ಅಮೆರಿಕದಲ್ಲಿ ಪ್ರತಿದಿನ 3000 ಸಾವು, 2 ಲಕ್ಷ ಕೇಸು?: ಆಂತರಿಕ ರಹಸ್ಯ ದಾಖಲೆ ಬಹಿರಂಗ!
ಜೂ.1ರ ವೇಳೆಗೆ ಅಮೆರಿಕದಲ್ಲಿ ಪ್ರತಿದಿನ 3000 ಸಾವು, 2 ಲಕ್ಷ ಕೇಸು!| ಸರ್ಕಾರದ ಆಂತರಿಕ ರಹಸ್ಯ ದಾಖಲೆ ಬಹಿರಂಗ
ವಾಷಿಂಗ್ಟನ್(ಮೇ.06): ಜೂನ್ 1ರ ವೇಳೆಗೆ ಅಮೆರಿಕದಲ್ಲಿ ಪ್ರತಿದಿನ 3000 ಜನರು ಕೊರೋನಾದಿಂದ ಸಾವನ್ನಪ್ಪಬಹುದು ಮತ್ತು ಪ್ರತಿದಿನ 2 ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗಬಹುದು ಎಂಬ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಇದು ಅಮೆರಿಕ ಸರ್ಕಾರದಲ್ಲೇ ಆಂತರಿಕವಾಗಿ ವಿನಿಮಯಗೊಂಡಿರುವ ರಹಸ್ಯ ವರದಿಯಾಗಿದ್ದು, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್‌ನಂತಹ ಪ್ರಮುಖ ಪತ್ರಿಕೆಗಳಿಗೆ ಸೋರಿಕೆಯಾಗಿದೆ.
ಕೊರೋನಾ ತಾಂಡವ: ಅಮೆರಿಕದಲ್ಲಿ ದುಡ್ಡಿಗೆ ಬಲೆ, ಭಾರತದಲ್ಲಿ ಜೀವಕ್ಕೆ ಬೆಲೆ!
ಸದ್ಯ ಅಮೆರಿಕದಲ್ಲಿ ಪ್ರತಿದಿನ ಸರಾಸರಿ 1300 ಜನರು ಕೊರೋನಾದಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿದಿನ ಸುಮಾರು 25,000 ಜನರು ಹೊಸತಾಗಿ ಕೊರೋನಾ ಸೋಂಕಿತರಾಗುತ್ತಿದ್ದಾರೆ. ಈ ಸಂಖ್ಯೆ ಇನ್ನೊಂದು ತಿಂಗಳೊಳಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಅಮೆರಿಕದ ಪ್ರತಿಷ್ಠಿತ ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗಗಳ ತಜ್ಞರು ವರದಿ ಸಿದ್ಧಪಡಿಸಿದ್ದಾರೆ. ಈ ವರದಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್‌ನಂತಹ ಉನ್ನತ ಸರ್ಕಾರಿ ಸಂಸ್ಥೆಗಳು ಹಾಗೂ ಅಮೆರಿಕ ಸರ್ಕಾರದ ನಡುವೆ ರಹಸ್ಯವಾಗಿ ವಿನಿಮಯವಾಗಿದೆ.
ಈಗಾಗಲೇ ಅಮೆರಿಕದಲ್ಲಿ ಸುಮಾರು 12 ಲಕ್ಷ ಕೊರೋನಾ ಸೋಂಕಿತರಿದ್ದು, 69,000 ಜನರು ಮೃತಪಟ್ಟಿದ್ದಾರೆ. ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ಹಲವು ರಾಜ್ಯಗಳು ಜನಸಂಚಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ತೆಗೆದುಹಾಕುತ್ತಿವೆ.
ಅಮೆರಿಕ ವೈರಸ್ ತಂಡಕ್ಕೆ ವುಹಾನ್ ಭೇಟಿ ಅವಕಾಶಕ್ಕೆ ಚೀನಾ ನಕಾರ!
ಭರ್ಜರಿ ಸಾಲ:
ಕೊರೋನಾ ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕ ಬಹುತೇಕ ದಿವಾಳಿಯಾಗಿದ್ದು, 2.9 ಲಕ್ಷ ಕೋಟಿ ಡಾಲರ್ (ಸುಮಾರು 218 ಲಕ್ಷ ಕೋಟಿ ರು.) ಸಾಲ ಮಾಡಲು ನಿರ್ಧರಿಸಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇಷ್ಟುಮೊತ್ತವನ್ನು ಖಾಸಗಿ ಸಂಸ್ಥೆಗಳಿಂದ ಸಾಲ ಪಡೆಯಲು ಅಮೆರಿಕದ ಸರ್ಕಾರ ಮುಂದಾಗಿದೆ. ಇದು 2008ರ ಜಾಗತಿಕ ಆರ್ಥಿಕ ಕುಸಿತದ ವೇಳೆ ತ್ರೈಮಾಸಿಕವೊಂದರಲ್ಲಿ ಅಮೆರಿಕ ಸರ್ಕಾರ ಮಾಡಿದ್ದ ಸಾಲಕ್ಕಿಂತ ಸುಮಾರು 5 ಪಟ್ಟು ಹೆಚ್ಚು.