ವ್ಯಕ್ತಿಯೋರ್ವ ಜಗತ್ತಿನ ಅತ್ಯಂತ ಖಾರದ ಮೆಣಸಿನ ಕಾಯಿ ತಿಂದು ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾನೆ.
ನಮ್ಮಲ್ಲಿ ಬಹುತೇಕರಿಗೆ ಪಲ್ಯದ ಮಧ್ಯೆ ಸಿಗುವ ಸಣ್ಣ ಮೆಣಸಿನ ತುಂಡೊಂದು ನಮಗೆ ನಾಲ್ಕು ಗ್ಲಾಸ್ ನೀರು ಕುಡಿಸುವುದಲ್ಲದೇ ಅದರ ಖಾರವೋ ಅಯ್ಯೋ ಅಮ್ಮ ಎನ್ನುವಂತೆ ಮಾಡುವುದು. ಅಂತಹದ್ದರಲ್ಲಿ ಅಂತಹ ಮೆಣಸು ತಿಂದೇ ವ್ಯಕ್ತಿಯೋರ್ವ ಗಿನ್ನೆಸ್ ಬುಕ್ ಪುಟ ಸೇರಿದ್ದಾನೆ.
ವಿಶ್ವದ ಅತ್ಯಂತ ಖಾರದ ಮೆಣಸು ಎಂದು ಗುರುತಿಸಲ್ಪಟ್ಟಿರುವ ಕೆರೊಲಿನಾ ರೀಪರ್ ಅನ್ನು ಅತ್ಯಂತ ವೇಗವಾಗಿ ಸೇವಿಸುವ ಮೂಲಕ ಕ್ಯಾಲಿಫೋರ್ನಿಯಾದ ಗ್ರೆಗೊರಿ ಫೋಸ್ಟರ್ ಎಂಬ ವ್ಯಕ್ತಿ ಗಿನ್ನೆಸ್ ಪುಟ ಸೇರಿದ್ದಾರೆ. 8.72 ಸೆಕೆಂಡುಗಳಲ್ಲಿ 3 ಕೆರೊಲಿನಾ ರೀಪರ್ ಚಿಲಿ ಪೆಪರ್ ತಿನ್ನುವ ಮೂಲಕ ಈ ಸಾಧನೆ ಮಾಡಿದ್ದಾರೆ. ಡೌನ್‌ಟೌನ್ ಸ್ಯಾನ್ ಡಿಯಾಗೋದಲ್ಲಿನ (San Diego) ಸೀಪೋರ್ಟ್ ಶಾಪಿಂಗ್ ಸೆಂಟರ್‌ನಲ್ಲಿ ಮೂರು ಕೆರೊಲಿನಾ ರೀಪರ್ ಮೆಣಸಿನಕಾಯಿಗಳನ್ನು ತಿಂದಿದ್ದಾರೆ. ಈ ಸಾಧನೆ ಮೂಲಕ ಮೈಕ್ ಜಾಕ್ (Mike Jack) ಎಂಬುವವರ ಸಾಧನೆಯನ್ನು ಮುರಿದಿದ್ದಾರೆ. ಮೈಕ್ ಜಾಕ್ ಎಂಬುವರು 9.72 ಸೆಕೆಂಡುಗಳಲ್ಲಿ ಇದೇ ರೀತಿ ಮೆಣಸು ತಿಂದಿದ್ದರು.
ಗ್ರೆಗೊರಿ ಫೋಸ್ಟರ್ ತಮ್ಮ ಎರಡನೇ ಪ್ರಯತ್ನದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಅವರು ಆರು ಸೂಪರ್-ಹಾಟ್ ಪೆಪರ್‌ಗಳನ್ನು ತಿಂದರು, ಆದರೆ ಅವರ ಬಾಯಿಯಲ್ಲಿ ನುಂಗದೆ ಇರುವ ಮೆಣಸಿನ ಅಂಶವಿದ್ದ ಕಾರಣ ಅವರನ್ನು ಅನರ್ಹಗೊಳಿಸಲಾಯಿತು.
ಖಾರ ಎಂದು ಹಸಿ ಮೆಣಸಿಕಾಯಿ ದೂರ ಇಡಬೇಡಿ... ಆರೋಗ್ಯಕ್ಕೆ ಬೇಕು
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ತನ್ನ ಇನ್‌ಸ್ಟಾಗ್ರಾಮ್ (Instagram) ಪುಟದಲ್ಲಿ ಸಾಧಕರ ವಿಡಿಯೋಗಳನ್ನು ಹಾಕುತ್ತಲೇ ಇರುತ್ತದೆ. ಹಾಗೆಯೇ ಈ ವ್ಯಕ್ತಿಯ ವಿಡಿಯೋವನ್ನು ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಗ್ರೆಗೊರಿ ಫೋಸ್ಟರ್ ಮೆಣಸಿನ ಕಾಯಿ ತಿನ್ನುತ್ತಿರುವ ದೃಶ್ಯವಿದೆ. ಮೆಣಸಿನಕಾಯಿಯನ್ನು ಒಂದರ ನಂತರ ಒಂದರಂತೆ ಅವರು ತಿನ್ನುವುದನ್ನು ವೀಡಿಯೊ ತೋರಿಸುತ್ತಿದೆ. ತಿಂದ ನಂತರ ಅವರು ಎಲ್ಲವನ್ನೂ ತಿಂದಿದ್ದೇನೆ ಎಂದು ಸಾಬೀತುಪಡಿಸಲು ತನ್ನ ಬಾಯಿಯನ್ನು ಅಗಲವಾಗಿ ತೆರೆಯುತ್ತಾರೆ.
ಮೂರು ಕೆರೊಲಿನಾ ರೀಪರ್ ಮೆಣಸಿನಕಾಯಿಗಳನ್ನು ತಿನ್ನಲು ವೇಗವಾದ ಸಮಯ 8.72 ಸೆಕೆಂಡು ಗ್ರೆಗ್ ಫೋಸ್ಟರ್ ಅವರಿಂದ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಯುಎಸ್‌ಎಯ (USA) ದಕ್ಷಿಣ ಕೆರೊಲಿನಾದ (South Carolina) ವಿನ್‌ಥ್ರಾಪ್ ವಿಶ್ವವಿದ್ಯಾಲಯವು (Winthrop University) ನಡೆಸಿದ ಪರೀಕ್ಷೆಗಳ ಪ್ರಕಾರ ಜಗತ್ತಿನ ಅತ್ಯಂತ ಖಾರದ ಚಿಲ್ಲಿ ಆಗಿರುವ ಕೆರೊಲಿನಾ ರೀಪರ್ ಪೆಪ್ಪರ್ ಸರಾಸರಿ 1,641,183 ಸ್ಕೋವಿಲ್ಲೆ ಹೀಟ್ ಯೂನಿಟ್‌ಗಳನ್ನು (SHU) ಹೊಂದಿದೆ. ಹಾಗೆಯೇ ಜಲಪೆನೊ ಮೆಣಸು ಸುಮಾರು 2,500 - 8,000 SHU ಅನ್ನು ಹೊಂದಿದೆ ಎಂದು ಗಿನ್ನೆಸ್ ಸಂಸ್ಥೆ ಕಾಮೆಂಟ್‌ಗಳಲ್ಲಿ ತಿಳಿಸಿದೆ.
ವಿಶಿಷ್ಠ ಗಿನ್ನೆಸ್ ದಾಖಲೆ : ಆಕಾಶದೆತ್ತರದಲ್ಲಿ ಹಗ್ಗದ ಮೇಲೆ ನಡೆದ ಯುವಕ
ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಒಂದೇ ಗಿಡದಲ್ಲಿ 1200 ಕ್ಕೂ ಹೆಚ್ಚು ಟೊಮೆಟೊಗಳನ್ನು ಬೆಳೆದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ್ದರು. ಡೌಗ್ಲಾಸ್ ಸ್ಮಿತ್ ಎಂಬ ವ್ಯಕ್ತಿ ಒಂದೇ ಗಿಡದಲ್ಲಿ 1,269 ಟೊಮೆಟೊಗಳನ್ನು ಬೆಳೆದು ತಮ್ಮದೇ ಹೆಸರಿನಲ್ಲಿದ್ದ ಹಳೇ ದಾಖಲೆಯನ್ನು ಮುರಿದಿದ್ದರು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇಡೀ ಜಗತ್ತೇ ಲಾಕ್‌ಡೌನ್ ಆಗಿತ್ತು. ಆ ಸಂದರ್ಭವನ್ನು ಅನೇಕರು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾಗೆಯೇ ಯುಕೆ ನಿವಾಸಿ ಡೌಗ್ಲಾಸ್ ಸ್ಮಿತ್ ಅವರು ತೋಟಗಾರಿಕೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸುವ ಅವಕಾಶ ಪಡೆದು ಈ ಸಾಧನೆ ಮಾಡಿದ್ದಾರೆ. ಇದರ ಪರಿಣಾಮವಾಗಿ, ಸ್ಮಿತ್ 2021 ರಲ್ಲಿ ಒಂದೇ ಗಿಡದಲ್ಲಿ 839 ಟೊಮೆಟೊಗಳನ್ನು ಉತ್ಪಾದಿಸುವ ಟೊಮೆಟೊ ಸಸ್ಯವನ್ನು ಬೆಳೆಸಿದರು. ಇದಾಗಿ ಕೆಲವೇ ತಿಂಗಳುಗಳಲ್ಲಿ, ಅವರು ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಾರೆ.