ಆಟಿಕೆ ಜೊತೆ ಮಾತಲ್ಲಿ ಬ್ಯುಸಿಯಾದ ಪುಟಾಣಿ ಮತಿನ ಮಲ್ಲಿ: ವಿಡಿಯೋ ನೋಡಿ
ಕಾಕ್ಟಸ್ ಮಕ್ಕಳ ಪಾಲಿನ ಪುಟ್ಟ ಆಟಿಕೆ ಇದು ದೊಡ್ಡವರಿಗೂ ಮಜಾ ನೀಡುತ್ತದೆ ಏಕೆಂದರೆ ಇದು ನಿಮ್ಮ ಮಾತನ್ನು ರಿಪಿಟ್ ಮಾಡುವ ಜೊತೆ ಅದರ ದೇಹವನ್ನು ಬಳುಕಿಸಿ ಜೀವ ಇರುವ ವಸ್ತುವಿನಂತಾಡುತ್ತದೆ.
ಕಾಕ್ಟಸ್ ಎಂದ ಕೂಡಲೇ ಬಹುತೇಕರಿಗೆ ಮುಳ್ಳಿನ ಅಲಂಕಾರಿಕ ಗಿಡವೇ ತಲೆಯಲ್ಲಿ ಹೊಳೆಯುವುದು. ಆದರೆ ಕಾಕ್ಟಸ್ ಹೆಸರಿನ ಆಟಿಕೆ ಬಹುತೇಕ ಸಣ್ಣ ಮಕ್ಕಳಿರುವ ಪೋಷಕರಿಗೆ ತಿಳಿದಿರಬಹುದು. ಶಬ್ಧವನ್ನು ಅನುಕರಿಸುವ ಈ ಕಾಕ್ಟಸ್ ಮಕ್ಕಳ ಪಾಲಿನ ಪುಟ್ಟ ಆಟಿಕೆ ಇದು ದೊಡ್ಡವರಿಗೂ ಮಜಾ ನೀಡುತ್ತದೆ ಏಕೆಂದರೆ ಇದು ನಿಮ್ಮ ಮಾತನ್ನು ರಿಪಿಟ್ ಮಾಡುವ ಜೊತೆ ಅದರ ದೇಹವನ್ನು ಬಳುಕಿಸಿ ಜೀವ ಇರುವ ವಸ್ತುವಿನಂತಾಡುತ್ತದೆ. ಇದನ್ನು ಮೊದಲಿಗೆ ನೋಡಿದ್ದ ತೊದಲು ನುಡಿಯುವ ಕಂದಮ್ಮಗಳು ಹೆದರಿ ಅತ್ತಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿವೆ. ಅದೇ ರೀತಿ ಈಗ ಮಗುವೊಂದು ಫುಲ್ ಬ್ಯುಸಿಯಾಗಿ ಕಾಕ್ಟಸ್ ಜೊತೆ ಮಾತನಾಡುವ ವಿಡಿಯೋವೊಂದು ವೈರಲ್ ಆಗಿದ್ದು ನೊಡುಗರನ್ನು ನಗುವಂತೆ ಮಾಡುತ್ತಿದೆ.
ಸಾಮಾನ್ಯವಾಗಿ ತೊದಲು ನುಡಿಗಳನ್ನಾಡುವ ಮಕ್ಕಳು ಮಾತನಾಡುವುದನ್ನು ಕೇಳುವುದೇ ಒಂದು ಚೆಂದ. ಪುಟಾಣಿ ಮಕ್ಕಳು ಅವರದೇ ಭಾಷೆಯಲ್ಲಿ ಮಾತನಾಡುತ್ತಿರುತ್ತಾರೆ. ಇದಕ್ಕೆ ತಕ್ಕಂತೆ ಮಕ್ಕಳನ್ನು ರಂಜಿಸುವ ಆಟಿಕೆಗಳಿದ್ದರೆ ಪೋಷಕರಿಗೂ ತುಸು ನಿರಾಳವಾಗುತ್ತದೆ. ಏಕೆಂದರೆ ಮಕ್ಕಳು ನಗುತ್ತಾ ಆಟವಾಡುತ್ತಿದ್ದರೆ ಪೋಷಕರಿಗೆ ಅದೇ ದೊಡ್ಡ ಸಮಾಧಾನ ಹಾಗೆಯೇ ಇಲ್ಲಿ ಮಕ್ಕಳ ನುಡಿಗಳನ್ನು ತನ್ನ ಸೊಂಟ ಬಳಕಿಸುತ್ತಾ ಮರು ನುಡಿಯುವ ಆಟಿಕೆ ಮಕ್ಕಳು ಮಾತ್ರವಲ್ಲದೇ ಪೋಷಕರ ಪಾಲಿಗೂ ಪ್ರಿಯವಾಗಿದೆ. ಕಾಕ್ಟಸ್ ಜೊತೆ ಮಾತನಾಡಿ ಅಭ್ಯಾಸವಿರುವಂತೆ ಕಾಣುವ ಪುಟಾಣಿ ಮಗುವೊಂದು ಅದರೊಂದಿಗೆ ಬಿರುಸಿನ ಮಾತುಕತೆ ನಡೆಸುತ್ತಿದೆ. ಮಗುವಿನ ತೊದಲು ನುಡಿಗೆ ಈ ಆಟಿಕೆಯೂ ಪ್ರತಿಕ್ರಿಯಿಸುತ್ತಿದ್ದು, ಸೊಂಟ ಬಳಕಿಸುತ್ತಾ ಮಗು ಹೇಳಿದಂತೆ ಹೇಳುತ್ತಿದೆ. ಮಗು ಹಾಗೂ ಕಾಕ್ಟಸ್ ನಡುವಿನ ಸಂಭಾಷಣೆಯನ್ನು ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ವಯೋಲಿನ್ ನುಡಿಸುವವರ ನೋಡಿ ಓಡೋಡಿ ಬಂದು ತಬ್ಬಿಕೊಂಡ ಮುದ್ದು ಕಂದ ವಿಡಿಯೋ ವೈರಲ್
ವೈರಲ್ ವಿಡಿಯೋಗಳನ್ನು ಪೋಸ್ಟ್ ಮಾಡುವ ವೈರಲ್ ಹಗ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮಗು ಮಾತನಾಡುವ ಕಾಕ್ಟಸ್ ಜೊತೆ ಆಳವಾದ ಸಂಭಾಷಣೆಯಲ್ಲಿ ತೊಡಗಿದೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಮನೆಯ ಫ್ಲೋರ್‌ನಲ್ಲಿ ಮಗು ಕಾಲು ನೀಡಿ ಕುಳಿತಿದ್ದು, ಜೊತೆಗೆ ಕಾಕ್ಟಸ್ ಜೊತೆ ಬಹಳ ಮಹತ್ವದ ವಿಚಾರ ಎಂಬಂತೆ ಮಾತನಾಡುತ್ತಿದೆ. ಮಗುವಿನ ಮಾತಿಗೆ ಕಾಕ್ಟಸ್ ಸೊಂಟ ಬಳಕಿಸುತ್ತಾ ಉತ್ತರಿಸುತ್ತಿದೆ. ಸಾಮಾನ್ಯವಾಗಿ ಕಾಕ್ಟಸ್ ನಾವು ಏನು ಹೇಳುತ್ತೇವೆಯೋ ಅದನ್ನೇ ರಿಪಿಟ್ ಮಾಡುತ್ತದೆ. ಆದರೆ ಅದರ ಧ್ವನಿ ವಿಭಿನ್ನವಾಗಿದ್ದು, ನಗು ಮೂಡಿಸುತ್ತದೆ.
ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಮಕ್ಕಳು ಮಾತು ಕಲಿಯಲು ಕೂಡ ಇದು ಸಹಕಾರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಗು ಹೇಗೆ ಮಾತನಾಡುತ್ತಿದೆ ನೋಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಆಟಿಕೆಯೊಂದಿಗೆ ಮಗು ಮಾತನಾಡಲು ಆರಂಭಿಸಿದಾಗ ಹೇಗಿರುತ್ತದೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಎಲ್ಲರ ಮನರಂಜಿಸುತ್ತಿದೆ.
ಪೋಷಕರ ಅತಿ ಭದ್ರತೆ, ಬೆಂಕಿಗಾಹುತಿಯಾದ ಬೆಂಗಳೂರಿನ ಮುದ್ದು ಕಂದಮ್ಮಗಳು