ನವದೆಹಲಿ(ಆ.08): ಭಾರತವೂ ಸೇರಿದಂತೆ ಟಿಕ್‌ಟಾಕ್‌ನ ಜಾಗತಿಕ ಮಾರುಕಟ್ಟೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್‌ ಸಿದ್ಧತೆ ನಡೆಸಿದೆ. ಚೀನೀಯ ಟಿಕ್‌ಟಾಕ್‌ ಅನ್ನು 3.75 ಲಕ್ಷ ಕೋಟಿ ರು. ಖರೀದಿ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ. ಈ ಕುರಿತಾದ ಮಾತುಕತೆ ಇನ್ನೂ ಪ್ರಗತಿ ಹಂತದಲ್ಲಿದೆ. ಟಿಕ್‌ಟಾಕ್‌ ಅನ್ನು ಸೆ.15ರ ಒಳಗೆ ಖರೀದಿಸಬೇಕು. ಇಲ್ಲದಿದ್ದರೆ, ಟಿಕ್‌ಟಾಕ್‌ ನಿಷೇಧಿಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಎಚ್ಚರಿಸಿದ್ದಾರೆ. ಹೀಗಾಗಿ, ಸೆ.15ರ ಒಳಗಾಗಿ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ಚೀನಾಗೆ ಟ್ರಂಪ್ ಬಿಗ್‌ ಪಂಚ್..! ಅಮೆರಿಕದಲ್ಲಿ ರಾತ್ರೋರಾತ್ರಿ ಟಿಕ್‌ಟಾಕ್ ಜೊತೆ ವಿಚಾಟ್‌ ಕೂಡಾ‌ ಬ್ಯಾನ್

ಈ ಮುನ್ನ ಟಿಕ್‌ಟಾಕ್‌ನ ಅಮೆರಿಕ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ಗಳ ಕಾರ್ಯನಿರ್ವಹಣೆಯ ಮೇಲಿನ ಹಕ್ಕುಗಳನ್ನು ಖರೀದಿಸಲು ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ ಜತೆ ಮೈಕ್ರೋಸಾಪ್ಟ್‌ ಮಾತುಕತೆ ಆರಂಭಿಸಿತ್ತು. ಆದರೆ, ಭಾರತ ಟಿಕ್‌ಟಾಕ್‌ನ ಅತಿದೊಡ್ಡ ಮಾರುಕಟ್ಟೆಯಾಗಿದೆ. ವಿಶ್ವದೆಲ್ಲೆಡೆ 200 ಕೋಟಿ ಟಿಕ್‌ಟಾಕ್‌ ಡೌನ್‌ಲೋಡ್‌ಗಳಲ್ಲಿ ಭಾರತದ ಪಾಲು 65 ಕೋಟಿ. ಹೀಗಾಗಿ, ಭಾರತ ಮತ್ತು ಯುರೋಪ್‌ ಒಳಗೊಂಡಂತೆ ಟಿಕ್‌ಟಾಕ್‌ನ ಸಂಪೂರ್ಣ ಕಾರಾರ‍ಯಚರಣೆ ಸ್ವಾಧೀನಪಡಿಸಿಕೊಳ್ಳುವ ಗುರಿಯನ್ನು ಮೈಕ್ರೋಸಾಫ್ಟ್‌ ಹೊಂದಿದೆ ಎಂದು ‘ಫೈನಾನ್ಶಿಯಲ್‌ ಟೈಮ್ಸ್‌’ ವರದಿ ಮಾಡಿದೆ.

ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!

ಇತ್ತ ಟಿಕ್‌ಟಾಕ್‌ ಭಾರತದಲ್ಲೂ ನಿಷೇಧಕ್ಕೆ ಒಳಗಾಗಿದೆ. ಹೀಗಾಗಿ ನಿಷೇಧದ ತೂಗುಗತ್ತಿಯಂದ ಪಾರಾಗಲು ಟಿಕ್‌ಟಾಕ್‌ಗೆ ಚೀನಾವನ್ನು ತೊರೆಯುವುದು ಹಾಗೂ ಜಾಗತಿಕ ಕಂಪನಿಯಾಗಿ ಗುರುತಿಸಿಕೊಳ್ಳುವುದು ಅನಿವಾರ್ಯವಾಗಿದೆ.

2016ರಲ್ಲಿ ಟಿಕ್‌ಟಾಕ್‌ ಆ್ಯಪ್‌ ಅನ್ನು ಚೀನಾ ಬೈಟ್‌ಡ್ಯಾನ್ಸ್‌ ಬಿಡುಗಡೆ ಮಾಡಿತ್ತು. 2017ರಲ್ಲಿ ಜಾಗತಿಕ ಮಾರುಕಟ್ಟೆಪ್ರವೇಶಿಸಿರುವ ಟಿಕ್‌ಟಾಕ್‌ 150ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.