ಬೆಂಗಳೂರು (ಮೇ. 06):  ಯುಎಇಯಿಂದ ಅನಿವಾಸಿ ಭಾರತೀಯರನ್ನು ಕರೆತರುವ ಮೊದಲ ಪಟ್ಟಿಯಲ್ಲಿ ಗರ್ಭಿಣಿಯರನ್ನು ಸೇರಿಸುವಂತೆ ಕರ್ನಾಟಕ ಎನ್‌ಆರ್‌ಐ ಫೋರಂ ಮನವಿ ಮಾಡಿದೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಮಂಗಳವಾರ ಪತ್ರ ಬರೆದಿರುವ ಪ್ರವೀಣ್‌ ಶೆಟ್ಟಿ, ಯುಎಇಯಿಂದ ಅನಿವಾಸಿ ಭಾರತೀಯರನ್ನು ಕರೆತರುವ ವೇಳಾಪಟ್ಟಿಹಾಗೂ ಪ್ರಯಾಣದ ಸ್ಥಳಗಳನ್ನು ಸರ್ಕಾರ ಪ್ರಕಟಿಸಿದೆ. ಆದರೆ ಪಟ್ಟಿಯಲ್ಲಿ ಅನಿವಾಸಿ ಭಾರತೀಯ ಗರ್ಭಿಣಿ ಮಹಿಳೆಯರ ಹೆಸರಿಲ್ಲ. ನಾವು ಮಾಹಿತಿ ಕಲೆ ಹಾಕಿರುವ ಪ್ರಕಾರ ಅನಿವಾಸಿ ಭಾರತೀಯರಲ್ಲಿ 100ಕ್ಕೂ ಹೆಚ್ಚು ಗರ್ಭಿಣಿಯರಿದ್ದಾರೆ.

ಅವರನ್ನು ಭಾರತಕ್ಕೆ ತುರ್ತು ಕರೆತರುವ ಅಗತ್ಯತೆ ಇದೆ. ಹಾಗಾಗಿ ಎನ್‌ಆರ್‌ಐ ಕರೆತರುವ ಮೊದಲ ಪಟ್ಟಿಯಲ್ಲಿ ಗರ್ಭಿಣಿಯರನ್ನು ಸೇರಿಸಬೇಕು. ಈ ಕುರಿತು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಇಲಾಖೆಯ ಜೊತೆ ಕೂಡಲೇ ಮಾತನಾಡಬೇಕೆಂದು ಸರ್ಕಾರಕ್ಕೆ ಕೋರಿದ್ದಾರೆ.

ಅಮೆರಿಕದಲ್ಲಿ ಪ್ರತಿದಿನ 3000 ಸಾವು, 2 ಲಕ್ಷ ಕೇಸು?: ಆಂತರಿಕ ರಹಸ್ಯ ದಾಖಲೆ ಬಹಿರಂಗ!

ವಿಶೇಷ ವಿಮಾನಕ್ಕೆ ಕೇಂದ್ರ ಒಪ್ಪಿಗೆ:

ಪ್ರವೀಣ್‌ ಶೆಟ್ಟಿಅವರು ವಿಶೇಷ ವಿಮಾನದ ಅಗತ್ಯತೆ ಬಗ್ಗೆ ‘ಕನ್ನಡಪ್ರಭ’ದ ಸಹೋದರ ಸಂಸ್ಥೆ ಸುವರ್ಣ ನ್ಯೂಸ್‌ಗೆ ಕರೆ ಮಾಡಿ ಮನವಿ ಮಾಡಿದ್ದರು. ನಂತರ ಸುವರ್ಣ ನ್ಯೂಸ್‌ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿತ್ತು. ಇದಕ್ಕೆ ಸ್ಪಂದಿಸಿದ ಸದಾನಂದಗೌಡರು ಕೇಂದ್ರ ವಿದೇಶಾಂಗ ಸಚಿವಾಲಯದೊಂದಿಗೆ ಮಾತನಾಡಿ ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಿದ್ದಾರೆ. ಇದಕ್ಕಾಗಿ ಶೆಟ್ಟಿಅವರು ಸುವರ್ಣ ನ್ಯೂಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.