ಮೆಕ್ಸಿಕೋದ ಮೊದಲ ರಾಮಮಂದಿರ; ಅಮೆರಿಕನ್ ಅರ್ಚಕರಿಂದ ಪ್ರತಿಷ್ಠಾಪನೆ; ವಿಡಿಯೋ ವೈರಲ್
ಮೆಕ್ಸಿಕೋದಲ್ಲಿ ಭಗವಾನ್ ರಾಮನ ದೇವಾಲಯ ಜ.22ರಂದು ಪ್ರತಿಷ್ಠಾಪನೆಯಾಗಿದ್ದು, ವಿಧಿ ವಿಧಾನಗಳನ್ನು ಅಮೆರಿಕನ್ ಅರ್ಚಕರು ಪಕ್ಕಾ ಹಿಂದೂ ಶೈಲಿಯಲ್ಲಿ ಪೂರೈಸಿಕೊಟ್ಟಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯ ಹಿಂದಿನ ದಿನ ಉತ್ತರ ಅಮೆರಿಕಾದ ರಾಷ್ಟ್ರ ಮೆಕ್ಸಿಕೋ ತನ್ನ ಮೊದಲ ಭಗವಾನ್ ರಾಮ ಮಂದಿರದ ಪ್ರತಿಷ್ಠಾಪನೆಗೆ ಸಾಕ್ಷಿಯಾಯಿತು.
ಇಲ್ಲಿನ ಕ್ವೆರೆಟಾರೊ ನಗರದಲ್ಲಿ ತೆರೆಯಲಾದ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯವನ್ನು ಅಮೆರಿಕನ್ ಅರ್ಚಕರೊಬ್ಬರು ನಡೆಸಿಕೊಟ್ಟಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಹಿಂದೂಗಳ ಸ್ತೋತ್ರ, ಭಜನೆಯ ನಡುವೆಯೇ ಅಮೆರಿಕನ್ ಅರ್ಚಕರು ಪ್ರಾಣ ಪ್ರತಿಷ್ಠೆ ಕಾರ್ಯವನ್ನು ವಿಧಿವತ್ತಾಗಿ ನಡೆಸಿದರು. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹಗಳನ್ನು ಭಾರತದಿಂದ ಕೊಂಡೊಯ್ಯಲಾಗಿದೆ. ಅಮೆರಿಕನ್ ಅರ್ಚಕರು ಕೆಂಪು ಕುರ್ತಾಗೆ ಪಂಜೆ ಶಲ್ಯ ಧರಿಸಿ ತಲೆಗೆ ಜುಟ್ಟು ಕಟ್ಟಿದ್ದರು. ಇನ್ನು ಪೂಜೆಯ ವೇಳೆ ಶರ್ಟ್ ತೆಗೆದು ಕೇವಲ ಪಂಚೆ, ಶಲ್ಯದಲ್ಲಿಯೇ ಧಾರ್ಮಿಕ ವಿಧಿಗಳನ್ನು ಪೂರೈಸಿದ್ದು ಎಲ್ಲರ ಗಮನ ಸೆಳೆದರು.
ರಾಮಾಯಣ; ರಾಮನಿಗೆ ಹೆಸರಿಟ್ಟಿದ್ದು ಯಾರು? ಊರ್ಮಿಳೆ ಏಕೆ 14 ವರ್ಷ ನಿದ್ರಿಸಿದಳು?
ಮೆಕ್ಸಿಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾನುವಾರ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದು, ಮೆಕ್ಸಿಕೋದಲ್ಲಿ ಮೊದಲ ಭಗವಾನ್ ರಾಮ ಮಂದಿರದ ಉದ್ಘಾಟನೆಯನ್ನು ಪ್ರಕಟಿಸಿದೆ.
'ಮೆಕ್ಸಿಕೋದಲ್ಲಿ ಮೊದಲ ಭಗವಾನ್ ರಾಮ ಮಂದಿರ! ಅಯೋಧ್ಯೆಯಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಮುನ್ನಾದಿನದಂದು, ಮೆಕ್ಸಿಕೋದ ಕ್ವೆರೆಟಾರೊ ನಗರವು ಮೊದಲ ಭಗವಾನ್ ರಾಮ ಮಂದಿರವನ್ನು ಪಡೆಯುತ್ತಿದೆ. ಮೆಕ್ಸಿಕೋದಲ್ಲಿ ಕ್ವೆರೆಟಾರೋ ಮೊದಲ ಭಗವಾನ್ ಹನುಮಾನ್ ದೇವಾಲಯವನ್ನು ಸಹ ಹೊಂದಿದೆ' ಎಂದು ಅದು ಹೇಳಿದೆ.
'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಮೆಕ್ಸಿಕೋದಲ್ಲಿ ನೆಲೆಯಾಗಿರು ಭಾರತೀಯರು ಭಾಗವಹಿಸಿದ್ದರು. ಭಾರತೀಯ ಡಯಾಸ್ಪೊರಾ ಹಾಡಿರುವ ಸ್ತೋತ್ರಗಳು ಮತ್ತು ಹಾಡುಗಳು ಸಭಾಂಗಣದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ ವಾತಾವರಣವು ದೈವಿಕ ಶಕ್ತಿಯಿಂದ ತುಂಬಿತ್ತು, ಎಂದು ಅದು ವಿವರಿಸಿದೆ.