ಗಿಡುಗನಿಗೂ ಪಾಸ್‌ಪೋರ್ಟ್ ಸಿದ್ಧವಾಗಿದ್ದು, ಇನ್ಮುಂದೆ ಆಕಾಶದಲ್ಲಿ ತಾನಾಗಿಯೇ ಹಾರಾಡುವ ಬದಲು ವಿಮಾನದ ಒಳಗೆ ಇದು ಪ್ರಯಾಣಿಸಲಿದೆ. ಏನಿದು ಇಂಟರೆಸ್ಟಿಂಗ್ ಸ್ಟೋರಿ?
ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಎಂದರೇನೇ ಅಲ್ಲಿ ಶ್ರೀಮಂತ ಅರಬರ ದರ್ಬಾರೇ ಹೆಚ್ಚು ಎನ್ನುವಂತಿದೆ. ಅಲ್ಲಿಯ ಜನ ಐಷಾರಾಮಿ ಜೀವನಶೈಲಿಗೆ ಸಕತ್ ಫೇಮಸ್ ಆಗಿದ್ದಾರೆ. ಭಾರತದಲ್ಲಿ ವಿವಿಧ ಜಾತಿಯ ನಾಯಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮಾಲೀಕರು ಇದ್ದರೆ, ಯುಎಇನಲ್ಲಿ ವಿಭಿನ್ನ ರೀತಿಯ ಪ್ರಾಣಿ-ಪಕ್ಷಿಗಲನ್ನು ಸಾಕುತ್ತಾರೆ. ಇದೀಗ ಅಂಥದ್ದೇ ಶ್ರೀಮಂತನೊಬ್ಬ ಗಿಡುಗಕ್ಕೂ ಪಾಸ್‌ಪೋರ್ಟ್ ಮಾಡಿಸಿದ್ದಾನೆ. ಇನ್ಮುಂದೆ ಗಿಡುಗ ಆಕಾಶದ ಬದ್ಲು ವಿಮಾನದಲ್ಲಿ ಹಾರಾಡುತ್ತದೆ! ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಗಿಡುಗನಿಗೆ ಪಾಸ್‌ಪೋರ್ಟ್ ಮಾಡಿಸಿರುವ ವ್ಯಕ್ತಿಯೊಬ್ಬರು ಅದರೊಂದಿಗೆ ಮೊರಾಕೊ ದೇಶಕ್ಕೆ ಟ್ರಿಪ್ ಹೊರಟಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಬುಧಾಬಿಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ನಿವಾಸಿಯೊಬ್ಬ ಗಿಡುಗವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಂಡ ವಿದೇಶಿ ಪ್ರವಾಸಿಗನೊಬ್ಬ ಗಿಡುಗವನ್ನು ನೋಡಿ ಅಚ್ಚರಿಗೊಂಡು ಈ ವಿಷಯವನ್ನು ಕೇಳಿದ್ದಾರೆ. ಈ ಗಿಡುಗ ಇಲ್ಯಾಕೆ ಬಂತು? ಅದು ಕೂಡ ನಿಮ್ಮೊಂದಿಗೆ ವಿಮಾನದಲ್ಲಿ ಬರುತ್ತಿದೆಯೇ? ಇದಕ್ಕೂ ಪಾಸ್‌ಪೋರ್ಟ್ ಇದೆಯೇ? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಆ ವ್ಯಕ್ತಿ, ಗಿಡುಗ ನನ್ನ ಜೊತೆ ವಿದೇಶಕ್ಕೆ ಬರುತ್ತಿದೆ. ಅದಕ್ಕೆ ಪಾಸ್‌ಪೋರ್ಟ್ ಇದೆ. ನಾನು ಅದರೊಂದಿಗೆ ಮೊರಾಕೊ ದೇಶಕ್ಕೆ ಟ್ರಿಪ್ ಹೊರಟಿದ್ದೇನೆ ಎಂದಾಗ ಆ ವ್ಯಕ್ತಿಗೆ ಶಾಕ್ ಆಗಿದೆ. ಇವರು ತಮಾಷೆಗೆ ಹೇಳಿರಬಹುದು ಎಂದುಕೊಂಡು ನಿಜಕ್ಕೂನಾ ಎಂದಾಗ, ಆ ವ್ಯಕ್ತಿ ಹಕ್ಕಿಯ ಪಾಸ್ ಪೋರ್ಟ್ ತೋರಿಸಿದ್ದಾನೆ. ಈ ಕುರಿತ ವಿಡಿಯೋವನ್ನು uaefalcons_ ಹೆಸರಿನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಇದಾಗಲೇ ವಿಡಿಯೋ 2.5 ಮಿಲಿಯನ್ಗೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. ಗಿಡುಗನ ಅದೃಷ್ಟ ನೋಡಿ ಎಂದು ಹಲವರು ಹೇಳಿದರೆ, ಗಿಡುಗ ವಿಮಾನದಿಂದ ಹೊರಕ್ಕೆ ಹಾರಿ ಹೋದರೆ ಏನು ಮಾಡುವುದು ಎಂದುಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಪ್ರಾಣಿ-ಪಕ್ಷಿಗಳನ್ನು ಈ ರೀತಿ ತೆಗೆದುಕೊಂಡು ಹೋಗುವ ಅವಕಾಶ ವಿಮಾನದಲ್ಲಿ ಇದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ. ವಾಸ್ತವವಾಗಿ, ಮಧ್ಯಪ್ರಾಚ್ಯದ ಕೆಲವು ಪ್ರಮುಖ ವಿಮಾನಯಾನ ಸಂಸ್ಥೆಗಳು ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ಕ್ಯಾಬಿನ್‌ನಲ್ಲಿ ಗಿಡುಗಗಳನ್ನು ಅನುಮತಿಸುತ್ತವೆ. ಮತ್ತು ತಮ್ಮದೇ ಆದ ಪ್ರಯಾಣ ದಾಖಲೆಗಳೊಂದಿಗೆ, ಇವುಗಳಿಗೆ ಅವಕಾಶವಿದೆ.
