KBC Lottery Fraud: ಲಾಟರಿ ಹೆಸರಲ್ಲಿ 100ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರ ಬಂಧನ
KBC Lottery Fraud: 'ಕೌನ್ ಬನೇಗಾ ಕರೋಡ್ಪತಿ' ಲಾಟರಿ ಬಹುಮಾನವಾಗಿ 25 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ನಂಬಿಸಿ 100 ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ
ನವದೆಹಲಿ (ಮೇ 31): 'ಕೌನ್ ಬನೇಗಾ ಕರೋಡ್ಪತಿ' (Kaun Banega Crorepati) ಲಾಟರಿ ಬಹುಮಾನವಾಗಿ 25 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ನಂಬಿಸಿ 100 ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿಗಳನ್ನು ಬಿಹಾರದ ಭೋಜ್‌ಪುರ ಜಿಲ್ಲೆಯ ನಿವಾಸಿ ಪ್ರಣವ್ ಕುಮಾರ್ ಮಿಶ್ರಾ (23) ಮತ್ತು ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ನಿವಾಸಿ ಗೌತಮ್ ಪ್ರಸಾದ್ ಯಾದವ್ (29) ಎಂದು ಗುರುತಿಸಲಾಗಿದೆ. ಇವರಿಬ್ಬರು ಈ ಹಿಂದೆ ಹರಿಯಾಣದಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದರು. ದೆಹಲಿಗೆ ಬಂದ ನಂತರ ವಜೀರಾಬಾದ್ ಪ್ರದೇಶದಿಂದ ಇದೇ ರೀತಿಯಲ್ಲಿ ಕಾರ್ಯಾಚರಣೆ ಆರಂಭಿಸಿ ಕಳೆದ ಒಂಬತ್ತು ತಿಂಗಳಲ್ಲಿ 100ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಜೀರ್‌ಪುರ ಪ್ರದೇಶದ ನಿವಾಸಿಯೊಬ್ಬರು "ಮಾರ್ಚ್ 4 ರಂದು ಅವರ ಪತ್ನಿಗೆ ವಾಟ್ಸಾಪ್ ಸಂದೇಶ ಮತ್ತು ಅಪರಿಚಿತ ಸಂಖ್ಯೆಯಿಂದ ಆಡಿಯೊ ರೆಕಾರ್ಡಿಂಗ್ ಬಂದಿದ್ದು, ಆಕೆಯ ಮೊಬೈಲ್ ಸಂಖ್ಯೆಯನ್ನು 25 ಲಕ್ಷ ರೂಪಾಯಿಗಳ ಕೆಬಿಸಿ ಲಾಟರಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿತ್ತು" ಎಂದು ಹೇಳಿದ್ದಾರೆ.
ಆರೋಪಿಯು ತನ್ನ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಕಳುಹಿಸಲು ಕೇಳಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಮರುದಿನ ಆಕೆಗೆ ಕರೆ ಮಾಡಿ ಲಾಟರಿ ಬಹುಮಾನ ಪಡೆಯಲು 10,200 ಮತ್ತು 2000 ರೂ.ಗಳನ್ನು ಸರ್ಕಾರದ ತೆರಿಗೆಯಾಗಿ ಪಾವತಿಸುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ: ಹಣ ಡಬಲ್ ಮಾಡಿಕೊಡುವುದಾಗಿ ವಂಚನೆ: ಮನಿ ಡಬಲಿಂಗ್ ಗ್ಯಾಂಗ್ ಸೆರೆ
ಮಹಿಳೆ ಎಸ್‌ಬಿಐ ಖಾತೆಗೆ 12,200 ರೂ ವರ್ಗಾಯಿಸಿದ್ದಾರೆ. ಇದಾದ ನಂತರ ಆರೋಪಿಯು ಮತ್ತೆ ಕೆಲವು ಸರ್ಕಾರಿ ತೆರಿಗೆಗಳನ್ನು ತೆರವುಗೊಳಿಸಲು 25,000 ರೂ ವರ್ಗಾಯಿಸುವಂತೆ ಕೇಳಿದ್ದಾರೆ. ಆಗ ತಾನು ಅವರಿಂದ ವಂಚನೆಗೊಳಗಾಗಿರುವುದು ಅರಿವಾಯಿತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮ ತಂಡವು ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಉಪ ಪೊಲೀಸ್ ಆಯುಕ್ತ (ವಾಯುವ್ಯ) ಉಷಾ ರಂಗಾನಿ ತಿಳಿಸಿದ್ದಾರೆ.
ಕೆಬಿಸಿ ಲಾಟರಿ ಬಹುಮಾನವನ್ನು ಕಳುಹಿಸುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದರು ಮತ್ತು ಅದೇ ವಿಧಾನವನ್ನು ಬಳಸುತ್ತಿದ್ದರು ಎಂದು ಆರೋಪಿಗಳು ಬಹಿರಂಗಪಡಿಸಿದ್ದಾರೆ. ಹಣ ಪಡೆದ ನಂತರ ಅವರು ಜನರ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Online ವಂಚನೆ, Virtual ಜಗತ್ತಿನ ಬಣ್ಣದ ಮಾತಿಗೆ ಮರಳಾಗೋ ಮುನ್ನ ಇರಲಿ ಎಚ್ಚರ!
"ಆರೋಪಿ ಪ್ರಣವ್ ಸಂತ್ರಸ್ತರಿಗೆ ಕರೆ ಮಾಡಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಗೌತಮ್ ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಿ ಡೆಬಿಟ್ ಕಾರ್ಡ್‌ಗಳ ಮೂಲಕ ಹಣವನ್ನು ಹಿಂಪಡೆಯುತ್ತಾರೆ. ಅವರು ಜನರಿಗೆ ವಂಚಿಸಿದ ನಂತರ ಸಿಮ್ ಕಾರ್ಡ್ ನಾಶಪಡಿಸಿದ್ದಾರೆ ಅಲ್ಲದೇ ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್ ಪಡೆದಿದ್ದಾರೆ’’ ಎಂದು ಡಿಸಿಪಿ ತಿಳಿಸಿದ್ದಾರೆ.
ಆರೋಪಿಗಳಿಂದ ಐದು ಮೊಬೈಲ್ ಫೋನ್ ಗಳು, 33 ಸಿಮ್ ಕಾರ್ಡ್, 11 ಡೆಬಿಟ್ ಕಾರ್ಡ್, ಐದು ಬ್ಯಾಂಕ್ ಪಾಸ್ ಬುಕ್ ಹಾಗೂ ಇತರೆ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.