25 ವರ್ಷಗಳಿಂದ ಮನೆಗೆಲಸ ಮಾಡಿದ ಮಾಜಿ ಪತ್ನಿಗೆ 1.75 ಕೋಟಿ ರೂ. ಪಾವತಿಗೆ ಕೋರ್ಟ್ ಆದೇಶ
25 ವರ್ಷಗಳ ಕಾಲ ಸಂಬಳವಿಲ್ಲದೆ ಮನೆಗೆಲಸ ಮಾಡಿಸಿಕೊಂಡಿದ್ದಕ್ಕೆ 1,80,000 ಪೌಂಡ್ ಪಾವತಿಸಲು ಆದೇಶಿಸಿದೆ. ಸ್ಪೇನ್‌ನಲ್ಲಿ ಈ ಘಟನೆ ನಡೆದಿದ್ದು, ನ್ಯಾಯಾಧೀಶರಾದ ಲಾರಾ ರೂಯಿಜ್ ಅಲಮಿನೋಸ್ ಅವರು ವಿಚ್ಛೇದನದ ಇತ್ಯರ್ಥದ ವೇಳೆ ಈ ದೊಡ್ಡ ಮೊತ್ತವನ್ನು ಪಾವತಿಸಲು ಮೋರಲ್ ಅವರ ಪತಿಗೆ ಸೂಚಿಸಿದರು ಎಂದು ತಿಳಿದುಬಂದಿದೆ.
ಸ್ಪೇನ್ (ಮಾರ್ಚ್ 8, 2023): ಮನೆಕೆಲಸಗಳು ದಿನನಿತ್ಯದ, ಆದರೆ ಅಗತ್ಯವಿರುವ ಕೆಲಸವಾಗಿದೆ. ಲಿಂಗ ಭೇದವಿಲ್ಲದೆ ಮನೆಯಲ್ಲಿ ಎಲ್ಲರೂ ಈ ಕೆಲಸ ಮಾಡಬೇಕಾಗುತ್ತದೆ. ಕೆಲವರಿಗೆ ಇದು ಬೇಸರ ತರಿಸಬಹುದಾದರೂ, ಇನ್ನು ಮನೆಯಲ್ಲಿ ಕೆಲವರು ತಮ್ಮ ಕೆಲಸಗಳನ್ನು ವಿಂಗಡಿಸಿಕೊಂಡು ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳುತ್ತಾರೆ. ಅಂದರೆ, ಒಬ್ಬ ವ್ಯಕ್ತಿಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮನೆಯ ಕೆಲಸವನ್ನು ಆದರ್ಶಪ್ರಾಯವಾಗಿ ವಯಸ್ಕ ಸದಸ್ಯರ ನಡುವೆ ಸಮಾನವಾಗಿ ವಿಂಗಡಿಸಬೇಕು. ಮನೆಯಲ್ಲಿ ಗಂಡ - ಹೆಂಡತಿ ಇಬ್ಬರೇ ಇದ್ದರೆ, ಪಾತ್ರೆ ತೊಳೆಯೋದು, ಟಾಯ್ಲೆಟ್ ಕ್ಲೀನ್ ಮಾಡೋದು, ರೂಮ್ ಸ್ವಚ್ಛಗೊಳಿಸೋದು ಮುಂತಾದ ಕೆಲಸಗಳನ್ನು ಗಂಡ ಮತ್ತು ಹೆಂಡತಿಯ ನಡುವೆ ಸಮಾನವಾಗಿ ಹಂಚಿಕೊಂಡರೆ ಚೆನ್ನಾಗಿರುತ್ತೆ.
ಆದರೆ, ಕೆಲಸದ ಸಮತೋಲನ ಸರಿಯಾಗಿರದಿದ್ದರೆ ಕೆಲವರು ಯಾವುದೇ ದೂರುಗಳಿಲ್ಲದೆ ಇದನ್ನು ಮಾಡಿದರೆ, ಇನ್ನು ಕೆಲವರು ಇದಕ್ಕೆ ತಕ್ಕ ಪ್ರತೀಕಾರವನ್ನೂ ತೆಗೆದುಕೊಳ್ಳುತ್ತಾರೆ. ಇದೇ ರೀತಿ, ಇವಾನಾ ಮೋರಲ್ ಎಂಬ ಮಹಿಳೆ ಎರಡನೇ ವರ್ಗಕ್ಕೆ ಸೇರಿದವರು. ಈ ಮಹಿಳೆ ತಮ್ಮ ಮಾಜಿ ಪತಿಯ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು 25 ವರ್ಷಗಳ ಕಾಲ ಸಂಬಳವಿಲ್ಲದೆ ಮನೆಗೆಲಸ ಮಾಡಿಸಿಕೊಂಡಿದ್ದಕ್ಕೆ 1,80,000 ಪೌಂಡ್ ಪಾವತಿಸಲು ಆದೇಶಿಸಿದೆ. ಸ್ಪೇನ್‌ನಲ್ಲಿ ಈ ಘಟನೆ ನಡೆದಿದ್ದು. ನ್ಯಾಯಾಧೀಶರಾದ ಲಾರಾ ರೂಯಿಜ್ ಅಲಮಿನೋಸ್ ಅವರು ವಿಚ್ಛೇದನದ ಇತ್ಯರ್ಥದ ವೇಳೆ ಈ ದೊಡ್ಡ ಮೊತ್ತವನ್ನು ಪಾವತಿಸಲು ಮೋರಲ್ ಅವರ ಪತಿಗೆ ಸೂಚಿಸಿದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ಅಮ್ಮನ ಬದಲು ಅಪ್ಪನ ಆಯ್ಕೆ ಮಾಡಿದ ಮಗ: 13 ವರ್ಷದ ಬಾಲಕನ ತಂದೆ ಕಸ್ಟಡಿಗೆ ನೀಡಿದ ಕೋರ್ಟ್
ಮಾಜಿ ಪತಿಯೊಂದಿಗೆ ಸಂಸಾರ ನಡೆಸಿದ ವೇಳೆ ನೈತಿಕತೆಯಿಂದ ಪಡೆದ ಕೆಲಸದ ಕನಿಷ್ಠ ವೇತನವನ್ನು ಆಧರಿಸಿ ಈ ದಂಡವನ್ನು ನಿರ್ಧರಿಸಲಾಗಿದೆ ಎಂದು ಮೆಟ್ರೋ ಮಾಧ್ಯಮ ವರದಿ ಮಾಡಿದೆ. ಎರಡು ಮಕ್ಕಳ ತಾಯಿಯಾಗಿರುವ ಮೋರಲ್ ಅವರು ಎರಡು ದಶಕಗಳಿಂದ ಮನೆಯ ಎಲ್ಲಾ ಕೆಲಸಗಳಿಗೆ ಜವಾಬ್ದಾರರಾಗಿದ್ದರು ಎಂಬುದನ್ನು ಸಹ
ನ್ಯಾಯಾಧೀಶರು ಕಂಡುಕೊಂಡರು. ಆ ಮಹಿಳೆ ಮನೆ ಮತ್ತು ಕುಟುಂಬವನ್ನು ನೋಡಿಕೊಳ್ಳುವ ಕೆಲಸವನ್ನೇ ಮಾಡುತ್ತಿದ್ದಳು ಎಂದು ವಿಚ್ಛೇದನದ ತೀರ್ಪು ಹೇಳುತ್ತದೆ.
ಇನ್ನು, ಈ ಸಂಬಂಧ ಕ್ಯಾಡೆನಾ ಸೆರ್ ರೇಡಿಯೋಗೆ ಸಂದರ್ಶನವನ್ನೂ ನೀಡಿದ ಇವಾನಾ ಮೋರಲ್, ತನ್ನ ಪತಿ ತನ್ನ ಮನೆಯೊಳಗೆ ಮತ್ತು ಆಗಾಗ್ಗೆ ಆತನ ಜಿಮ್‌ಗಳಲ್ಲಿ ಸಹ ಕೆಲಸ ಮಾಡಿಸಿಕೊಳ್ಳುತ್ತಿದ್ದರು, ಹೊರಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ ಎಂದೂ ಹೇಳಿಕೊಂಡಿದ್ದಾಳೆ. ನನ್ನ ಪತಿ ಮತ್ತು ಮನೆಯನ್ನು ನೋಡಿಕೊಳ್ಳುತ್ತಿದ್ದ ನಾನು ಮನೆಗೆಲಸಕ್ಕೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ. ಅವರು ನನ್ನನ್ನು ಮನೆಗೆಲಸ ಮಾಡುವ ನಿರ್ದಿಷ್ಟ ಪಾತ್ರ ವಹಿಸುವಂತೆ ಮಾಡಿದರು. ನಾನು ನಿಜವಾಗಿಯೂ ಬೇರೆ ಏನೂ ಕೆಲಸ ಮಾಡಲು ಸಾಧ್ಯವಾಗದ ಸ್ಥಳದಲ್ಲಿದ್ದೆ ಎಂದೂ ಮಹಿಳೆ ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ವಿವಾಹಿತನಿಗೆ ಐ ಲವ್ ಯೂ ಎಂದ AI Chatbot: ಪತ್ನಿಗೆ ವಿಚ್ಛೇದನ ನೀಡಲೂ ಮನವಿ..!
ಮೋರಲ್ ಮತ್ತು ಆಕೆಯ ಪತಿಯ ವಿವಾಹವು ಆಸ್ತಿಯ ಬೇರ್ಪಡಿಕೆಯಿಂದ ನಿಯಂತ್ರಿಸಲ್ಪಡುತ್ತದೆ ಎಂದು ವರದಿಗಳು ಹೇಳಿದ್ದು, ಇದರ ಪರಿಣಾಮವಾಗಿ, ಮೋರಲ್ ತನ್ನ ಮಾಜಿ ಪತಿಯೊಂದಿಗೆ ವರ್ಷಗಳಿಂದ ಸಂಪಾದಿಸಿದ ಹಣಕ್ಕೆ ಪ್ರವೇಶವಿರಲಿಲ್ಲ ಎಂದು ತಿಳಿದುಬಂದಿದೆ. ತನ್ನ ಮನೆಯ ಹೊರಗೆ ಕೆಲಸ ಮಾಡಲು ಪತಿ ಬಯಸುತ್ತಿರಲಿಲ್ಲ. ಆದರೆ ತನ್ನನ್ನು 'ಸಾರ್ವಜನಿಕ ಸಂಬಂಧಗಳನ್ನು ನಿರ್ವಹಿಸಲು ಮತ್ತು ತನ್ನ ಗಂಡನ ಜಿಮ್‌ಗಳಲ್ಲಿ ಮಾನಿಟರ್ ಆಗಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು ಎಂದೂ ತಿಳಿದುಬಂದಿದೆ.
ಮಾಜಿ ಪತಿ ತಮ್ಮ ಹೆಣ್ಣುಮಕ್ಕಳಿಗೆ ಮಾಸಿಕ ಶಿಶುಪಾಲನಾ ಶುಲ್ಕವನ್ನು ಪಾವತಿಸಬೇಕು ಎಂದು ಸಹ ದಕ್ಷಿಣ ಸ್ಪೇನ್‌ನ ವೆಲೆಜ್-ಮಲಗಾ ನ್ಯಾಯಾಲಯ ಆದೇಶಿಸಿದ್ದು,ಅವರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗಂಡ ಹೆಂಡ್ತೀನ ಒಂದು ಮಾಡುತ್ತಂತೆ ಈ ಸ್ಲೀಪ್ ಡಿವೋರ್ಸ್!