಭೂತಾನ್‌ನಲ್ಲಿ ಚೀನಾದ ಹಳ್ಳಿ ತಲೆ ಎತ್ತಿತ್ತು. ಇಂತಹ ಬೆಳವಣಿಗೆಯಿಂದ ಡೋಕ್ಲಾಂನಲ್ಲಿ ಮತ್ತೆ ಸಂಘರ್ಷ ಭುಗಿಲೇಳಬಹುದು’ ಎಂದು ಮಿಲಿಟರಿ ವಿಶ್ಲೇಷಕ ಸಿಮ್‌ ಟ್ಯಾಕ್‌ ಅವರು ತಿಳಿಸಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಸೆರೆ ಹಿಡಿಯಲಾದ ಉಪಗ್ರಹ ಚಿತ್ರಗಳಲ್ಲಿ ಬಂಕರ್‌ಗಳು ಇರಲಿಲ್ಲ. ಆದರೆ ಈ ವರ್ಷದ ಅ.28ರಂದು ತೆಗೆದಿರುವ ಉಪಗ್ರಹ ಚಿತ್ರಗಳಲ್ಲಿ ಬಂಕರ್‌ಗಳು ಬಹುತೇಕ ಪೂರ್ಣಗೊಂಡಿವೆ. ಇದು ಶಸ್ತಾ್ರಸ್ತ್ರ ಕೋಠಿ ಎಂದು ನಿವೃತ್ತ ಸೇನಾಧಿಕಾರಿಗಳು ಕೂಡ ತಿಳಿಸಿದ್ದಾರೆ.

ಮೂರೇ ವರ್ಷದಲ್ಲಿ ಚೀನಾ ವಾಯುನೆಲೆ ಸಂಖ್ಯೆ ಡಬಲ್‌!

ಪೂರ್ವ ಲಡಾಖ್‌ನಲ್ಲಿ ಹಲವು ತಿಂಗಳಿನಿಂದ ಸಂಘರ್ಷ ಮುಂದುವರಿದಿದೆ. ಇದೀಗ ಡೋಕ್ಲಾಂನಲ್ಲಿ ಮತ್ತೆ ಕಿಡಿ ಹೊತ್ತಿಸಲು ಚೀನಾ ಯತ್ನಿಸುತ್ತಿರುವಂತಿದೆ ಎನ್ನಲಾಗುತ್ತಿದೆ.