ಪಹಲ್ಗಾಂ ದಾಳಿಯ ಮಾಸ್ಟರ್‌ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ ಉಗ್ರ ಹಾಶಿಮ್ ಮೂಸಾ ಇತ್ತೀಚೆಗೆ ಬದ್ಗಾಂನಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಈತ ಕಾಡಿನಲ್ಲಿ ಅವಿತಿದ್ದಾಗ ತನ್ನ ಗುಂಡಿನ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಜೇನುತುಪ್ಪವನ್ನು ಬಳಸುತ್ತಿದ್ದ ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಈತ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಭದ್ರತಾ ಪಡೆಯಲ್ಲೂ ಕೆಲಸ ಮಾಡಿದ್ದನು.
ನವದೆಹಲಿ: ಇತ್ತೀಚೆಗೆ ಜಮ್ಮು-ಕಾಶ್ಮೀರದ ಬದ್ಗಾಂಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಪಹಲ್ಗಾಂ ದಾಳಿಯ ಮಾಸ್ಟರ್‌ಮೈಂಡ್, ಲಷ್ಕರ್-ಎ -ತೊಯ್ಬಾದ ಉಗ್ರ ಹಾಶಿಮ್ ಮೂಸಾ, ಕಾಡಿನಲ್ಲಿ ಅವಿತಿದ್ದಾಗ ಗುಂಡಿನಿಂದ ಆದ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಆಯುರ್ವೇದ ಚಿಕಿತ್ಸಾ ವಿಧಾನವಾದ ಜೇನಿನ ಮೊರೆ ಹೋಗಿದ್ದ ಎಂದು ತಿಳಿದುಬಂದಿದೆ.
2021ರಿಂದ ಕಾಶ್ಮೀರದ ಕಾಡುಗಳಲ್ಲಿ ಅವಿತಿದ್ದ ಮೂಸಾ ಆ ಪ್ರದೇಶದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿದ್ದ. ಈ ವರ್ಷದ ಮೇ ತಿಂಗಳಲ್ಲಿ ನಡೆದ ಆಪರೇಷನ್ ಶೇರೋವಾಲಿ ವೇಳೆ ಆತ ಗಾಯಗೊಂಡಿದ್ದ. ಆದರೆ ತಾನಡಗಿದ್ದ ಸ್ಥಳಗಳಲ್ಲಿ ಭದ್ರತಾ ಪಡೆಗಳ ಸರ್ಪಗಾವಲಿದ್ದ ಕಾರಣ, ಚಿಕಿತ್ಸೆಗಾಗಿ ಹೊರಹೋಗುವುದು ಸಾಧ್ಯವಿರಲಿಲ್ಲ. ಹೀಗಾಗಿ ಜೇನುತುಪ್ಪವನ್ನೇ ಗಾಯಗಳಿಗೆ ಸವರಿಕೊಂಡು ಗುಣಪಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಜೇನು ಹಚ್ಚಿದ ಗಾಯಗಳ ಫೋಟೋಗಳು ಆತನ ಫೋನ್‌ನಲ್ಲಿ ಸಿಕ್ಕಿದ್ದು, ಅದನ್ನು ಪಾಕಿಸ್ತಾನದ ಹ್ಯಾಂಡಲರ್‌ಗಳಿಗೆ ಕಳಿಸಿದ್ದ ಎಂಬ ಶಂಕೆಯಿದೆ.
ಎಲ್ಲಾ ಉಗ್ರರು ಫಿನಿಶ್
ಕಳೆದ ವರ್ಷ ಏ.22ರಂದು ಕಾಶ್ಮೀರದ ಪಹಲ್ಗಾಂನ ಸುಂದರ ಕಣಿವೆಯಲ್ಲಿ 25 ಪ್ರವಾಸಿಗರು ಸೇರಿ 26 ಅಮಾಯಕರ ಸಾವಿಗೆ ಕಾರಣವಾಗಿದ್ದ ಉಗ್ರದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಕಳೆದ ತಿಂಗಳ ಕೊನೆಗೆ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ. ಗುಪ್ತಚರ ಮಾಹಿತಿಯನ್ನಾಧರಿಸಿ ಸೇನೆ, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ‘ಆಪರೇಷನ್ ಕೊರಗ್’ ಭಾಗವಾಗಿ ಬುದ್ಗಾಂನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಗ್ರರು ಹಾರಿಸಿದ ಗುಂಡಿಗೆ ಪ್ರತಿಯಾಗಿ ಭದ್ರತಾ ಪಡೆಗಳೂ ದಾಳಿ ನಡೆಸಿದ್ದರು. ಬುಧವಾರ ಹುಡುಕಾಟ ನಡೆಸಿದಾಗಿ ಪಾಲ್‌ಮೈದಾನ್‌ನಲ್ಲಿ ಮೂಸಾನ ದೇಹ ಹಾಗೂ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಸೇನೆ ತಿಳಿಸಿತ್ತು, ಇದರೊಂದಿಗೆ, ಪಹಲ್ಗಾಂ ದಾಳಿಯ ಹಿಂದಿದ್ದ ಎಲ್ಲಾ 4 ಪ್ರಮುಖ ಉಗ್ರರು ಮೃತಪಟ್ಟಿದ್ದಾರೆ.
ಮುಷರ್ರಫ್ ಭದ್ರತಾ ಪಡೆಯಲ್ಲಿದ್ದ:
ಎಲ್‌ಇಟಿಗೆ ಸೇರುವ ಮುನ್ನ ಮೂಸಾ, ಪಾಕ್ ಸೇನೆಯ ಅತ್ಯುನ್ನತ ‘ಸ್ಪೆಷಲ್ ಸರ್ವಿಸಸ್ ಗ್ರೂಪ್’ನ ಹವಾಲ್ದಾರ್ ಆಗಿದ್ದ ಹಾಗೂ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್‌ನ ಭದ್ರತಾ ಬೆಂಗಾವಲಿನ ಭಾಗವೂ ಆಗಿದ್ದ. 2021ರಲ್ಲಿ ಕಾಶ್ಮೀರಕ್ಕೆ ಕಾಲಿಟ್ಟಿದ್ದ ಇವನು, ಪಿರ್ ಪಂಜಾಲ್ ಕಣಿವೆ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ. ಅನೇಕ ಉಗ್ರದಾಳಿಗಳಲ್ಲಿ ಭಾಗವಹಿಸಿದ್ದ ಇವನ ತಲೆಗೆ ಪಹಲ್ಗಾಂ ದಾಳಿಯ ಬಳಿಕ ಜಮ್ಮು ಕಾಶ್ಮೀರ ಪೊಲೀಸರು 20 ಲಕ್ಷ ರು. ಬಹುಮಾನ ಘೋಷಿಸಿದ್ದರು. ಈ ತಿಂಗಳ ಆರಂಭದಲ್ಲಿ ಯೂಸ್‌ಮಾರ್ಗ್ ಬೆಟ್ಟಗಳಲ್ಲಿ ನಡೆದ ಭದ್ರತಾ ಕಾರ್ಯಾಚರಣೆಯಿಂದ ಮೂಸಾ ತಪ್ಪಿಸಿಕೊಂಡಿದ್ದ ಎಂದು ವರದಿಯಾಗಿತ್ತು.


