ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕತಾರ್, ಕುವೈತ್‌ನಿಂದ ತೈಲ ಪೂರೈಕೆ ನಿಂತರೂ, ಭಾರತಕ್ಕೆ ತೈಲದ ಕೊರತೆಯಾಗಿಲ್ಲ. ಸೌದಿ ಅರೇಬಿಯಾ ಮತ್ತು ಯುಎಇ ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದು, ಇರಾನ್, ವೆನಿಜುವೆಲಾ ಮತ್ತು ರಷ್ಯಾದಿಂದ ಆಮದು ಹೆಚ್ಚಿಸಿರುವುದರಿಂದ ದೇಶದ ತೈಲ ಲಭ್ಯತೆ ಖಚಿತವಾಗಿದೆ.

ನವದೆಹಲಿ: ಮಧ್ಯಪ್ರಾಚ್ಯ ಯುದ್ಧ ಹಾಗೂ ಹೋರ್ಮುಜ್‌ ಜಲಸಂಧಿ ಬಿಕ್ಕಟ್ಟಿನ ಕಾರಣ ಕತಾರ್‌, ಕುವೈತ್‌ ಮೊದಲಾದ ಕೊಲ್ಲಿ ರಾಷ್ಟ್ರಗಳಿಂದ ತೈಲ ಪೂರೈಕೆ ಸ್ಥಗಿತವಾಗಿದ್ದರೂ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳು ಭಾರತಕ್ಕೆ ತೈಲ ಕೊರತೆಯನ್ನು ನೀಗಿಸುತ್ತಿವೆ. ಇವು ಪರ್ಯಾಯ ಮಾರ್ಗಗಳ ಮೂಲಕ ತೈಲವನ್ನು ಪೂರೈಸುತ್ತಿದ್ದರೆ, ಇರಾನ್, ವೆನಿಜುವೆಲಾದಿಂದ ತೈಲ ಆಮದು ಪುನಾರಂಭ ಹಾಗೂ ರಷ್ಯಾದಿಂದ ಆಮದು ಹೆಚ್ಚಿಸಿರುವುದು ದೇಶದ ತೈಲ ಲಭ್ಯತೆಯನ್ನು ಖಚಿತಪಡಿಸಿದೆ.

Add Asianetnews Kannada as a Preferred SourcegooglePreferred

ಹೋರ್ಮುಜ್ ಜಲಸಂಧಿ ಬಿಟ್ಟು ಬೇರೆಡೆಯಿಂದ ತೈಲ ಪೂರೈಕೆ

ಸೌದಿ ಹಾಗೂ ಯುಎಇ ಎರಡೂ ದೇಶಗಳು ಹೋರ್ಮುಜ್ ಜಲಸಂಧಿಯನ್ನು ತಪ್ಪಿಸಿ ಬೇರೆ ಬಂದರುಗಳಿಂದ ಪೂರೈಕೆ ಮಾಡುತ್ತಿವೆ. ಸೌದಿ ಪರ್ಷಿಯನ್‌ ಕೊಲ್ಲಿಯ ರಾಸ್ ತನುರಾ ಬಂದರಿನಿಂದ ತೈಲವನ್ನು ಕೆಂಪು ಸಮುದ್ರದಲ್ಲಿನ ಯಾನ್ಬು ಬಂದರಿಗೆ ಮರುನಿರ್ದೇಶನಗೊಳಿಸುತ್ತಿದೆ. ಯುಎಇ ಒಮಾನ್‌ ಕೊಲ್ಲಿಯಲ್ಲಿರುವ ಫುಜೈರಾ ಬಂದರಿಗೆ ರವಾನಿಸುತ್ತಿದೆ.

‘ಸೌದಿ ಮತ್ತು ಯುಎಇಯಿಂದ ಹೆಚ್ಚುತ್ತಿರುವ ಪೂರೈಕೆ, ಇರಾನ್ ಮತ್ತು ವೆನಿಜುವೆಲಾದಿಂದ ಮತ್ತೆ ಆರಂಭವಾದ ಆಮದು ಮತ್ತು ರಷ್ಯಾದಿಂದ ಹೆಚ್ಚಿನ ಖರೀದಿಗಳು ಕೊಲ್ಲಿ ದೇಶಗಳ ಕೊರತೆಯನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಿ ಭಾರತಕ್ಕೆ ಈ ತಿಂಗಳು ಕಚ್ಚಾ ತೈಲ ಲಭ್ಯತೆಯನ್ನು ಖಚಿತಪಡಿಸಿವೆ’ ಎಂದು ಕೆಪ್ಲರ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ನಿಖಿಲ್ ದುಬೆ ತಿಳಿಸಿದ್ದಾರೆ.

ಏ.1ರಿಂದ 26ರವರೆಗೆ ಭಾರತದ ಸರಾಸರಿ ಕಚ್ಚಾ ತೈಲ ಆಮದು ದಿನವೊಂದಕ್ಕೆ 44 ಲಕ್ಷ ಬ್ಯಾರೆಲ್ ಆಗಿದೆ. ಇದು ಫೆಬ್ರವರಿಯ 52 ಲಕ್ಷ ಬ್ಯಾರಲ್‌ಗೆ ಹೋಲಿಸಿದರೆ ಸುಮಾರು ಶೇ.15 ಕಡಿಮೆ. ಭಾರತದ 2ನೇ ಅತಿದೊಡ್ಡ ತೈಲ ಮೂಲವಾದ ಇರಾಕ್, ಕುವೈತ್ ಮತ್ತು ಕತಾರ್‌ನಿಂದ ಪೂರೈಕೆ ನಿಂತುಹೋಗಿದೆ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಏಪ್ರಿಲ್‌ನಲ್ಲಿ ಸೌದಿ ಅರೇಬಿಯಾ 6,97,000 ಬ್ಯಾರೆಲ್‌ ತೈಲವನ್ನು ಪೂರೈಸಿದೆ. ಯುಎಇ 6,19,000 ಬ್ಯಾರೆಲ್‌ ಪೂರೈಸಿದೆ. ಇದು ಕಳೆದ ಹಣಕಾಸು ವರ್ಷದ ಸರಾಸರಿ 4,33,000 ಬ್ಯಾರೆಲ್‌ಗಿಂತ ಗಣನೀಯ ಹೆಚ್ಚಳವಾಗಿದೆ.

ಅಮೆರಿಕದ ನಿರ್ಬಂಧಗಳ ಸಡಿಲಿಕೆಯಿಂದಾಗಿ, ಏಪ್ರಿಲ್‌ನಲ್ಲಿ 7 ವರ್ಷಗಳ ನಂತರ ಇರಾನ್‌ನಿಂದ 151,000 ಬ್ಯಾರೆಲ್‌ ಮತ್ತು 9 ತಿಂಗಳ ನಂತರ ವೆನಿಜುವೆಲಾದಿಂದ 258,000 ಬ್ಯಾರೆಲ್‌ ತೈಲ ಪೂರೈಕೆ ಆರಂಭವಾಗಿದೆ. ಆದರೆ ಅಮೆರಿಕದಿಂದ ತೈಲ ಪೂರೈಕೆ ಕಡಿಮೆಯಾಗಿ 115,000 ಬ್ಯಾರೆಲ್‌ಗೆ ಇಳಿದಿದೆ. ರಷ್ಯಾದಿಂದ ತೈಲ ಆಮದು ಹೆಚ್ಚಿದೆ.