ಟಿವಿಲಿ ಡೈನೋಸಾರ್ ನೋಡಿ ಶಾಕ್ ಆದ ಪುಟಾಣಿ: ವಿಡಿಯೋ
- ಡೈನೋಸಾರ್ ನೋಡಿ ಗಾಬರಿಯಾದ ಬಾಲಕಿ
- ಪುಟ್ಟ ಮಗುವಿನ ವಿಡಿಯೋ ವೈರಲ್
ಹಾಲುಗಲ್ಲದ ಮಕ್ಕಳಿಗೆ ಪ್ರತಿಯೊಂದು ಕೂಡ ಹೊಸದ್ದೆ. ಮೊದಲ ಬಾರಿ ಪ್ರಾಣಿಗಳನ್ನು ನೋಡಿದಾಗ ಮಕ್ಕಳು ಗಾಬರಿಯಾಗುವುದು ಸಾಮಾನ್ಯ. ನಾಯಿ ಬೆಕ್ಕುಗಳನ್ನು ನೋಡಿದರೆ ಮಕ್ಕಳು ಖುಷಿ ಪಡುತ್ತವೆ. ಆದರೆ ಇಲ್ಲೊಬ್ಬಳು ಪುಟ್ಟ ಬಾಲಕಿ ಟಿವಿ ಪರದೆ ಮೇಲೆ ಡೈನೋಸರ್ ನೋಡಿ ಗಾಬರಿಯಾಗಿದ್ದು, ಎರಡು ವರ್ಷದ ಕಂದನ ಪುಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2 ವರ್ಷದ ಮಗು ಟಿವಿಯಲ್ಲಿ ಜುರಾಸಿಕ್ ಪಾರ್ಕ್ (Jurassic Park) ಸಿನಿಮಾ ವೀಕ್ಷಿಸುತ್ತಿದ್ದು ಈ ವೇಳೆ ಟಿವಿ (TV) ಪರದೆಯಲ್ಲಿ ದೈತ್ಯಗಾತ್ರದ ಡೈನೋಸಾರ್‌ಗಳು ಬರುತ್ತಿದ್ದಂತೆ ಅವಳು ಭಯ ಮತ್ತು ವಿಸ್ಮಯದಿಂದ ಬಾಯ್ತೆರೆದು ನಿಲ್ಲುತ್ತಾಳೆ. ಒಂದು ಕ್ಷಣವಂತು ಕಿರುಚುತ್ತಾ ಬೇರೆಡೆಗೆ ಓಡುವ ಆಕೆ ಮತ್ತೆ ಬಂದು ಅದೇ ಕತೂಹಲದಿಂದ ನೋಡುತ್ತಾಳೆ. ಭಯಗೊಂಡಿದ್ದರೂ ಮುದ್ದಾಗಿ ಕಾಣಿಸುವ ಆಕೆಯ ವಿಡಿಯೋ ಎಲ್ಲರನ್ನು ಬೆರಗುಗೊಳಿಸುತ್ತಿದೆ. ಇವಳ ಈ ಪ್ರತಿಕ್ರಿಯೆ ಈ ವಿಡಿಯೋ ನೋಡುವ ಬಹುತೇಕರಿಗೆ ತಮ್ಮ ಬಾಲ್ಯವನ್ನು ನೆನಪು ಮಾಡಿಸುವುದರಲ್ಲಿ ಸಂಶಯವೇ ಇಲ್ಲ.
ಸಾಮಾಜಿಕ ಜಾಲತಾಣವಾದ(social media) ರೆಡಿಟ್‌ನಲ್ಲಿ ಮೊದಲ ಬಾರಿ ಡೈನೋಸಾರ್ (Dinosaurs) ನೋಡಿದ ನನ್ನ ಎರಡು ವರ್ಷದ ಮಗಳ ಪ್ರತಿಕ್ರಿಯೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಭಿನ್ನ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಜವಾಗಿಯೂ ಮುದ್ದಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ನೀನು ನನ್ನ ಇಡೀ ದಿವಸವನ್ನು ಇನ್ನಷ್ಟು ಉತ್ತಮಗೊಳಿಸಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮೊದಲ ಬಾರಿ ರೈಲು ನೋಡಿ ಸಂಭ್ರಮಿಸಿದ ಬಾಲಕಿ; ವಿಡಿಯೋ ವೈರಲ್!
ಕಳೆದ ವರ್ಷ ಚಿತ್ರದಲ್ಲಿ ಮಾತ್ರ ನೋಡಿದ್ದ ರೈಲನ್ನು (Train) ಮೊದಲ ಬಾರಿಗೆ ನಿಜವಾಗಿ ನೋಡಿದ ಪುಟಾಣಿ ಬಾಲಕಿಯ ವಿಡಿಯೋ ವೈರಲ್ ಆಗಿತ್ತು. ಬ್ರಿಯಾನ್ ರೊಮೇಲ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಪುಟಾಣಿ ಬಾಲಕಿಯ ವಿಡಿಯೋ ಪೋಸ್ಟ್ ಮಾಡಿದ್ದರು. ಬಾಲಕಿ ರೈಲು ಬರುವುದನ್ನು ಕಾಯುತ್ತ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾಳೆ ವಿಡಿಯೋ ರೆಕಾರ್ಡ್ ಮಾಡಿದಾತ ಬರುತ್ತಿರುವುದೇನು? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ರೈಲು ಎಂದು ಉತ್ತರಿಸಿದ ಬಾಲಕಿ ಅಷ್ಟೇ ಸಂತಸದಿಂದ ರೈಲು ನೋಡಿ ಸಂಭ್ರಮಿಸಿದ್ದಾಳೆ.
ಚೀನಾದಲ್ಲಿ ನೀಲಿ ತಿಮಿಂಗಿಲದಷ್ಟು ದೊಡ್ಡ ಎರಡು ಹೊಸ ಡೈನೋಸಾರ್ ಪಳಿಯುಳಿಕೆ ಪತ್ತೆ
ಮಗುವಿನ ಕಣ್ಣಿನ ಮೂಲಕ ಜಗತ್ತನ್ನು ನೋಡುವುದು,ಮೊದಲ ಬಾರಿಗೆ ರೈಲು ನೋಡಿದ ಸಂಭ್ರಮ ಅವಳಿಗೆ ಎಂದು ಬ್ರಿಯಾನ್ ಟ್ವೀಟ್ ಮಾಡಿದ್ದಾರೆ. ಈ ಬಾಲಕಿ ವಿಡಿಯೋಗೆ ಭಾರಿ ಮೆಚ್ಚುಗೆ ಬಂದಿದೆ. ಮುಗ್ದ ಬಾಲಕಿಯ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಇದು ಅಲ್ಲದೇ ಈ ಹಿಂದೆ ಶ್ವಾನವೊಂದನ್ನು ಮೊದಲ ಬಾರಿ ನೋಡಿದ ಮಗುವೊಂದು ಅದನ್ನು ಅಪ್ಪಿ ಮುದ್ದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶ್ವಾನವೂ ಕೂಡ ಅಷ್ಟೇ ಮುದ್ದಾದ ನೋಟದಿಂದ ಮಗುವನ್ನು ಸ್ವಾಗತಿಸಿತ್ತು. ಈ ವೇಳೆ ನಾಯಿ ಮಗುವಿನ ಮುಖವನ್ನು ನೆಕ್ಕಿ ಮುದ್ದು ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಒಮ್ಮೆ ಗಾಬರಿಯಾದ ಮಗು ಕೂಡಲೇ ಅಲ್ಲಿಂದ ಎದ್ದು ಮತ್ತೆ ನಾಯಿಯ ಮುಖವನ್ನು ಮುಟ್ಟಿ ಮುದ್ದು ಮಾಡಲು ಶುರು ಮಾಡುತ್ತದೆ. ಈ ವೇಳೆ ಕುಳಿತಿದ್ದ ನಾಯಿ ಮತ್ತೆ ಎದ್ದು ಮಗುವಿನ ಮುಖ ನೆಕ್ಕಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಆದರೆ ಮತ್ತೆ ಗಾಬರಿಗೊಳಗಾದ ಸಣ್ಣ ಮಗು ಅಲ್ಲಿಂದ ಓಡಲು ಶುರು ಮಾಡುತ್ತದೆ.