ವರ್ಕ್ ಫ್ರಮ್ ಹೋಮ್ ಎಫೆಕ್ಟ್... ಮಗುವನ್ನೆತ್ತಿಕೊಂಡೆ ಹವಾಮಾನ ವರದಿ ನೀಡಿದ ಮಹಿಳೆ
- ವರದಿ ನೀಡಲು ನಿಮಿಷಗಳಿದ್ದಾಗ ನಿದ್ದೆಯಿಂದ ಎದ್ದ ಮಗು
- ವಿಧಿ ಇಲ್ಲದೇ ಮಗುವನ್ನೆತ್ತಿಕೊಂಡೆ ಹವಾಮಾನ ವರದಿ
- ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೋವಿಡ್‌ನಿಂದಾಗಿ ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಎಷ್ಟೇ ಆದರೂ ಕಚೇರಿಯಂತೆ ಮನೆಯಲ್ಲಿ ಯಾವುದೇ ಅಡ್ಡಿ ಇಲ್ಲದೇ ಕೆಲಸ ಮಾಡುವುದು ಸುಲಭವಲ್ಲ. ಹೀಗೆ ಹವಾಮಾನಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುವ ತಾಯಿಯೊಬ್ಬರು ಟಿವಿಯೊಂದಕ್ಕೆ ಹವಾಮಾನ ವರದಿ ನೀಡುವ ವೇಳೆ ತಮ್ಮ ಮೂರು ತಿಂಗಳ ಕಂದನೊಂದಿಗೆ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪುಟ್ಟ ಮಗುವಿನೊಂದಿಗೆ ತಾಯಿ ಹವಾಮಾನ ವರದಿ ನೀಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನನ್ನ ಮುಂದಿನ ಹವಾಮಾನ ವರದಿ ಪ್ರಸಾರಕ್ಕೆ ಕೆಲವೇ ನಿಮಿಷಗಳಿದ್ದವು ಅಷ್ಟರಲ್ಲಿ ನನ್ನ ಮಗು ನಿದ್ದೆಯಿಂದ ಎದ್ದಿತು ಎಂದು ಹವಾಮಾನಶಾಸ್ತ್ರಜ್ಞೆ ರೆಬೆಕಾ ರೆಬೆಕಾ ಶುಲ್ಡ್ (Rebecca Schuld) ಹೇಳಿದ್ದಾರೆ. ರೆಬೆಕಾ ಶುಲ್ಡ್ ತನ್ನ ಮಗಳು ಫಿಯೋನಾಳನ್ನು(Fiona) ತನ್ನ ತೋಳುಗಳಲ್ಲಿಎತ್ತಿಕೊಂಡೇ ಹವಾಮಾನ ವರದಿಯನ್ನು ಪ್ರಸ್ತುತಪಡಿಸಿದರು. ವಿಸ್ಕಾನ್ಸಿನ್‌ನ ( Wisconsin) ಮಿಲ್ವಾಕಿಯಿಂದ ( Milwaukee) 42 ವರ್ಷದ ರೆಬೆಕಾ ಶುಲ್ಡ್, CBS 58 ನ್ಯೂಸ್‌ಗಾಗಿ ಹವಾಮಾನ ವರದಿ ಮಾಡುತ್ತಿದ್ದರು. ಈ ವೇಳೆ ಇವರ ತೋಳಿನಲ್ಲಿದ್ದ ಮೂರು ತಿಂಗಳ ಮಗಳನ್ನು ನೋಡಿ ವೀಕ್ಷಕರು ಫುಲ್ ಖುಷಿಯಾದರು ಎಂದು ತಿಳಿದು ಬಂದಿದೆ.
ಟಿವಿ ಚರ್ಚೆ ವೇಳ ಸಿಗದ ಅವಕಾಶ, ಡ್ಯಾನ್ಸ್ ಮಾಡಿದ ಮಹಿಳೆ
ಡೈಲಿ ಮೇಲ್ (Daily Mail) ಪ್ರಕಾರ, ರೆಬೆಕಾ ಶುಲ್ಡ್ ಅವರ ಮಾತೃತ್ವ ರಜೆ ( maternity leave) ಕೊನೆಗೊಂಡಿದೆ. ಆದರೆ ಕೋವಿಡ್ ಪ್ರೇರಿತ ನಿರ್ಬಂಧಗಳಿಂದಾಗಿ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರು ಹವಾಮಾನ ವರದಿ ನೀಡಲು ಸಿದ್ಧರಾಗಿದ್ದ ವೇಳೆಗೆ ಸರಿಯಾಗಿ ಅವರ ಮಗಳು ನಿದ್ರೆಯಿಂದ ಎಚ್ಚರಗೊಂಡಿದ್ದಳು. ಹೀಗಾಗಿ ಆಕೆಯನ್ನು ಎತ್ತಿಕೊಂಡೆ ಅವರು ವರದಿ ನೀಡಿದರು.
ನನ್ನ ಮುಂದಿನ ಹವಾಮಾನ ವರದಿ ನೀಡಲು ಕೆಲವೇ ನಿಮಿಷಗಳಲ್ಲಿರುವಾಗ ನನ್ನ ಮಗು ಎಚ್ಚರಗೊಂಡಿದ್ದಳು. ನಾನು ವರದಿ ಮಾಡಲು ಹೋಗಲೇಬೇಕಿತ್ತು. ಹಾಗಾಗಿ ನಾನು ಆಕೆಯನ್ನು ಜೊತೆಯಲ್ಲಿ ಎತ್ತಿಕೊಂಡು ವರದಿ ನೀಡಲು ಶುರು ಮಾಡಿದೆ. ನನ್ನ ಮ್ಯಾನೇಜರ್ ಕೇಳಿದರು ನಿಮ್ಮ ಮಗಳು ಕೂಡ ಟಿವಿ ಮುಂದೆ ಕಾಣಿಸಿಕೊಳ್ಳುತ್ತಾಳೆಯೇ ಎಂದು ಕೇಳಿದರು. ಆದರೆ ನನಗೆ ನನ್ನ ಮಗಳ ಬಗ್ಗೆ ವಿಶ್ವಾಸವಿತ್ತು. ಆಕೆ ದೀರ್ಘವಾಗಿ ನಿದ್ದೆ ಮಾಡಿದ್ದು ಸುಮ್ಮನಿರುತ್ತಾಳೆ ಎಂಬ ವಿಶ್ವಾಸವಿತ್ತು. ಹಾಗಾಗಿ ನಾನು ಹೌದು ಖಂಡಿತ ಎಂದು ಹೇಳಿದೆ ಎಂದು ರೆಬೆಕಾ ಶುಲ್ಡ್ ಯಾಹೂ ನ್ಯೂಸ್‌ಗೆ ತಿಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್(Twitter) ಯೂಟ್ಯೂಬ್ (YouTube), ಫೇಸ್‌ಬುಕ್ (Facebook) ಮುಂತಾದ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಅನೇಕರು ವೀಕ್ಷಿಸಿದ್ದಾರೆ.
ಅಪಘಾತಕ್ಕೊಳಗಾದರೂ ರಿಪೋರ್ಟಿಂಗ್ ನಿಲ್ಲಿಸದ ವರದಿಗಾರ್ತಿ
ಅನೇಕ ಸಾಮಾಜಿಕ ಜಾಲತಾಣಗಳ ಬಳಕೆದಾರರು, ವೃತ್ತಿಯ ಕಟ್ಟುಪಾಡುಗಳೊಂದಿಗೆ ತಾಯಿಯ ಕರ್ತವ್ಯಗಳನ್ನು ಮಾಡಿದ್ದಕ್ಕಾಗಿ ಹವಾಮಾನಶಾಸ್ತ್ರಜ್ಞೆಯನ್ನು ಶ್ಲಾಘಿಸಿದರು. ಇದು ಕೆಲಸ ಮಾಡುವ ತಾಯಿಯ ನಿಜವಾದ ವ್ಯಾಖ್ಯಾನವಾಗಿದ್ದು, ನೀವು ಕೆಲಸ ಹಾಗೂ ಮನೆ ಎರಡನ್ನೂ ಉತ್ತಮವಾಗಿ ನಿಭಾಯಿಸಿದ್ದೀರಿ, ಮಗು ಪಿಯೋನಾ ಮುದ್ದಾಗಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ತಮ್ಮ ಈ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಕ್ಕೆ ಎಲ್ಲರಿಗೂ ರೆಬೆಕಾ ಧನ್ಯವಾದ ತಿಳಿಸಿದ್ದಾರೆ. ನನಗೆ ನಿಜವಾಗಿಯೂ ಗೌರವ ಸಿಕ್ಕಿದಂತಾಗಿದೆ. ಅನೇಕರು ಈ ದೃಶ್ಯವನ್ನು ಎಲ್ಲೆಡೆ ಶೇರ್ ಮಾಡಿದ್ದಾರೆ. ತಮ್ಮ ಈ ನಿರ್ಧಾರವು ಕೆಲಸ ಮಾಡುವ ತಾಯಂದಿರನ್ನು ತಮ್ಮ ಗುರಿಗಳನ್ನು ಮುಂದುವರಿಸಲು ಪ್ರೇರೇಪಿಸುತ್ತದೆ ಎಂದು ರೆಬೆಕಾ ಹೇಳಿದರು. ನನಗೆ ಏನಾಗುತ್ತಿದೆ ಎಂಬುದರ ಊಹೆ ಇರಲಿಲ್ಲ. ನನ್ನ ಮಗುವನ್ನು ನೋಡಿ ಅನೇಕರು ಖುಷಿ ಪಟ್ಟರು. ನನಗೆ ದೂರವಾಣಿ ಕರೆಗಳು, ಇಮೇಲ್‌ಗಳು ಬರುತ್ತಿವೆ. ಈ ಘಟನೆಯ ಬಳಿಕ ನಾನು ಹವಾಮಾನ ವರದಿ ಮಾಡುತ್ತಿದ್ದರೆ ಜನ ನನ್ನ ಮಗುವನ್ನು ನೋಡಲು ಬಯಸುತ್ತಾರೆ ಎಂದು ರೆಬೆಕಾ ಹೇಳಿದರು.