ಅಮೆರಿಕದಲ್ಲಿ ಕೋಳಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಗನ್ ತೋರಿಸಿ ಕಳ್ಳನನ್ನು ಬಂಧಿಸಿದ್ದಾರೆ. ಮಾಜಿ ಗೆಳತಿಯ ಕೋಳಿ ಕದ್ದ ವ್ಯಕ್ತಿಯ ಬಂಧನದ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ನಮ್ಮಲ್ಲಿ ಕೊಲೆ ಗಡುಕರನ್ನು, ಪೊಲೀಸರ ಮೇಲೆ ದಾಳಿಗೆ ಮುಂದಾಗುವವರನ್ನು ಬಂದೂಕು ತೋರಿಸಿ ಬಂಧಿಸುವುದನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಂದು ಕಡೆ ಪೊಲೀಸರು ಕೋಳಿ ಕಳ್ಳನನ್ನು ಗನ್ ತೋರಿಸಿ ಬಂಧಿಸಿದ್ದಾರೆ. ಈ ಘಟನೆಯ ದೃಶ್ಯಗಳು ಪೊಲೀಸರ ದೇಹಕ್ಕೆ ಅಳವಡಿಸಿಕೊಂಡಿರುವ ಬಾಡಿಕ್ಯಾಮ್‌ನಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಅಮೆರಿಕದಾದ ವಾಷಿಂಗ್ಟನ್‌ನ ಕಿಟ್ಸಾಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಜಿ ಗರ್ಲ್‌ಫ್ರೆಂಡ್‌ನ ಕೋಳಿಯನ್ನು ಕದ್ದ ವ್ಯಕ್ತಿಯನ್ನು ಪೊಲೀಸರು ಬಂದೂಕು ತೋರಿಸಿ ಬಂಧಿಸಿದ್ದಾರೆ. ಈ ಕಳ್ಳನಿಗೆ 50 ವರ್ಷ ಪ್ರಾಯವಾಗಿದ್ದು, ಆತನನ್ನು ಪೊಲೀಸರು ಗನ್ ತೋರಿಸಿ ಸೆರೆ ಹಿಡಿದು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಹೋಗುತ್ತಿರುವ ವೀಡಿಯೋ ಈಗ ಸಖತ್ ವೈರಲ್ ಆಗಿದೆ. ಈತ ತನ್ನ ಮಾಜಿ ಗೆಳತಿಯ ಮನೆಗೆ ಅಕ್ರಮವಾಗಿ ನುಗ್ಗಿಕೋಳಿಯನ್ನು ಕದ್ದಿದ್ದಾನೆ ಎಂದು ವರದಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ನಗೆ ಉಕ್ಕಿಸಿದೆ.
ಮನುಷ್ಯರಂತೆ ಮರಾಠಿ ಮಾತನಾಡುತ್ತೆ 3 ವರ್ಷದ ಹಿಂದೆ ಮಹಿಳೆ ರಕ್ಷಿಸಿದ ಕಾಗೆ: ವಿಡಿಯೋ
ತನ್ನ ಮಾಜಿ ಪ್ರಿಯಕರ ಹಿಂಬಾಗಿಲು ಒಡೆದು ಮನೆಗೆ ಅಕ್ರಮವಾಗಿ ನುಗ್ಗಿ ತನ್ನ ಪೋಲಿ ಎಂಬ ಕೋಳಿಯನ್ನು ಕದ್ದೊಯ್ದಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಕೋಳಿ ಕೂಗಿದ ಸದ್ದು ಕೇಳಿ ನಾನು ಮನೆಯ ಹಿಂದೆ ಹೋದಾಗ, ಆತನ, 'ನನ್ನ ಬಳಿ ಪೋಲಿ ಇದೆ' ಎಂದು ಜೋರಾಗಿ ಕೂಗುತ್ತಾ ಕೋಳಿಯೊಂದಿಗೆ ಮನೆಯಿಂದ ಓಡಿಹೋದನೆಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೋಳಿ ಕಳ್ಳನನ್ನು ಆ ಪ್ರದೇಶದ ಪೊದೆಯೊಂದರಲ್ಲಿ ಅಡಗಿರುವುದನ್ನು ಪತ್ತೆ ಮಾಡಿದ್ದರು. ಬಳಿಕ ಆತನಿಗೆ ಶರಣಾಗುವಂತೆ ಪೊಲೀಸರು ಮನವಿ ಮಾಡಿದ್ದು, ಪೊಲೀಸರು ಮತ್ತು ಕೋಳಿ ಕಳ್ಳನ ನಡುವಿನ ಸಂಭಾಷಣೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪೊಲೀಸರು ಬಂದೂಕು ಕೈಯಲ್ಲಿ ಹಿಡಿದು ನಿಮ್ಮ ಕೈ ತೋರಿಸಿ. ಕೋಳಿ ನಿಮ್ಮೊಂದಿಗಿದೆಯೇ ಎಂದು ಕೇಳುವ ಮೂಲಕ ಪೊಲೀಸರ ವಿಡಿಯೋ ಪ್ರಾರಂಭವಾಗುತ್ತದೆ. ಈ ವೇಳೆ ಪೊದೆಯಿಂದ ಒಬ್ಬ ವ್ಯಕ್ತಿ ಕೋಳಿಯೊಂದಿಗೆ ನಿಧಾನವಾಗಿ ಮುಂದೆ ಬರುವುದು ಕಾಣಬಹುದು. ಪೊಲೀಸರು ಹತ್ತಿರ ಬರುತ್ತಿದ್ದಂತೆ ಆತ 'ನನ್ನ ಕೋಳಿ' ಎಂದು ಹೇಳಿ ಅಳುತ್ತಿರುವುದು ಕೇಳಿಸುತ್ತದೆ. ನಂತರ ಪೊಲೀಸರು ಕಾರಿನ ಹಿಂಭಾಗದ ಸೀಟಿನಲ್ಲಿ ಆತ ಕೋಳಿಯನ್ನು ಇಡುತ್ತಾರೆ. ಮತ್ತು ಆತನನ್ನು ತಮ್ಮ ಕಾರಿಗೆ ಹತ್ತಿಸುತ್ತಾರೆ. ರಕ್ಷಣಾ ಕಾನೂನು ಉಲ್ಲಂಘಿಸಿದ ಮತ್ತು ಮನೆಗೆ ಅಕ್ರಮವಾಗಿ ನುಗ್ಗಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವಿಡಿಯೋದಲ್ಲಿ ತಿಳಿಸಿದ್ದಾರೆ. ಕೋಳಿ ಪೋಲಿಯನ್ನು ಗಾಯಗಳಿಲ್ಲದೆ ಅದರ ಮಾಲೀಕರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸರು ವಿಡಿಯೋದಲ್ಲಿ ಹೇಳಿದ್ದಾರೆ.
