ಗೆಳತಿಯ ಬ್ಯಾಂಕ್ ಅಕೌಂಟ್‌ಗೆ ಹಾಕಿಸಲಾಗಿದ್ದ ಲಾಟರಿ ಹಣ ಹಾಕಿದ ಯುವಕನಿಗೆ ಮೋಸ. 30 ಕೋಟಿ ರೂ. ಲಾಟರಿ ಹಣದೊಂದಿಗೆ ಮತ್ತೊಬ್ಬನೊಂದಿಗೆ ಪರಾರಿ.

'ಬಡವನಾದರೂ ಏನು ಪ್ರಿಯೆ ಕೈ-ತುತ್ತು ತಿನಿಸುವೆ' ಎನ್ನುವಂತೆ ಬಡತನದಲ್ಲಿದ್ದರೂ ಅಪಾರ ಪ್ರೀತಿ ತೋರಿಸುತ್ತಾ ಹುಡುಗಿಯೊಂದಿಗೆ ನಂಬಿಕೆ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಯುವಕನಿಗೆ ಬರೋಬ್ಬರಿ 30 ಕೋಟಿ ರೂ. ಮೋಸ ನಡೆದು ಹೋಗಿದೆ. ಲಾಟರಿಯಲ್ಲಿ ಗೆದ್ದ ಹಣವನ್ನು ಯುವತಿಯ ಬ್ಯಾಂಕ್ ಖಾತೆಗೆ ಹಾಕಿದರೆ, ಆಕೆ ಮತ್ತೊಬ್ಬ ಯುವಕನೊಂದಿಗೆ ಹಣದ ಸಮೇತ ಪರಾರಿ ಆಗಿದ್ದಾಳೆ. ಇದೀಗ ಹಣವೂ ಇಲ್ಲದೆ, ಹುಡುಗಿಯೂ ಇಲ್ಲದೆ ಲಾಟರಿ ಗೆದ್ದ ಯುವಕ ಪರದಾಡುತ್ತಿದ್ದಾನೆ.

ಲಾಟರಿ ಬಹುಮಾನದಲ್ಲಿ ಗೆದ್ದ 50 ಲಕ್ಷ ಕೆನಡಿಯನ್ ಡಾಲರ್ (ರೂ. 30 ಕೋಟಿ) ತನ್ನ ಗೆಳತಿಗೆ ಕೊಟ್ಟ ಯುವಕನಿಗೆ ಮೋಸವಾಗಿದೆ. ಲಾಟರಿ ಹಣದೊಂದಿಗೆ ಮತ್ತೊಬ್ಬ ಯುವಕನೊಂದಿಗೆ ಓಡಿಹೋಗಿದ್ದಾಳೆ. ಬಹುಮಾನದ ಹಣದೊಂದಿಗೆ ತನ್ನ ಗೆಳೆಯನೊಂದಿಗೆ ಓಡಿಹೋದ ತನ್ನ ಮಾಜಿ ಗೆಳತಿಯ ವಿರುದ್ಧ ಯುವಕ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಈ ಘಟನೆ ಕೆನಡಾದಲ್ಲಿ ನಡೆದಿದೆ. ಕೆನಡಾದ ವಿನ್ನಿಪೆಗ್‌ನ ಲಾರೆನ್ಸ್ ಕ್ಯಾಂಪ್‌ಬೆಲ್ ಅತಿ ದೊಡ್ಡ ಬಹುಮಾನವನ್ನು ಪಡೆದರು. ಕಳೆದ ವರ್ಷ ಲಾಟರಿ ಗೆದ್ದಿತ್ತು. ಆದಾಗ್ಯೂ, ಲಾರೆನ್ಸ್ ಬಳಿ ಹಣವನ್ನು ಸ್ವೀಕರಿಸಲು ಅಗತ್ಯವಾದ ಗುರುತಿನ ದಾಖಲೆಗಳು ಇರಲಿಲ್ಲ. ಆದ್ದರಿಂದ ಲಾಟರಿ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಿ, ಲಾರೆನ್ಸ್ ತನ್ನ ಮಾಜಿ ಗೆಳತಿ ಕ್ರಿಸ್ಟಲ್ ಆನ್ ಮೆಕ್ಕೇ ಅವರ ಹೆಸರು ಹಾಗೂ ಬ್ಯಾಂಕ್ ಖಾತೆಯನ್ನು ಕೊಟ್ಟು ಹಣ ಹಾಕಿಸಿದ್ದರು. ಆದಾಗ್ಯೂ, ವೆಸ್ಟರ್ನ್ ಕೆನಡಾ ಲಾಟರಿ ಕಾರ್ಪೊರೇಷನ್ (WCLC) ನಿಂದ ಬಹುಮಾನದ ಹಣವನ್ನು ಖರೀದಿಸಿದ ಕ್ರಿಸ್ಟಲ್, ಇನ್ನೊಬ್ಬ ಪ್ರೇಮಿಯೊಂದಿಗೆ ಬಹುಮಾನದ ಹಣದೊಂದಿಗೆ ನಾಪತ್ತೆಯಾದರು.

ಲಾರೆನ್ಸ್ ತನ್ನ ಗೆಳತಿಯನ್ನು ಸಂಪೂರ್ಣವಾಗಿ ನಂಬಿದ್ದಾಗಿ ಹೇಳಿದರು. ನಾವು ಸುಮಾರು ಒಂದೂವರೆ ವರ್ಷಗಳ ಕಾಲ ಜೊತೆಯಲ್ಲಿಯೇ ವಾಸ ಮಾಡುತ್ತಿದ್ದೆವು. ನಾನು ಬ್ಯಾಂಕ್ ಖಾತೆ ಹೊಂದಿಲ್ಲದ ಕಾರಣ, ಕ್ರಿಸ್ಟಲ್ ಖಾತೆಗೆ ಹಣವನ್ನು ಜಮಾ ಮಾಡಿಸಲಾಗಿತ್ತು ಎಂದು ಲಾರೆನ್ಸ್ ಹೇಳಿದರು. ಲಾಟರಿ ಗೆದ್ದ ಮೇಲೆ ಮತ್ತೆ ಇಂತಹದೇ ಲಾಟರಿ ಟಿಕೆಟ್‌ಗಳನ್ನು ತಗೋಳೋಣ ಅಂತ ಕ್ರಿಸ್ಟಲ್ ಒತ್ತಾಯ ಮಾಡಿದ್ದಳಂತೆ. ಆದರೆ ಹಣ ಬಂದು ಕೆಲವೇ ದಿನಗಳಲ್ಲಿ ಕ್ರಿಸ್ಟಲ್ ನಾಪತ್ತೆಯಾಗಿದ್ದಾಳೆ. ಆಕೆಯನ್ನು ಎಷ್ಟೇ ಹುಡುಕಾಟ ಮಾಡಿದರೂ ಆಕೆ ಸಿಗಲಿಲ್ಲ. ಬೇರೆಯವರ ಸಹಾಯ ಪಡೆದು ಹುಡುಕಿದ ನಂತರ ಆಕೆ ಮತ್ತೊಬ್ಬನ ಜೊತೆ ಇರುವುದು ಗೊತ್ತಾಗಿದೆ. ಆದರೆ, ಕ್ರಿಸ್ಟಲ್ ಮತ್ತು ಆಕೆಯ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಡಬ್ಲ್ಯೂಸಿಎಲ್‌ಸಿ ವಿರುದ್ಧವೂ ಲಾರೆನ್ಸ್ ದೂರು ನೀಡಿದ್ದಾನೆ. ಸರಿಯಾದ ದಾಖಲೆಗಳಿಲ್ಲ ಎಂದು ಹೇಳಿದ ಮೇಲೆ ತಪ್ಪು ಸಲಹೆ ಕೊಟ್ಟು ಡಬ್ಲ್ಯೂಸಿಎಲ್‌ಸಿ ಮೋಸ ಮಾಡಿದೆ ಅಂತ ಲಾರೆನ್ಸ್ ಹೇಳಿದ್ದಾನೆ.